ಕುಶಾಲನಗರ, ಆ. 7: ಕಾವೇರಿ ಬಚಾವೋ ಆಂದೋಲನ ಅಂಗವಾಗಿ ತಲಕಾವೇರಿಯಿಂದ ಪೂಂಪ್‍ಹಾರ್ ತನಕ ತೆರಳಿರುವ ಸಾಧುಸಂತರ ಪಾದಯಾತ್ರೆ ತಂಡ ಇಂದು ತಮಿಳುನಾಡಿನ ಕುಂಭಕೋಣಂ ಜಿಲ್ಲೆಗೆ ಕಾಲಿರಿಸಿದೆ. ಜೂನ್ 15ರಂದು ತಲಕಾವೇರಿಯಿಂದ ಚಾಲನೆಗೊಂಡ ಪಾದಯಾತ್ರೆ ಇದೀಗ 55ನೇ ದಿನದ ಯಶಸ್ವಿ ಯಾತ್ರೆ ಪೂರೈಸಿರುವದಾಗಿ ತಂಡದ ಪ್ರಮುಖರಾದ ಶ್ರೀ ರಮಾನಂದ ಸ್ವಾಮೀಜಿ ತಿಳಿಸಿದ್ದಾರೆ.

ಕಾವೇರಿ ನದಿ ಸಂರಕ್ಷಣೆ ಮತ್ತು ಕಾವೇರಿ ನದಿ ತಟದ ವಾಸ್ತವಾಂಶ ಅರಿಯುವ ನಿಟ್ಟಿನಲ್ಲಿ ಶ್ರೀ ರಮಾನಂದ ಸ್ವಾಮೀಜಿ ನೇತೃತ್ವದ ಸಾಧು ಸಂತರು ಮತ್ತು ಕಾರ್ಯಕರ್ತರ ತಂಡ ಜಿಲ್ಲೆಯ ಮೂಲಕ ಹಾಸನ, ಮೈಸೂರು, ಮಂಡ್ಯ, ರಾಮನಗರ ಮೂಲಕ ತೆರಳಿ ತಮಿಳುನಾಡಿನ ನದಿ ತಟದಲ್ಲಿ ಸಂಚರಿಸಿ ಇದೀಗ ಅಂದಾಜು 1100 ಕಿ.ಮೀ ದೂರ ಕ್ರಮಿಸಿದೆ.

ಒಟ್ಟು 60 ದಿನಗಳ ಯಾತ್ರೆಯಲ್ಲಿ ಅಂದಾಜು 1200 ಕಿ.ಮೀ ಕ್ರಮಿಸಬೇಕಾಗಿದ್ದು, ಪಾದಯಾತ್ರೆ ತಂಡ ಈ ತಿಂಗಳ 14ರಂದು ಕಾವೇರಿ ನದಿ ಬಂಗಾಳಕೊಲ್ಲಿ ಸಮುದ್ರ ಸಂಗಮವಾಗುವ ಪೂಂಪ್‍ಹಾರ್ ಕ್ಷೇತ್ರಕ್ಕೆ ತಲುಪಲಿದೆ. ಅಂದು ಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದ್ದು, ಈ ಸಂದರ್ಭ ದಕ್ಷಿಣ ಭಾರತದ ವಿವಿಧÀ ರಾಜ್ಯಗಳ 200ಕ್ಕೂ ಅಧಿಕ ಸಾಧು-ಸಂತರು ಪಾಲ್ಗೊಳ್ಳು ವರು. ಕೊಡಗು ಜಿಲ್ಲೆಯಿಂದ 50ಕ್ಕೂ ಅಧಿಕ ಕಾರ್ಯಕರ್ತರು ಸೇರಿದಂತೆ ರಾಜ್ಯದಿಂದ ಅಂದಾಜು 500ಕ್ಕೂ ಅಧಿಕ ಮಂದಿ ಪೂಂಪ್‍ಹಾರ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕ ಎಂ.ಎನ್. ಚಂದ್ರ ಮೋಹನ್ ತಿಳಿಸಿದ್ದಾರೆ.