ಸೋಮವಾರಪೇಟೆ, ಜೂ.12: ಜಿಲ್ಲೆಯಲ್ಲಿ ಇದೀಗ ತಲೆದೋರಿರುವ ದೇವಟ್‍ಪರಂಬು ವಿವಾದವನ್ನು ಜನಾಂಗೀಯ ದ್ವೇಷಕ್ಕೆ ಬಳಸಿ ಕೊಳ್ಳದೆ ಸೌಹಾರ್ದಯುತ ವಾಗಿ ಮಾತುಕತೆ ಮೂಲಕ ಬಗೆಹರಿಸಿ ಕೊಳ್ಳಲು ಎಲ್ಲರೂ ಮುಂದಾಗಬೇಕು ಎಂದು ಸೋಮವಾರಪೇಟೆ ಕೊಡವ ಸಮಾಜದ ಅಧ್ಯಕ್ಷ ಮಾಳೇಟಿರ ಅಭಿಮನ್ಯುಕುಮಾರ್ ಅಭಿಪ್ರಾಯಪಟ್ಟರು.

ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಸಮಾಜದ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲಾ ಜನಾಂಗದ ಪ್ರಮುಖರು ಒಂದೆಡೆ ಸೇರಿ ಈ ಬಗ್ಗೆ ಚರ್ಚಿಸಬೇಕಾದ ಅಗತ್ಯತೆ ಇದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಎರಡು ಪ್ರಮುಖ ಜನಾಂಗಗಳ ನಡುವೆ ದೇವಟಿ ಪರಂಬ್ ವಿಚಾರದ ಬಗ್ಗೆ ವೈಷಮ್ಯ ತಲೆದೋರುವ ಸಂಭವ ಎದುರಾಗಿದೆ. ಜಿಲ್ಲೆಯಲ್ಲಿ ಎಲ್ಲ ಸಮಾಜದವರು ಶಾಂತಿ, ಸೌಹಾರ್ಧತೆಯಿಂದ ಬದುಕು ತ್ತಿದ್ದಾರೆ. ಬಹಳ ಹಿಂದಿನಿಂದಲೂ ಒಂದು ಜನಾಂಗದ ಸಂಸ್ಕøತಿ, ಆಚಾರ, ವಿಚಾರ, ಆಹಾರ ಪದ್ಧತಿಯನ್ನು ಇತರ ಜನಾಂಗ ದವರು ಗೌರವಪೂರ್ವಕ ವಾಗಿ ಸ್ವೀಕರಿಸಿದ್ದಾರೆ. ಎಲ್ಲಾ ಜನಾಂಗದ ಹಬ್ಬ ಹರಿದಿನಗಳಲ್ಲಿ ಎಲ್ಲರೂ ಪಾಲ್ಗೊಳ್ಳುತ್ತಿದ್ದಾರೆ ಎಂದು ಹೇಳಿದರು.

ಇದೀಗ ಕೆಲವರು ಒಗ್ಗಟ್ಟನ್ನು ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಎರಡು ಜನಾಂಗದ ನಡುವೆ ಉಂಟಾಗಿರುವ ಸಮಸ್ಯೆಗೆ ಸಂಧಾನ ಸಭೆಯೇ ಸೂಕ್ತ ಪರಿಹಾರ ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿಕೆ ನೀಡಿರುವದು ಸ್ವಾಗತಾರ್ಹ. ಅಂತೆಯೇ ಆದಷ್ಟು ಶೀಘ್ರ ಸಂಧಾನ ಸಭೆ ನಡೆದು ಎಲ್ಲರೂ ಮುಕ್ತ ಮನಸ್ಸಿನಿಂದ ಬದುಕು ಸಾಗಿಸುವಂತಾಗಬೇಕು ಎಂದು ಅಭಿಮನ್ಯುಕುಮಾರ್ ಹೇಳಿದರು.

ಇದೀಗ ಕೊಡವ ಜನಾಂಗವನ್ನು ವಿರೋಧ ಮಾಡುವ ಏಕೈಕ ಉದ್ದೇಶದಿಂದ ಹಲವಾರು ಸಂಘಟನೆಗಳು ಅಸ್ತಿತ್ವಕ್ಕೆ ಬರುತ್ತಿರು ವದು ದುರದೃಷ್ಟಕರ. ಜಿಲ್ಲೆಗೆ ಪ್ರಸ್ತುತ ಯಾವದೇ ನೂತನ ಸಮಿತಿಗಳ ಅವಶ್ಯಕತೆಯಿಲ್ಲ. ಕೊಡವ ವಿರೋಧಿ ಧೋರಣೆ ಯಾರಿಗೂ ಬೇಡ. ಎಲ್ಲರೂ ಒಂದಾಗಿ ಬೆರೆಯಬೇಕಿದೆ. ಯಾವದೇ ಇತಿಹಾಸಕ್ಕೆ ಆಧಾರ ಪುರಾವೆಗಳು ಇಲ್ಲ. ಇದನ್ನು ಕೇಳುವದೂ ಅರ್ಥಹೀನ. ಜಿಲ್ಲೆಯ ಎಲ್ಲಾ ಜನಾಂಗದ ಪ್ರಮುಖರು ಈ ವಿಚಾರದ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾದ ಅಗತ್ಯತೆ ಇದೆ ಎಂದರು. ಸಭೆಯಲ್ಲಿ ಉಪಾಧ್ಯಕ್ಷ ಬಾಚಿನಾಡಂಡ ಪೂಣಚ್ಚ, ಕಾರ್ಯದರ್ಶಿ ಮೇರಿಯಂಡ ಉತ್ತಪ್ಪ, ಖಜಾಂಚಿ ಪಾಡಿಯಂಡ ಮುತ್ತಣ್ಣ ಸೇರಿದಂತೆ ನಿರ್ದೇಶಕರು, ಹಿರಿಯ ಸದಸ್ಯರು ಉಪಸ್ಥಿತರಿದ್ದರು.