ಸೋಮವಾರಪೇಟೆ, ಜ. 8: ಇಲ್ಲಿನ ಡಾಲ್ಪೀನ್ಸ್ ಸ್ಪೋಟ್ರ್ಸ್ ಕ್ಲಬ್ ಹಾಗೂ ಹಾಕಿ ಕೂರ್ಗ್‍ನ ಆಶ್ರಯದಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಹಾಕಿ ಆಟಗಾರ ಎಸ್.ವಿ. ಸುನಿಲ್ ಅವರ ತಂದೆ ದಿ. ವಿಠಲಾಚಾರ್ಯ ಸ್ಮಾರಕ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ನಡುವಿನ ಹಾಕಿ ಪಂದ್ಯಾವಳಿಯಲ್ಲಿ ಆತಿಥೇಯ ಡಾಲ್ಫಿನ್ಸ್ ಸ್ಫೋಟ್ರ್ಸ್ ಕ್ಲಬ್ ತಂಡವನ್ನು ಮಣಿಸುವ ಮೂಲಕ ಹಾತೂರು ಸ್ಪೋಟ್ರ್ಸ್ ಕ್ಲಬ್ ತಂಡ ಪ್ರತಿಷ್ಠಿತ ಕಪ್‍ನ್ನು ತನ್ನದಾಗಿಸಿಕೊಂಡಿತು.
ಆತಿಥೇಯ ಸೋಮವಾರಪೇಟೆ ಡಾಲ್ಫೀನ್ಸ್ ಸ್ಪೋಟ್ರ್ಸ್ ಕ್ಲಬ್ ತಂಡ ದ್ವಿತೀಯ ಸ್ಥಾನ ಗಳಿಸಿತು. ಪಂದ್ಯದ ಪ್ರಥಮ ಅವಧಿಯ ಎರಡನೆ ನಿಮಿಷದಲ್ಲಿ ಡಾಲ್ಫೀನ್ಸ್ ತಂಡದ ಅಭರಣ್ ಸೊಗಸಾದ ಪಾಸ್ ವೊಂದರಲ್ಲಿ ಗೋಲಿಯ ಕಣ್ತಪ್ಪಿಸಿ ಗೋಲು ಗಳಿಸುವಲ್ಲಿ ಯಶಸ್ವಿ ಯಾದರು.
ಪಂದ್ಯದ ದ್ವಿತೀಯಾರ್ಧದಲ್ಲಿ ಹಾತೂರು ತಂಡ ವೇಗದ ಆಟಗಾರ ನಯೀಂ 49ನೇ ನಿಮಿಷದಲ್ಲಿ ಉತ್ತಮ ಪಾಸ್‍ವೊಂದರಲ್ಲಿ ಗೋಲು ಗಳಿಸುವ ಮೂಲಕ 2-1 ಮುನ್ನಡೆಯನ್ನು ತಂಡಕ್ಕೆ ನೀಡಿದರು. ಇದೇ ಸಂದರ್ಭ ಡಾಲ್ಫೀನ್ಸ್ ತಂಡಕ್ಕೆ 3 ಪೆನಾಲ್ಟಿ ಕಾರ್ನರ್ ಅವಕಾಶ ದೊರೆತರೂ ಅಹ ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ತಂಡದ ಆಟಗಾರರು ವಿಫಲರಾದರು. ಅಂತಿಮವಾಗಿ ಹಾತೂರು ತಂಡ ಗೆಲುವಿನ ನಗೆ ಬೀರಿತು.
ಪಂದ್ಯಾಟದ ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಹಾತೂರು ತಂಡದ ನಯೀಂ, ಉತ್ತಮ ಮುನ್ನಡೆ ಆಟಗಾರನಾಗಿ ಡಾಲ್ಪೀನ್ಸ್ ತಂಡದ ಆಭರಣ್ ಸುದೇವ್, ಉತ್ತಮ ಮಿಡ್‍ಫೀಲ್ಡರ್ ಆಗಿ ಡಾಲ್ಫೀನ್ಸ್ ತಂಡದ ಪೃಥ್ವಿ ಗೌಡಳ್ಳಿ, ಉತ್ತಮ ರಕ್ಷಣಾ ಆಟಗಾರನಾಗಿ ಹಾತೂರು ಅಪ್ಪಯ್ಯ, ಉತ್ತಮ ಗೋಲ್ ಕೀಪರ್ ಡಾಲ್ಫೀನ್ಸ್‍ನ ಮಹಾನ್ ಗೌಡ, ಉತ್ತಮ ಉದಯೋನ್ಮುಖ ಅತಿಥಿ ಆಟಗಾರ ನಾಗಿ ಹಾತೂರು ತಂಡದ ಸಂತೋಷ್, ಸ್ಥಳೀಯ ಉದಯೋನ್ಮುಖ ಆಟಗಾರನಾಗಿ ಡಾಲ್ಫೀನ್ಸ್ ತಂಡದ ಶÀಮಂತ್ ಪ್ರಶಸ್ತಿ ಪಡೆದರು.
ಶಾಸಕ ಅಪ್ಪಚ್ಚು ರಂಜನ್, ಎಸ್.ಎಲ್.ಎನ್. ಕಾಫಿ ಸಂಸ್ಥೆಯ ಮಾಲೀಕ ಸಾತಪ್ಪನ್, ಅಂತರಾಷ್ಟ್ರೀಯ ಹಾಕಿ ಆಟಗಾರರಾದ ಎಸ್.ವಿ. ಸುನಿಲ್, ಪಿ.ಆರ್. ಶ್ರೀಜೇಶ್(ಭಾರತ ತಂಡದ ನಾಯಕ), ವಿಕ್ರಂಕಾಂತ್, ವಿ.ಎಸ್. ವಿನಯ್, ಹರಿಪ್ರಸಾದ್, ಅಂತರರಾಷ್ಟ್ರೀಯ ಹಾಕಿ ತೀರ್ಪುಗಾರರಾದ ಆರ್.ವಿ. ರಘುಪ್ರಸಾದ್ ಅವರುಗಳು ಬಹುಮಾನ ವಿತರಿಸಿದರು.
ಪ್ರಥಮ ಬಹುಮಾನವಾಗಿ ರೂ. 50 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನವಾಗಿ ರೂ. 30 ಸಾವಿರ ನಗದು ಬಹುಮಾನ ಮತ್ತು ಆಕರ್ಷಕ ಟ್ರೋಫಿ ನೀಡಲಾಯಿತು. ಇದರೊಂದಿಗೆ ಪ್ರತಿ ಆಟಗಾರನಿಗೆ ವೈಯುಕ್ತಿಕ ಬಹುಮಾನ ನೀಡಲಾಯಿತು.
ತೀರ್ಪುಗಾರರಾಗಿ ಹಾಕಿ ಕೂರ್ಗ್‍ನ ನೆಲ್ಲಮಕ್ಕಡ ಪವನ್, ಕೋಡಿಮಣಿಯಂಡ ಗಣಪತಿ, ಕಾಟುಮಣಿಯಂಡ ಕಾರ್ತಿಕ್ ಕಾರ್ಯಪ್ಪ, ಚೋಯಮಾಡಂಡ ಚಂಗಪ್ಪ, ಚೈಯಂಡ ಅಪ್ಪಚ್ಚು, ಕುಪ್ಪಂಡ ದಿಲನ್, ಮೂಕಚಂಡ ನಾಚಪ್ಪ, ವಿನೋದ್, ವಿಶ್ವ ಒಕ್ಕಲಿಗ ಬ್ರಿಗೇಡ್‍ನ ರಾಜ್ಯಾಧ್ಯಕ್ಷ ಗಿರೀಶ್ ಮಲ್ಲಪ್ಪ ಅವರುಗಳು ಕಾರ್ಯನಿರ್ವಹಿಸಿದರು.