ಮಡಿಕೇರಿ, ಆ. 16: ಅಖಂಡ ಭಾರತ ನಿರ್ಮಾಣಕ್ಕೆ ಯುವ ಪೀಳಿಗೆ ಸಂಕಲ್ಪ ತೊಡಬೇಕೆಂದು ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿದ್ದ ತಿರಂಗಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು ಕರೆ ನೀಡಿದರು.ಬಿಜೆಪಿ ಯುವ ಮೋರ್ಚಾ ವತಿಯಿಂದ ರಾಷ್ಟ್ರಾದ್ಯಂತ ಹಮ್ಮಿಕೊಂಡಿರುವ ತಿರಂಗ ಯಾತ್ರೆ ಇಂದು ನಡೆಯಿತು. ಗಡಿಭಾಗ ಕುಟ್ಟ, ಭಾಗಮಂಡಲ, ಕುಶಾಲನಗರ ಹಾಗೂ ಕೊಡ್ಲಿಪೇಟೆ ಕಡೆಗಳಿಂದ ಹೊರಟ ವಾಹನ ಜಾಥಾ ಮಡಿಕೇರಿಗೆ ತಲಪಿದ ಬಳಿಕ ಕೊಡವ ಸಮಾಜದಲ್ಲಿ ಸಭಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಮುಖ್ಯ ಅತಿಥಿಯಾಗಿದ್ದ ಯುವ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಸಂಸದ ಪ್ರತಾಪ್‍ಸಿಂಹ ಮಾತನಾಡಿ, ರಾಷ್ಟ್ರದಲ್ಲಿ ಮೋದಿ ಸರಕಾರ ಬಂದ ಬಳಿಕ ಅನೇಕ ಅಭಿವೃದ್ಧಿಗಳಾಗಿವೆ. ಹತ್ತು ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, ಕಳೆದ 69ವರ್ಷಗಳಲ್ಲಿ ಆಗದಿದ್ದುದು 2ವರ್ಷದಲ್ಲಿ ಆಗಿದೆ. ಮುಂದಿನ 5ವರ್ಷಗಳಲ್ಲಿ 50ಸಾವಿರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಗುರಿ ಹೊಂದಲಾಗಿದೆ. ಉಜ್ವಲ ಯೋಜನೆಯಡಿ 2019ರ ವೇಳೆಗೆ ಪ್ರತಿ ಹಳ್ಳಿಗಳನ್ನು ಹೊಣೆ ಮುಕ್ತವಾಗಿಸುವ ಉದ್ದೇಶ ಹೊಂದಲಾಗಿದೆ. ತಾಯಿಯ ಬಗ್ಗೆ ಯೋಚನೆ ಮಾಡಿದವರು ಮೋದಿ ಎಂದು ಹೇಳಿದರು.

ವಿಶ್ವದ ಎಲ್ಲಾ ರಾಷ್ಟ್ರಗಳು ಆರ್ಥಿಕವಾಗಿ ಕುಸಿತ ಕಂಡಿದ್ದರೂ ಭಾರತದ ಸ್ಥಿತಿ ಪ್ರಗತಿಯಲ್ಲಿದೆ. ನಮ್ಮಲ್ಲಿ ದೇಶ ಒಡೆಯುವ ಮಂದಿ ಇದ್ದಾರೆ. ಆದರೆ ರಾಷ್ಟ್ರಾಭಿಮಾನ ಇರುವವರು ಅದಕ್ಕಿಂತಲೂ ಹೆಚ್ಚಿಗೆ ಇದ್ದಾರೆ. ಅಂತಹವರನ್ನು ಬೆಂಬಲಿಸಬೇಕೆಂದು ಹೇಳಿದ ಅವರು ಭಕ್ತಿಯ, ನಿಷ್ಠೆಯ, ಪ್ರೀತಿಯ ಭಾರತ ಕಟ್ಟೋಣವೆಂದರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಅಭಿಮಾನ, ಸ್ವಾಭಿಮಾನ ಇರುವ ಅಖಂಡ ಭಾರತ ನಿರ್ಮಾಣ ಯುವಕರ ಕೈಯ್ಯಲಿದೆ. ಎಲ್ಲರಲ್ಲೂ ಇದೇ ರೀತಿಯ ಭಾವನೆ ಬರಬೇಕೆಂಬ ಉದ್ದೇಶದೊಂದಿಗೆ ಯುವ ಮೋರ್ಚಾದಿಂದ ಪರಿವಾರದ ಶಾಖೆಗಳೊಡಗೂ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವದಾಗಿ ಹೇಳಿದರು. ಪ್ರಸ್ತುತ ಹಿಂದೂಪರ ಸಂಘಟನೆಗಳ ಕಾರ್ಯಕರ್ತರನ್ನು ಗುರಿ ಮಾಡಲಾಗುತ್ತಿದ್ದು, ಮೊನ್ನೆಯ ಕುಶಾಲನಗರದ ಘಟನೆ ಸಾಕ್ಷಿಯಾಗಿದೆ. ಕೋಮುಭಾವನೆ ಕೆರಳಿಸುವ ಕೆಲಸ ಮಾಡಲಾಗುತ್ತಿದೆ. ದೇಶದ ಮೇಲೆ ಬಾಹ್ಯವಾಗಿ ಹೊರಗಿನಿಂದ ಬೆದರಿಕೆ ಸಾಕಷ್ಟಿದೆ. ಆಂತರಿಕವಾಗಿಯೂ ಕೂಡ ದೇಶವನ್ನು ಛಿದ್ರಮಾಡುವ, ಸಮಾಜದಲ್ಲಿ ಒಡಕು ಮೂಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಇಂತವುಗಳ ಬಗ್ಗೆ ಜನಜಾಗೃತಿ ಮೂಡಿಸಬೇಕಿದೆ. ತಿರಂಗ ಧ್ವಜ ಹಿಡಿದು ಧ್ವಜದ ಬಗ್ಗೆ, ದೇಶದ ಬಗ್ಗೆ ಅಭಿಮಾನ ಮೂಡಿಸುವ ಕಾರ್ಯ ಮಾಡಬೇಕಿದೆ ಎಂದರು. ತಾ. 18 ರಂದು ಮಹಿಳಾ ಮೋರ್ಚಾದಿಂದ ರಕ್ಷಾಬಂಧನ, ತಾ. 21ರಂದು ರೈತ ಮೋರ್ಚಾದಿಂದ ಪರಿಸರ ಉಳಿಸುವ ನಿಟ್ಟಿನಲ್ಲಿ ಗಿಡ ನೇಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಸಹಕಾರ ನೀಡಬೇಕೆಂದು ಕೋರಿದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಚಿ.ನಾ. ಸೋಮೇಶ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಮಾಡದೆ ದೇಶದ ಮೇಲಿನ ಪ್ರೀತಿಯನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿದ್ದಾರೆ. ಕುಟುಂಬ ರಾಜಕೀಯ ಮಾಡಿಕೊಂಡು ಬರುತ್ತಿದ್ದವರು ಇದನ್ನು ಸಹಿಸಲಾಗದೆ ಅಪಪ್ರಚಾರ ಮಾಡುತ್ತಿದ್ದಾರೆಂದು ಹೇಳಿದರು.

ಪಂಜು ಹಾಗೂ ರಾಷ್ಟ್ರಧ್ವಜ ಆಂತರ್ಯದ ಭಾವನೆಯನ್ನು ಬಡಿದೆಬ್ಬಿಸುತ್ತದೆ. ರಾಷ್ಟ್ರದ್ರೋಹಿ ಸಂಘಟನೆಗಳಿಗೆ ಎಚ್ಚರಿಕೆಯ ಸಂದೇಶ ನೀಡುತ್ತದೆ ಎಂದು ಹೇಳಿದರು. ಸತ್ಯ, ಪ್ರೀತಿ, ಶಾಂತಿಯ ಸಂಕೇತವಾದ ತಿರಂಗದ ಮಹತ್ವವನ್ನು ಎಲ್ಲರಿಗೂ ತಿಳಿಹೇಳಬೇಕಿದೆ. ಭ್ರಷ್ಟ ವ್ಯವಸ್ಥೆಯ ಮೂಲೋಚ್ಛಾಟನೆಗೆ ಪಣತೊಡಬೇಕೆಂದು ಹೇಳಿದರು.

ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಮನು ಮುತ್ತಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಇದ್ದರು. ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಾಳನ ರವಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಅಧ್ಯಕ್ಷ ಧನಂಜಯ ನಿರೂಪಿಸಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಸ್ವಾಗತಿಸಿದರು.