ಮಡಿಕೇರಿ, ಜೂ.12: ದೇವಟ್ ಪರಂಬು ವಿವಾದವನ್ನು ಕಾರಣವಾಗಿಸಿಕೊಂಡು ಜಿಲ್ಲೆಯಲ್ಲಿ ಹಿಂದೂಗಳಲ್ಲಿ ಒಡಕು ಮೂಡಿಸುವ ಷಡ್ಯಂತ್ರ ನಡೆಯುತ್ತಿದೆಯೆಂದು ಜನಪರ ಹೋರಾಟ ಸಮಿತಿಯ ಸಂಚಾಲಕ ಬಲ್ಲಾರಂಡ ಮಣಿ ಉತ್ತಪ್ಪ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡವರು ಮತ್ತು ಗೌಡರ ನಡುವಿನ ವೈಮನಸ್ಸಿನಿಂದ ಕೊಡಗು ಜಿಲ್ಲೆ ಹಾಗೂ ಹಿಂದೂ ಸಮಾಜಕ್ಕೆ ನಷ್ಟವಾಗಲಿದೆ. ಎರಡು ಸಮಾಜದ ನಡುವಿನ ಕಲಹದಿಂದಾಗಿ ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗಿದೆ. ಇದರ ಲಾಭವನ್ನು ಪಡೆದುಕೊಳ್ಳುತ್ತಿರುವ ಹೊರ ರಾಜ್ಯದವರು ಜಿಲ್ಲೆಗೆ ಬಂದು ನೆಲೆ ನಿಲ್ಲುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಕೊಡವರು ಮತ್ತು ಗೌಡರು ಒಂದೇ ಮನೆಯ ಮಕ್ಕಳಂತೆ ಜೀವನ ಸಾಗಿಸುವ ಅಗತ್ಯತೆ ಇದೆ. ಆದರೆ, ರಾಜಕೀಯ ಕಾರಣಗಳಿಗಾಗಿ ಎರಡೂ ಸಮಾಜಗಳ ನಡುವೆ ಒಡಕು ಮೂಡುತ್ತಿದೆ. ಈ ಎರಡು ಸಮಾಜಗಳು ಒಂದಾಗಿದ್ದರೆ ಮಾತ್ರ ಕೊಡಗು ಮತ್ತು ಕೊಡಗಿನ ಸಂಸ್ಕøತಿ ಉಳಿಯಲು ಸಾಧ್ಯವೆಂದು ಬಲ್ಲಾರಂಡ ಮಣಿ ಉತ್ತಪ್ಪ ಅಭಿಪ್ರಾಯಪಟ್ಟರು.

ದೇವಟ್ ಪರಂಬು ವಿಚಾರದಲ್ಲಿ ಸೌಹಾರ್ದ ವೇದಿಕೆಯಡಿ ಹೋರಾಟ ನಡೆಸುವದು ಬೇಡವೆಂದು ಸಲಹೆ ನೀಡಿದ ಅವರು, ಹಿಂದೂಗಳಲ್ಲಿ ಒಡಕು ಮೂಡಬಾರದೆಂದು ತಿಳಿಸಿದರು.

ಜಿಲ್ಲೆಯಲ್ಲಿ ಬಿಜೆಪಿಯ ಏಳಿಗೆಯನ್ನು ಸಹಿಸಲಾಗದವರು ಹಿಂದೂಗಳಲ್ಲಿ ಒಡಕು ಮೂಡಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಸೌಹಾರ್ದ ವೇದಿಕೆಯಡಿ ಹೋರಾಟ ನಡೆಸುತ್ತಿರುವವರು ದೇವಟ್ ಪರಂಬುವಿನಲ್ಲಿ ಕಲ್ಲು ಸ್ಥಾಪಿಸುವ ಸಂದರ್ಭ ಎಲ್ಲಿಗೆ ಹೋಗಿದ್ದರು ಎಂದು ಪ್ರಶ್ನಿಸಿದರು. ಇಬ್ಬರ ಜಗಳ ಮೂರನೆಯವರಿಗೆ ಲಾಭವಾಗಲಿದೆಯೆಂದು ಎಚ್ಚರಿಸಿದ ಮಣಿ ಉತ್ತಪ್ಪ, ಯಾವದೇ ಹೋರಾಟಗಳು ಒಡಕನ್ನು ಮೂಡಿಸುವ ಬದಲು ವ್ಯವಸ್ಥಿತ ಚಿಂತನೆಯಡಿ ನಡೆಯಬೇಕೆಂದು ಅಭಿಪ್ರಾಯಪಟ್ಟರು.

ದೇವಟ್ ಪರಂಬು ವಿವಾದದಲ್ಲಿ ರಾಜಕೀಯ ಹಸ್ತಕ್ಷೇಪವಾಗ ಬಾರದೆಂದು ತಿಳಿಸಿದ ಅವರು, ಟಿಪ್ಪು ಜಯಂತಿಯನ್ನು ಯಾವದೇ ಕಾರಣಕ್ಕೂ ಆಚರಿಸಲು ಬಿಡುವದಿಲ್ಲ ಎನ್ನುವ ವಿಶ್ವ ಹಿಂದೂ ಪರಿಷತ್ತಿನ ನಿರ್ಧಾರಕ್ಕೆ ಬದ್ಧರಾಗಿರುವದಾಗಿ ತಿಳಿಸಿದರು. ಮುಂದಿನ ಟಿಪ್ಪು ಜಯಂತಿ ಸಂದರ್ಭ ದೇವಟ್ ಪರಂಬ್‍ವಿನಲ್ಲಿ ಹುತಾತ್ಮರ ದಿನವನ್ನು ಆಚರಿಸುವ ಕುರಿತು ವಿಹೆಚ್‍ಪಿ ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ ದೇವಟ್ ಪರಂಬು ಎನ್ನುವ ವಿವಾದದ ಷಡ್ಯಂತ್ರ ನಡೆಯುತ್ತಿದೆ ಎಂದು ಮಣಿ ಉತ್ತಪ್ಪ ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಚೆಟ್ಟಳ್ಳಿ ಘಟಕದ ಅಧ್ಯಕ್ಷ ನೂಜಿಬೈಲು ನಾಣಯ್ಯ ಉಪಸ್ಥಿತರಿದ್ದರು.