ಕುಶಾಲನಗರ, ಜು. 23: ಹಾರಂಗಿ ಅಣೆಕಟ್ಟೆ ಬಳಿ ನಿರ್ಮಾಣಗೊಂಡಿರುವ ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರದ 2 ಘಟಕಗಳಲ್ಲಿ ಒಟ್ಟು 10.5 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.

ಹಾರಂಗಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ನೀರನ್ನು ಬಳಸಿಕೊಂಡು ಈಡಿಸಿಎಲ್ ವಿದ್ಯುತ್ ಉತ್ಪಾದನಾ ಘಟಕ ಮೂಲಕ ಹಾಯಿಸಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಕೇಂದ್ರದ ಪ್ರಮುಖ ಘಟಕದಲ್ಲಿ ಎರಡು ಯಂತ್ರಗಳಲ್ಲಿ ಒಂದು ಕೆಟ್ಟು ನಿಂತಿದ್ದು, ಪ್ರಸಕ್ತ 4.5 ಮೆಗಾವ್ಯಾಟ್ ಪ್ರಮಾಣದ ವಿದ್ಯುತ್ ಉತ್ಪಾದನೆಯಾಗುತ್ತಿದ್ದರೆ ಎರಡನೇ ಘಟಕದಲ್ಲಿ 6 ಮೆ.ವ್ಯಾ ಪ್ರಮಾಣದ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ಘಟಕದ ಪ್ರಧಾನ ವ್ಯವಸ್ಥಾಪಕ ಶಿವಸುಬ್ರಮಣ್ಯಂ ತಿಳಿಸಿದ್ದಾರೆ. ಈ ಸಾಲಿನಲ್ಲಿ ಒಟ್ಟು 30 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆಯ ಗುರಿ ಹೊಂದಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಕಳೆದ ಸಾಲಿನಲ್ಲಿ ಘಟಕದ ದುರಸ್ತಿಯಾದ ಕಾರಣ ನಿಗದಿತ ಗುರಿ ಮುಟ್ಟಲು ಸಾಧ್ಯವಾಗಿಲ್ಲ ಎಂದು ತಿಳಿಸಿದ ಅವರು, ಉತ್ತಮ ಮಳೆಯಾದಲ್ಲಿ ಈ ಸಾಲಿನ ಗುರಿ ತಲಪಬಹುದು ಎಂದಿದ್ದಾರೆ.