ಕೂಡಿಗೆ, ಜು. 23: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿ ನಿವೇಶನ ರಹಿತರಿಗೆ ಕಳೆದ 8 ವರ್ಷಗಳಿಂದ ನಿವೇಶನಗಳನ್ನು ನೀಡಲು ಕಾದಿರಿಸಿದ ಜಾಗವನ್ನು ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಗೂ ಸ್ಥಳೀಯ ನಿವೇಶನ ರಹಿತರಿಗೆ ತಕ್ಷಣ ನೀಡಬೇಕೆಂದು ಈ ವ್ಯಾಪ್ತಿಯ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕಳೆದ ಅನೇಕ ಗ್ರಾಮ ಸಭೆಗಳಲ್ಲಿ ಮತ್ತು ವಾರ್ಡ್ ಸಭೆಗಳಲ್ಲಿ ನಿವೇಶನ ರಹಿತ ಅರ್ಜಿಗಳನ್ನು ಸ್ವೀಕರಿಸಿ ನಿವೇಶನಗಳನ್ನು ನೀಡುತ್ತೇವೆಂಬ ಭರವಸೆಗಳನ್ನು ನೀಡುತ್ತಾ ಬರಲಾಗಿತ್ತು. ಆದರೆ ಇದುವರೆಗೆ ಯಾರೊಬ್ಬರಿಗೂ ನಿವೇಶನಗಳನ್ನು ನೀಡಿಲ್ಲ. ತಾಲೂಕು ಕಾರ್ಯನಿರ್ವಹಣಾಧಿಕಾರಿಗಳು ಫಲಾನುಭವಿಗಳ ಆಯ್ಕೆಯನ್ನು ಗ್ರಾಮ ಪಂಚಾಯಿತಿ ಮಾಸಿಕ ಸಭೆಯಲ್ಲಿ ಆಯ್ಕೆಗೊಳಿಸಿ, ಆಯಾಯ ಫಲಾನುಭವಿಗಳ ಪಟ್ಟಿಯನ್ನು ತಾಲೂಕು ಮಟ್ಟಕ್ಕೆ ಕಳುಹಿಸಲು ಸೂಚನೆ ನೀಡಿದ್ದರೂ ಗ್ರಾಮ ಪಂಚಾಯಿತಿ ಯಾವದೇ ಕ್ರಮ ಕೈಗೊಂಡಿಲ್ಲ ಎಂದು ನಿವೇಶನ ರಹಿತರಾದ ತಾಯಮ್ಮ, ನಂಜುಂಡಪ್ಪ, ಗಿರಿಯಣ್ಣ ಸೇರಿದಂತೆ ಅನೇಕ ನಿವೇಶನ ರಹಿತರು ಆರೋಪಿಸಿದ್ದಾರೆ.

ನಿವೇಶನಗಳನ್ನು ಗ್ರಾ.ಪಂ. ವತಿಯಿಂದ ನಿವೇಶನ ಹಂಚಿಕೆಯ ಆಕಾರದ ವ್ಯವಸ್ಥೆ, ರಸ್ತೆ, ಚರಂಡಿ ವ್ಯವಸ್ಥೆಯನ್ನು ಈಗಾಗಲೇ ಮಾಡಲಾಗಿದೆ. ಅರ್ಹ ಫಲಾನುಭವಿಗಳನ್ನು ಗ್ರಾ.ಪಂ. ವತಿಯಿಂದ ಆಯ್ಕೆ ಮಾಡಿ ತಾಲೂಕು ತಹಶೀಲ್ದಾರ್ ಅವರಿಗೆ ಪಟ್ಟಿಯನ್ನು ನೀಡುವದರ ಮೂಲಕ ಅನುಕೂಲ ಮಾಡಿಕೊಡಬೇಕೆಂದು ನಿವೇಶನ ರಹಿತರು ಆಗ್ರಹಿಸಿದ್ದಾರೆ.

ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ ಅವರು ನಿವೇಶನಕ್ಕೆ ಸಂಬಂಧಿಸಿದಂತೆ ಮಾತನಾಡಿ, ಮುಂದಿನ ಸಾಲಿನ ಮಾಸಿಕ ಸಭೆಯಲ್ಲಿ ಹುದುಗೂರಿನಲ್ಲಿ ಕಾದಿರಿಸಿದ ನಿವೇಶನದ ಬಗ್ಗೆ ಚರ್ಚಿಸಿ, ಆಯ್ಕೆಯ ನಂತರ ಫಲಾನುಭವಿಗಳ ಪಟ್ಟಿಯನ್ನು ತಾಲೂಕು ಮಟ್ಟದ ಅಧಿಕಾರಿಗಳಿಗೆ ಕಳುಹಿಸಿ, ತುರ್ತಾಗಿ ನಿವೇಶನಗಳನ್ನು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿದರು.