ಸೋಮವಾರಪೇಟೆ, ಡಿ. 19: ಇತ್ತೀಚೆಗೆ ಸಂಭವಿಸಿದ ವಾಹನ ಅಪಘಾತದಲ್ಲಿ ತನ್ನ ಬೇಕರಿಯನ್ನು ಕಳೆದುಕೊಂಡಿದ್ದ ವರ್ತಕನಿಗೆ ಇಲ್ಲಿನ ಚೇಂಬರ್ ಆಫ್ ಕಾಮರ್ಸ್‍ನ ಪದಾಧಿಕಾರಿಗಳು ಧನ ಸಹಾಯ ನೀಡಿ ಮಾನವೀಯತೆ ಮೆರೆದಿದ್ದಾರೆ.ಕಳೆದ ತಾ. 6ರಂದು ಸಂಜೆ ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ ಅವರಿಗೆ ಸೇರಿದ ಸ್ಕಾರ್ಪಿಯೋ ವಾಹನ ಚಾಲಕನ ನಿಯಂತ್ರಣ ತಪ್ಪಿ, ಕ್ಲಬ್ ರಸ್ತೆಯ ಶ್ರೀನಿವಾಸ್ ಎಂಬವರಿಗೆ ಸೇರಿದ ಬೇಕರಿಗೆ ನುಗ್ಗಿತ್ತು. ಪರಿಣಾಮ ಬೇಕರಿಯಲ್ಲಿದ್ದ ಲಕ್ಷಾಂತರ ರೂಪಾಯಿಯ ತಿಂಡಿ ತಿನಿಸು, ಪೀಠೋಪಕರಣಗಳು ಧ್ವಂಸಗೊಂಡಿ ದ್ದರೆ, ಅದೃಷ್ಟವಶಾತ್ ಶ್ರೀನಿವಾಸ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಬೇಕರಿಯ ಒಳಗಿದ್ದ ತಿಂಡಿ ತಿನಿಸು, ಪೀಠೋಪಕರಣಗಳು ಸಂಪೂರ್ಣ ಧ್ವಂಸವಾಗಿ 3 ಲಕ್ಷಕ್ಕೂ ಅಧಿಕ ನಷ್ಟ ಅನುಭವಿಸಿದ್ದ ಶ್ರೀನಿವಾಸ್ ಅವರಿಗೆ, ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ ಅವರು ಈಗಾಗಲೇ 50 ಸಾವಿರ ಸಹಾಯಧನ ನೀಡಿದ್ದು, ಇನ್ನೂ ಹೆಚ್ಚಿನ ಪರಿಹಾರ ನೀಡುವದಾಗಿ ಭರವಸೆ ನೀಡಿದ್ದಾರೆ.

ಈ ಮಧ್ಯೆ ವರ್ತಕರ ಸಂಘದ ವತಿಯಿಂದ ರೂ. 25 ಸಾವಿರ ಹಾಗೂ ನಗರದ ವರ್ತಕ ಬಂಧುಗಳಿಂದ ಸಂಗ್ರಹಿಸಿದ ರೂ. 30 ಸಾವಿರ ಸೇರಿದಂತೆ ಒಟ್ಟು 55 ಸಾವಿರ ಹಣವನ್ನು ಸೋಮವಾರಪೇಟೆ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಪ್ರಸನ್ನಕುಮಾರ್ ಸೇರಿದಂತೆ ಪದಾಧಿಕಾರಿಗಳಾದ ಮನುಕುಮಾರ್ ರೈ, ಪ್ರಮೋದ್, ಸುಲೇಮಾನ್, ರಘು, ಮಸಗೋಡು ಸತೀಶ್, ಜನಾರ್ಧನ್, ಧನು, ಮಧುಸೂದನ್, ಶ್ರೀಧರ್, ಮುರುಳಿ ಸೇರಿದಂತೆ ಇತರರು ಹಸ್ತಾಂತರಿಸಿದರು.