ಸೋಮವಾರಪೇಟೆ, ಆ. 20: ಕೊಡಗಿನ ಬೃಹತ್ ಕಾಫಿ ತೋಟ ಹಾಗೂ ಪ್ರತಿಷ್ಠಿತ ಕಂಪೆನಿಗಳ ಎಸ್ಟೇಟ್‍ಗಳಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಅಸ್ಸಾಮಿಗರ ಹೆಸರಿನಲ್ಲಿ ಬೀಡುಬಿಟ್ಟಿದ್ದು, ಇವರ ಬಗ್ಗೆ ತನಿಖೆ ನಡೆಸಿ ದೇಶದಿಂದಲೇ ಹೊರಹಾಕಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ತಾಲೂಕು ಹಿಂದೂ ಜಾಗರಣಾ ವೇದಿಕೆ, ತಪ್ಪಿದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವದಾಗಿ ಎಚ್ಚರಿಸಿದೆ.

ಈ ಬಗ್ಗೆ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ನಂತರ ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ತಾಲೂಕು ಸಂಚಾಲಕ ದರ್ಶನ್ ಜೋಯಪ್ಪ, ಸಮೀಪದ ಕೋವರ್‍ಕೊಲ್ಲಿ ಸಮೀಪದ ಟಾಟಾ ಕಾಫಿ ಎಸ್ಟೇಟ್‍ನಲ್ಲಿ ಸುಮಾರು 180ಕ್ಕೂ ಅಧಿಕ ಅಕ್ರಮ ವಲಸಿಗರು ನೆಲೆಸಿದ್ದಾರೆ. ಮೇಲ್ನೋಟಕ್ಕೆ ಇರುವ ಬಾಂಗ್ಲಾ ದೇಶಿಗರಂತೆ ಕಾಣಬರುತ್ತಿದ್ದು, ಇವರುಗಳ ಪೂರ್ವಾಪರದ ಬಗ್ಗೆ ಕಟ್ಟುನಿಟ್ಟಿನ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಟಾಟಾ ಕಾಫಿ ಸಂಸ್ಥೆ ಅಕ್ರಮ ಬಾಂಗ್ಲಾ ವಲಸಿಗರ ಆವಾಸಸ್ಥಾನವಾಗಿದೆ. ಕೋವರ್‍ಕೊಲ್ಲಿ ಕಾಫಿ ಎಸ್ಟೇಟ್‍ನಲ್ಲಿರುವವರಿಗೆ 200 ರೂಪಾಯಿಗಳಿಗೆ ಆಧಾರ್‍ಕಾರ್ಡ್ ವಿತರಿಸಲಾಗಿದೆ. ಟಾಟಾ ಕಾಫಿ ಸಂಸ್ಥೆಯ ಅಧಿಕಾರಿಗಳು ತಮ್ಮ ಲೈನ್‍ಮನೆಯಲ್ಲಿ ಇವರುಗಳು ವಾಸವಿದ್ದಾರೆ ಎಂದು ವಾಸ ದೃಢೀಕರಣ ಪತ್ರ ನೀಡುತ್ತಿದ್ದು, ಇದರ ಆಧಾರದ ಮೇಲೆ ಐಗೂರು ವಿಜಯಾ ಬ್ಯಾಂಕ್‍ನಲ್ಲಿ ಖಾತೆ ತೆರೆದು, ಪಾಸ್ ಪುಸ್ತಕದ ಆಧಾರದಲ್ಲಿ ಬೇಳೂರು ಪಂಚಾಯಿತಿ ಮೂಲಕ ಆಧಾರ್ ಕಾರ್ಡ್ ವಿತರಿಸಲಾಗಿದೆ ಎಂದು ಆರೋಪಿಸಿದರು.

ಆಧಾರ್ ಕಾರ್ಡ್ ವಿತರಣೆಯಲ್ಲಿ ಗ್ರಾಮ ಪಂಚಾಯಿತಿಯ ಅಧಿಕಾರಿಗಳು, ಆಧಾರ್ ವಿತರಿಸುವ ಸಿಬ್ಬಂದಿ ಮತ್ತು ಟಾಟಾ ಕಾಫಿ ಸಂಸ್ಥೆಯ ಸಿಬ್ಬಂದಿಗಳು ಶಾಮೀಲಾಗಿದ್ದಾರೆ. ಬಜೆಗುಂಡಿ ಗ್ರಾಮದ ಅರುಣ್ ಎಂಬಾತ, ಅಕ್ರಮ ವಲಸಿಗನಾದ ನೂರುಲ್ಲಾ ಎಂಬವನೊಂದಿಗೆ ಸೇರಿಕೊಂಡು ಅಕ್ರಮವಾಗಿ ನಕಲಿ ದಾಖಲೆಗಳ ಮೂಲಕ ಸರ್ಕಾರದ ಗುರುತಿನ ಚೀಟಿ ವಿತರಿಸಲು ಪ್ರಯತ್ನಿಸುತ್ತಿದ್ದಾರೆ. ನೂರುಲ್ಲಾ ಎಂಬಾತ ಕಳೆದ 3 ವರ್ಷಗಳ ಹಿಂದೆ ಅಕ್ರಮ ಗೋಮಾಂಸ ಸಾಗಾಟ ಮಾಡಿ ಗಲಭೆಗೂ ಕಾರಣನಾಗಿದ್ದ. ಈತನ ಪೂರ್ವಾಪರ ಬಗ್ಗೆ ಯಾರಲ್ಲೂ ಸ್ಪಷ್ಟ ಮಾಹಿತಿಯಿಲ್ಲ. ಈ ಹಿಂದೆ ಬೆಂಗಳೂರು ಸರಣಿ ಬಾಂಬ್ ಸ್ಫೋಟದ ರೂವಾರಿ ನಜೀರ್‍ನ ಹೊಸತೋಟ ನಂಟು ಬೆಳಕಿಗೆ ಬಂದಿದ್ದರೂ ಈ ಪ್ರಕರಣದಿಂದ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಂತೆ ಕಂಡುಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳು, ಸಮಾಜ ವಿದ್ರೋಹಿ ಘಟನೆಗಳಿಗೆ ಅಕ್ರಮ ವಲಸಿಗರೇ ಕಾರಣರಾಗಿದ್ದಾರೆ. ಇಂತಹವರಿಗೆ ಬೃಹತ್ ಎಸ್ಟೇಟ್‍ಗಳು ಆಶ್ರಯ ನೀಡುತ್ತಿವೆ. ಈಗಾಗಲೇ ಬಾಂಗ್ಲಾದಿಂದ ಸಾವಿರಾರು ಮಂದಿ ಆಗಮಿಸಿ ಕೊಡಗಿನ ವಿವಿಧ ತೋಟಗಳಲ್ಲಿ ನೆಲೆಸಿರುವ ಶಂಕೆ ವ್ಯಕ್ತವಾಗಿದ್ದು, ಮುಂದೊಂದು ದಿನ ಕೊಡಗು ಸಹ ಕಾಶ್ಮೀರದಂತೆ ಅಶಾಂತಿಯ ಬೀಡಾಗುವ ಆತಂಕ ಎದುರಾಗಿದೆ. ಈ ಬಗ್ಗೆ ಆಡಳಿತಗಾರರು ಹಾಗೂ ಪೊಲೀಸ್ ಇಲಾಖೆ ಯಾವದೇ ಕ್ರಮ ಕೈಗೊಳ್ಳದಿರುವ ಖಂಡನೀಯ ಎಂದು ಗೋಷ್ಠಿಯಲ್ಲಿದ್ದ ಜಾಗರಣಾ ವೇದಿಕೆಯ ಜಿಲ್ಲಾ ಪ್ರಮುಖ ಸುಭಾಷ್ ತಿಮ್ಮಯ್ಯ ಹೇಳಿದರು.

ಕೋವರ್‍ಕೊಲ್ಲಿ ಎಸ್ಟೇಟ್‍ನಲ್ಲಿರುವ ಅಕ್ರಮ ವಲಸಿಗರಿಗೆ ತಕ್ಷಣ ಆಧಾರ್ ಕಾರ್ಡ್ ಸಿಗುತ್ತದೆ. ಆದರೆ ಇಲ್ಲಿನ ಮೂಲನಿವಾಸಿಗಳಿಗೆ ತಿಂಗಳುಗಟ್ಟಲೆ ಅಲೆದಾಡಿಸಲಾಗುತ್ತದೆ. ವಲಸಿಗರಿಗೆ ಆಧಾರ್ ನೀಡುವ ಮೂಲಕ ಭಾರತೀಯ ಪೌರತ್ವ ನೀಡಲು ಕೆಲವರು ಹವಣಿಸುತ್ತಿದ್ದಾರೆ. ಈ ಬಗ್ಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ತೋಟ ಮಾಲೀಕರೂ ಸಹ ತಮ್ಮ ತೋಟಗಳಲ್ಲಿ ಅಕ್ರಮ ಬಾಂಗ್ಲಾ ವಲಸಿಗರನ್ನು ಇಟ್ಟುಕೊಳ್ಳಬಾರದು. ಕಡಿಮೆ ಕೂಲಿಯ ಆಸೆಗೆ ಮುಂದೊಂದು ದಿನ ಎದುರಾಗುವ ಗಂಡಾಂತರದ ಬಗ್ಗೆಯೂ ಆಲೋಚಿಸಬೇಕಿದೆ ಎಂದು ಮನವಿ ಮಾಡಿದರು.

ಅಕ್ರಮ ವಲಸಿಗರ ಪತ್ತೆಗೆ ಜಿಲ್ಲಾ ಮಟ್ಟದಲ್ಲಿ ವಿಶೇಷ ತಂಡ ರಚಿಸಲಾಗಿದೆ ಎಂದು ಹೇಳುತ್ತಿದ್ದರೂ ಈ ತಂಡ ಎಷ್ಟರ ಮಟ್ಟಿಗೆ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ಎಷ್ಟು ಮಂದಿ ವಲಸಿಗರಿದ್ದಾರೆ. ಯಾವ ಎಸ್ಟೇಟ್‍ನಲ್ಲಿ ಎಷ್ಟು ಮಂದಿ ಇದ್ದಾರೆ. ಇವರ ಮೂಲ ಯಾವದು? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರವಿಲ್ಲದಂತಾಗಿದೆ. ಕಳೆದ ಕೆಲ ತಿಂಗಳ ಹಿಂದೆ ನಾಲ್ಕೈದು ಚುನಾವಣಾ ಗುರುತಿನ ಚೀಟಿ, ಪಾಸ್‍ಪೋರ್ಟ್ ಹೊಂದಿದ್ದ ಅಖಿಲೇಶ್ ಎಂಬಾತ ತಲೆಮರೆಸಿ ಕೊಂಡಿದ್ದರೂ ಇದುವರೆಗೂ ಈತನ ಪತ್ತೆಯಿಲ್ಲ. ಇದೀಗ ಟಾಟಾ ಕಾಫಿ ಎಸ್ಟೇಟ್‍ನಲ್ಲಿರುವ ಅಕ್ರಮ ವಲಸಿಗರ ಕಣ್ಮರೆಯಾದರೆ ಅದಕ್ಕೆ ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಕಂಪೆನಿಯೇ ಹೊಣೆಯಾಗುತ್ತದೆ ಎಂದರು.

ಇದೀಗ ಅಕ್ರಮ ವಲಸಿಗರಿಗೆ ಆಧಾರ್ ಕಾರ್ಡ್ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮನೆಯ ಬೇಡಿಕೆಯೂ ಬಂದರೆ ಅದನ್ನೂ ನೀಡಲು ಅಧಿಕಾರಿಗಳು ಹಿಂದೆಮುಂದೆ ಯೋಚಿಸುವದಿಲ್ಲ. ಆದ್ದರಿಂದ ತಕ್ಷಣ ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಒಂದು ವಾರಗಳ ಗಡುವಿನ ನಂತರ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಗೋಷ್ಠಿಯಲ್ಲಿದ್ದ ಸಹ ಸಂಚಾಲಕ ರವಿ ಕರ್ಕಳ್ಳಿ ಎಚ್ಚರಿಸಿದರು.

ಈ ಸಂದರ್ಭ ತಾಲೂಕು ಘಟಕದ ಕಾರ್ಯದರ್ಶಿ ಉಮೇಶ್, ನಗರ ಘಟಕದ ಅಧ್ಯಕ್ಷ ಅಶೋಕ್, ಜಿಲ್ಲಾ ಪ್ರಮುಖ ಪ್ರಭಾಕರ್, ಪ್ರಮುಖರಾದ ಶಶಿಕಾಂತ್, ಅವಿಲಾಶ್, ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಇಲ್ಲಿನ ಪೊಲೀಸ್ ಠಾಣೆಗೆ ತೆರಳಿದ ಕಾರ್ಯಕರ್ತರು, ಪ್ರಕರಣದ ಕುರಿತು ದೂರು ನೀಡಲು ಮುಂದಾದರು. ಈ ಪ್ರಕರಣ ಪೊಲೀಸ್ ಇಲಾಖಾ ವ್ಯಾಪ್ತಿಗೆ ಬರುವದಿಲ್ಲ. ನೀವು ತಹಶೀಲ್ದಾರ್‍ಗೆ ದೂರು ನೀಡಿ ಎಂದು ಕಳುಹಿಸಿದರು. ಟಾಟಾ ಕಂಪೆನಿಯ ಸಿಬ್ಬಂದಿಗಳು ಹಾಗೂ ಬಜೆಗುಂಡಿ ಗ್ರಾಮದ ಅರುಣ್‍ಕುಮಾರ್ ಅವರುಗಳೊಂದಿಗೆ ತಾಲೂಕು ಕಚೇರಿಗೆ ತೆರಳಿದ ಕಾರ್ಯಕರ್ತರು, ಈ ಎಲ್ಲಾ ಬೆಳವಣಿಗೆಯ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್ ಶಿವಪ್ಪ ಅವರನ್ನು ಒತ್ತಾಯಿಸಿದರು.