ಗೋಣಿಕೊಪ್ಪಲು, ನ. 17: ಬಲ್ಯಮುಂಡೂರು ಗ್ರಾಮ ಸಭೆಯು ಗ್ರಾ.ಪಂ.ಅಧ್ಯಕ್ಷ ಕೆ.ಸಿ.ಪ್ರಕಾಶ್ ಹಾಗೂ ನೋಡೆಲ್ ಅಧಿಕಾರಿ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಸಿ.ಲಕ್ಷ್ಮಯ್ಯ ಅವರ ಸಮಕ್ಷಮದಲ್ಲಿ ತಾ.15 ರಂದು ಬಲ್ಯಮುಂಡೂರು ಸಮೀಪ ತೂಚಮಕೇರಿಯ ಧವಸ ಭಂಡಾರ ಆವರಣದಲ್ಲಿ ನಿಗದಿ ಯಾಗಿತ್ತು. ಪೂರ್ವಾಹ್ನ 11 ಗಂಟೆಗೆ ಸಭೆ ಆರಂಭಗೊಂಡಿದ್ದರೂ, ಗ್ರಾಮ ಲೆಕ್ಕಿಗರು, ಪಂಚಾಯತ್‍ರಾಜ್ ಇಂಜಿನಿಯರಿಂಗ್ ವಿಭಾಗದ ಕಿರಿಯ ಅಭಿಯಂತರ ಹಾಗೂ ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹೊರತು ಪಡಿಸಿ ಬೇರೆ ಯಾವದೇ ಅಧಿಕಾರಿಗಳು ಹಾಜರಾಗದ ಹಿನ್ನೆಲೆ ಗ್ರಾಮಸ್ಥರ ಒತ್ತಡಕ್ಕೆ ಮಣಿದು ಗ್ರಾಮಸಭೆಯನ್ನು ರದ್ದುಪಡಿಸಲಾದ ಘಟನೆ ನಡೆದಿದೆ. ಸಭೆಯಲ್ಲಿ ಜಿ.ಪಂ. ಸದಸ್ಯೆ ಶ್ರೀಜಾ ಸಾಜಿ ಭಾಗವಹಿಸಿದ್ದರು. ಬಲ್ಯಮುಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರ ಪರಿಸ್ಥಿತಿ ಇದ್ದು, ಅಧಿಕಾರಿಗಳ ಗೈರಿನಿಂದಾಗಿ ಗ್ರಾಮದ ಅಭಿವೃದ್ಧಿ ಕುಂಠಿತಗೊಳ್ಳುವಂತಾಗಿದೆ. ಮುಂದಿನ ಗ್ರಾಮಸಭೆಗೂ ಅಧಿಕಾರಿಗಳು ಗೈರು ಹಾಜರಾದಲ್ಲಿ ವೀರಾಜಪೇಟೆ ತಾಲೂಕು ಪಂಚಾಯಿತಿ ಕಚೇರಿ ಇಓ ಕಚೇರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಓ ಕಚೇರಿ ಮುಂಭಾಗ ಗ್ರಾಮಸ್ಥರು, ಸದಸ್ಯರುಗಳು ಸೇರಿ ಪ್ರತಿಭಟನೆ ಹಮ್ಮಿಕೊಳ್ಳುವ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಗ್ರಾಮಸಭೆಗೆ ಪೆÇಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆಹಾರ ಇಲಾಖೆ, ಅರಣ್ಯ, ಸೆಸ್ಕ್, ಸಣ್ಣ ನೀರಾವರಿ ಹಾಗೂ ತೋಟಗಾರಿಕಾ ಇಲಾಖೆಗೂ ಕಚೇರಿಗೆ ಮುದ್ದಾಂ ಪತ್ರ ತಲಪಿಸಿದ್ದಾಗಿಯೂ ಸಭೆಗೆ ಗೈರು ಹಾಜರಾದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಲಾಯಿತು.

ಸುಮಾರು 200ಕ್ಕೂ ಅಧಿಕ ಗ್ರಾಮಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದು ಸದಸ್ಯೆ ಇಂದ್ರಿ, ಗ್ರಾಮಸ್ಥರಾದ ಡಿ.ಜಿ. ಮಂಜು, ಎಂ.ಎನ್. ಚಂದ್ರ, ಸಿ.ಎಂ. ಚಂಗಪ್ಪ ಮುಂತಾದವರು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- ಟಿ.ಎಲ್.ಎಸ್.