ಶನಿವಾರಸಂತೆ, ಜು. 23: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ ಪಟ್ಟಣದಲ್ಲಿ 2016-17ನೇ ಸಾಲಿನ ಪ್ರೌಢಾಶಾಲಾ ವಿಭಾಗದ ವಿಶೇಷ ಅಗತ್ಯತೆಯುಳ್ಳ ಮಕ್ಕಳ ದಾಖಲಾತಿ ಆಂದೋಲನ ವನ್ನು ಹಮ್ಮಿಕೊಳ್ಳಲಾಗಿತ್ತು.

ಪಟ್ಟಣದ ವಿಘ್ನೇಶ್ವರ ಬಾಲಿಕಾ ಪ್ರೌಢಶಾಲೆ, ಸೆಕ್ರೇಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ತ್ಯಾಗರಾಜ ಕಾಲೋನಿಯ ಸ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳು ಮುಖ್ಯ ರಸ್ತೆಯಲ್ಲಿ ‘ಶಿಕ್ಷಣ ಮಗುವಿನ ಹಕ್ಕು ಅದನ್ನು ನೀಡಲು ನಾವೆಲ್ಲರೂ ಶ್ರಮಿಸೋಣ ಎಲ್ಲರೂ ಬನ್ನಿ ಪಾಲ್ಗೊಳ್ಳಿರಿ’ ಎಂದು ಘೋಷಣೆಗಳನ್ನು ಕೂಗುತ್ತಾ ಜಾಥಾ ನಡೆಸಿದರು. ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ವಿದ್ಯಾರ್ಥಿಗಳೊಂದಿಗೆ ಸಿ.ಆರ್.ಪಿ. ಮಂಜುಳಾಮಣಿ, ವಿಘ್ನೇಶ್ವರ ಬಾಲಿಕಾ ಪ.ಪೂ. ಕಾಲೇಜಿನ ಪ್ರಾಂಶುಪಾಲ ಶಿವಪ್ರಕಾಶ್, ಶಿಕ್ಷಕರಾದ ಜಯಕುಮಾರ್, ಅಂಜನಪ್ಪ, ಕಲಾ, ಸ.ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಮೋಹನ್, ಶಿಕ್ಷಕರು ಹಾಗೂ ಸೇಕ್ರೇಡ್ ಹಾರ್ಟ್ ಶಾಲೆಯ ಶಿಕ್ಷಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.