ಕೂಡಿಗೆ, ಸೆ. 13: ಕೂಡಿಗೆ ಸರಕಾರಿ ಪ್ರಾಥಮಿಕ ಶಾಲೆಗೆ ನೆಡ್‍ಕಮಾಂಡೆಡ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಅಂತರರಾಷ್ಟ್ರೀಯ ಕಾಫಿ ಸಂಸ್ಥೆಯ ಪ್ರಮುಖರಾದ ಹಾಲೆಂಡ್‍ನ ಬ್ರೋನ್, ಫ್ರಾನ್ಸ್‍ನ ಜಾನ್, ಕೂಡ್ಲೂರಿನ ಕೈಗಾರಿಕಾ ಕೇಂದ್ರದಲ್ಲಿರುವ ನೆಡ್‍ಕಮಾಂಡೆಡ್ ಕಾಫಿ ಘಟಕದ ಎಕ್ಸಿಕ್ಯೂಟಿವ್ ನಿರ್ದೇಶಕ ಎ.ಬಿ. ಹರೀಶ್, ವ್ಯವಸ್ಥಾಪಕ ಅನಿಲ್ ತಂಡ ಕೂಡಿಗೆ ಸರಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಸಂಸ್ಥೆಯ ವತಿಯಿಂದ ಶಾಲೆಯನ್ನು ದತ್ತು ತೆಗೆದುಕೊಂಡು ಶಾಲೆಯ ಮೂಲಭೂತ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದರು.

ಶಾಲಾ ಆವರಣಕ್ಕೆ ತಡೆಗೋಡೆ, ಶಾಲಾ ಕೊಠಡಿ, ಗ್ರಂಥಾಲಯ ನಿರ್ಮಾಣಗೊಳಿಸುವ ಬಗ್ಗೆ ಮಕ್ಕಳಿಗೆ ಅನುಕೂಲವಾಗುವಂತೆ ವಿಜ್ಞಾನದ ಪರಿಕರಗಳ ಜೋಡಣೆಗೆ ವಿಜ್ಞಾನ ಕೊಠಡಿ ಸೇರಿದಂತೆ ಶಾಲೆಯನ್ನು ಅಭಿವೃದ್ಧಿ ಪಡಿಸುವ ಉದ್ದೇಶ ಹೊಂದಿದ್ದು, ಮುಂದಿನ ವಾರಗಳಲ್ಲಿ ಶಾಲೆಯ ಅಭಿವೃದ್ಧಿ ಪಡಿಸಲು ಕಾರ್ಯೋನ್ಮುಖರಾಗುವ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭ ಶಾಲೆಯ ಮುಖ್ಯೋಪಾಧ್ಯಾಯಿನಿ ಪಾರ್ವತಿ, ಶಾಲಾಭಿವೃದ್ಧಿ ಸಮಿತಿಯ ಸದಸ್ಯ ಕೆ.ಕೆ. ನಾಗರಾಜ ಶೆಟ್ಟಿ, ಸಹ ಶಿಕ್ಷಕರುಗಳಾದ ವೀರಭದ್ರಪ್ಪ, ಭಾಗ್ಯ, ವಿಜಯಲಕ್ಷ್ಮಿ, ವಾಣಿ ಇದ್ದರು.