ಸಿದ್ದಾಪುರ, ಆ. 7: ವಿದ್ಯುತ್ ಸ್ಪರ್ಶಗೊಂಡು ಯುವಕನೋರ್ವ ದಾರುಣವಾಗಿ ಮೃತಪಟ್ಟಿರುವ ಘಟನೆ ನೆಲ್ಯಹುದಿಕೇರಿಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ.

ನೆಲ್ಯಹುದಿಕೇರಿ ಗ್ರಾಮದ ನಲ್ವತ್ತೆಕರೆ ಬರಡಿಯ ನಿವಾಸಿಯಾಗಿರುವ ಗೋಪಿ ಎಂಬವರ ಪುತ್ರ ನಿಶಾಂತ್ (25) ಎಂಬಾತನು ನೆಲ್ಯಹುದಿಕೇರಿಯ ಎಂ.ಜಿ. ಕಾಲೋನಿಯ ನಿವಾಸಿ ಅಬು ಎಂಬವರ ಪುತ್ರನ ನೂತನ ಮನೆಯ ನಿರ್ಮಾಣದ ಸೆಂಟ್ರಿಂಗ್ ಹಲಗೆ ಹಾಗೂ ಆದಾರ ಕಂಬಗಳನ್ನು ಹಾರೆಯಿಂದ ಕಿತ್ತು ತೆಗೆಯುತ್ತಿರುವ ಸಂದರ್ಭದಲ್ಲಿ ಮನೆಯ ಸಮೀಪ ಹಾದು ಹೋಗಿದ್ದ 11 ಕೆ.ವಿ. ವಿದ್ಯುತ್ ತಂತಿಯಿಂದ ವಿದ್ಯುತ್ ಸ್ಪರ್ಶವಾಗಿ ನಿಶಾಂತ್ ಮನೆಯ ಮೇಲ್ಭಾಗದಿಂದ ನೆಲಕ್ಕೆ ಉರುಳಿ ಬಿದ್ದು, ಸ್ಥಳದಲ್ಲೇ ದುರ್ಮರಣಗೊಂಡಿದ್ದಾನೆ.

ಮೃತ ನಿಶಾಂತ್ ತನ್ನ ಹೊಟ್ಟೆಪಾಡಿಗಾಗಿ ಕೆಲಸಕ್ಕೆ ಬಂದಿದ್ದು, ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿರುವ ವಿಷಯ ತಿಳಿದು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ನೂರಾರು ಮಂದಿ ಆಗಮಿಸಿ ಕಂಬನಿ ಮಿಡಿದರು.

ಸೌಮ್ಯ ಸ್ವಭಾವದ ಯುವಕ

ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ನಿಸಾಂತ್ ಸೌಮ್ಯ ಸ್ವಭಾವ ಹಾಗೂ ಉತ್ತಮ ವ್ಯಕ್ತಿತ್ವದ ಯುವಕನಾಗಿದ್ದು, ಎಲ್ಲರೊಂದಿಗೆ ಅನ್ಯೋನ್ಯವಾಗಿ ಲವಲವಿಕೆಯಿಂದ ನಗುಮುಖದಲ್ಲೇ ಬೆರೆಯುತ್ತಿದ್ದನು. ವಿಧಿಯಾಟಕ್ಕೆ ಬಲಿ ಯಾಗಿರುವ ಆತನ ಸ್ನೇಹಿತರ ಮುಖದಲ್ಲಿ ಮಡುಗಟ್ಟಿದ ದುಃಖ ಎದ್ದು ಕಾಣುತ್ತಿತ್ತು.

ಷೋಷಕರ ಆಕ್ರಂದನ

ನೆಲ್ಯಹುದಿಕೇರಿ ಬರಡಿಯ ಗೋಪಿ -ಶಾಂತ ದಂಪತಿಗಳ ಕಡು ಬಡವ ಕುಟುಂಬದ ಇಬ್ಬರು ಮಕ್ಕಳ ಪೈಕಿ ದ್ವಿತೀಯ ಪುತ್ರನಾಗಿರುವ ನಿಶಾಂತ್ ಇಂದು ರಜಾ ದಿನವಾದರೂ ಕೂಡ ಕುಟುಂಬದಲ್ಲಿ ಆರ್ಥಿಕ ತೊಂದರೆ ಇರುವ ಹಿನ್ನೆಲೆಯಲ್ಲಿ ಕೆಲಸಕ್ಕೆ ತೆರಳಿದ್ದನು. ಆದರೆ ವಿಧಿಯಾಟಕ್ಕೆ ಸಿಲುಕಿ ಮೃತಪಟ್ಟಿರುವ ಬಗ್ಗೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಸಿದ್ದಾಪುರ ಠಾಣಾಧಿಕಾರಿ ಬಿ.ಜಿ. ಕುಮಾರ್ ಭೇಟಿ ನೀಡಿ, ಪರಿಶೀಲಿಸಿ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.