ಮಡಿಕೇರಿ, ಜು. 23: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಸಂಸ್ಥೆಯ ಆಶ್ರಯದಲ್ಲಿ ಕೊಡಗು ಜಿಲ್ಲೆಯ ಸಮಸ್ತ ಮದ್ರಸಗಳ ಅಧ್ಯಾಪಕರುಗಳಿಗಾಗಿ ಒಂದು ದಿನದ ವಿಶೇಷ ಅಧ್ಯಯನ ಶಿಬಿರವನ್ನು ಸಿದ್ದಾಪುರದ ನೆಲ್ಲಿಹುದಿಕೇರಿಯ ದಾರುಸ್ಸಲಾಂ ಮದ್ರಸದಲ್ಲಿ ತಾ. 25 ರಂದು ಆಯೋಜಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮದ್ರಸಗಳ ಸಮಸ್ತ ಅಧ್ಯಾಪಕರುಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ತಮ್ಲಿಕ್ ದಾರಿಮಿ ಮದ್ರಸಗಳ ಕಾರ್ಯ ಚಟುವಟಿಕೆ ಮತ್ತು ವಿಶೇಷ ಶಿಬಿರದ ಕುರಿತು ಮಾಹಿತಿ ನೀಡಿದರು. ಬೆಳಿಗ್ಗೆ 8 ಗಂಟೆಗೆ ಶಿಬಿರ ಆರಂಭಗೊಳ್ಳಲಿದ್ದು, ಜಿಲ್ಲೆಯ ಎಲ್ಲಾ ಮದ್ರಸಗಳ ಅಧ್ಯಾಪಕರುಗಳು ಪಾಲ್ಗೊಳ್ಳಲಿದ್ದಾರೆ. ಅಂದು ಮದ್ರಸಗಳಿಗೆ ರಜೆ ಇರುವದಾಗಿ ಅವರು ತಿಳಿಸಿದರು. ಒಂದನೇ ತರಗತಿಯಿಂದ ಮೂರನೇ ತರಗತಿಯವರೆಗಿನ ಮದ್ರಸ ಪಠ್ಯ ಪುಸ್ತಕ ಬದಲಾವಣೆಯಾದ ಹಿನ್ನೆಲೆಯಲ್ಲಿ ಈ ಅಧ್ಯಯನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಮಡಿಕೇರಿ, ವೀರಾಜಪೇಟೆ, ಸಿದ್ದಾಪುರ ಸೇರಿದಂತೆ ಮೂರು ವಲಯಗಳಾಗಿ ವಿಂಗಡಿಸಲಾಗಿದ್ದು, ಎರಡು ತಿಂಗಳಿಗೊಮ್ಮೆ ಸಭೆಗಳು, ತರಗತಿಗಳು ಹಾಗೂ ಮನಃಶಾಸ್ತ್ರ ವಿಶೇಷ ಶಿಬಿರಗಳು ನಡೆಯುತ್ತವೆ ಎಂದು ತಮ್ಲಿಕ್ ದಾರಿಮಿ ಹೇಳಿದರು.

ಮಾನವ ಧಾರ್ಮಿಕ ಮೌಲ್ಯಗಳನ್ನು ಅನುಸರಿಸಿ ಮುನ್ನಡೆದರೆ, ಜೀವನ ಮತ್ತು ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯವಿದೆ. ಮದ್ರಸಗಳು ಶಾಂತಿ ಸೌಹಾರ್ಧತೆಯನ್ನು ಕಲಿಸುವ ಕೇಂದ್ರವಾಗಿದೆಯೇ ಹೊರತು ಭಯೋತ್ಪಾದಕರ ತರಬೇತಿ ಕೇಂದ್ರವಲ್ಲವೆಂದು ಅವರು ಸ್ಪಷ್ಟ ಪಡಿಸಿದರು. ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಇದರ ಆಶ್ರಯದಲ್ಲಿ 1951 ರಲ್ಲಿ ವ್ಯವಸ್ಥಿತವಾದ ಮದ್ರಸ ಸಂವಿಧಾನಕ್ಕೆ ರೂಪುರೇಷೆ ನೀಡಲಾಯಿತು. ಇದೀಗ ಸಮಸ್ತ ಕೇರಳ ವಿದ್ಯಾಭ್ಯಾಸ ಬೋರ್ಡ್ ಇದರ ಆಶ್ರಯದಲ್ಲಿ 9,629 ಮದ್ರಸಗಳು ಕಾರ್ಯನಿರ್ವಹಿಸುತ್ತಿವೆ.

ಸುಮಾರು 12 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 1 ಲಕ್ಷಕ್ಕೂ ಅಧಿಕ ಅಧ್ಯಾಪಕರುಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಹಾಗೂ 468 ವಲಯಗಳು ಶಿಸ್ತು ಬದ್ಧವಾಗಿ ನಡೆಯುತ್ತಿವೆ. ಲಂಡನ್, ಓಮನ್, ಕತಾರ್, ದುಬೈ, ಕೀನ್ಯಾ ಹಾಗೂ ಇನ್ನಿತರ ದೇಶ-ವಿದೇಶಗಳಲ್ಲಿ ಸಮಸ್ತದ ಮದ್ರಸಗಳು ಕಾರ್ಯನಿರ್ವಹಿಸುತ್ತಿದ್ದು ವಿಶ್ವದ ಶಾಂತಿಯನ್ನು ಬಯಸುತ್ತಿವೆ. ಇದೀಗ ದೇಶ-ವಿದೇಶಗಳಲ್ಲಿ ಐಸಿಸ್ ಎಂಬ ಉಗ್ರ ಸಂಘಟನೆಯ ಅಟ್ಟಹಾಸ ಮುಗಿಲು ಮುಟ್ಟಿದೆ.

ಈ ಸಂಘಟನೆ ಇಸ್ಲಾಂ ಧರ್ಮದ ಬಗ್ಗೆ ಮಾತನಾಡುವ ಹಕ್ಕನ್ನೇ ಕಳೆದುಕೊಂಡಿದ್ದು, ಇದನ್ನು ಬೇರು ಸಹಿತ ನಿರ್ಮೂಲನೆ ಮಾಡುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಮ್ಲಿಕ್ ದಾರಿಮಿ ಅಭಿಪ್ರಾಯಪಟ್ಟರು.

ಗೋಷ್ಠಿಯಲ್ಲಿ ಅಧ್ಯಕ್ಷ ಉಮ್ಮರ್ ಫೈಜಿó, ಪ್ರಮುಖರಾದ ಹನೀಫ್ ಮುಸ್ಲಿಯಾರ್ ಹಾಗೂ ಇಕ್ಬಾಲ್ ಉಪಸ್ಥಿತರಿದ್ದರು.