ಕುಶಾಲನಗರ, ಜ. 8: ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘ ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ತಾ. 16 ರಿಂದ ರಾಜ್ಯದಾದ್ಯಂತ ಅನಿರ್ಧಿಷ್ಟಾವಧಿ ಮುಷ್ಕರ ಹೂಡಲಿದೆ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘದ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ಆರ್.ಭರತ್ ತಿಳಿಸಿದ್ದಾರೆ. ಅವರು ಕುಶಾಲನಗರದಲ್ಲಿ ಸಂಘದ 3ನೇ ಜಿಲ್ಲಾ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕುಶಾಲನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ನಡೆದ ಬಹಿರಂಗ ಅಧಿವೇಶನದಲ್ಲಿ ಮಾತನಾಡಿದ ಅವರು, ನೌಕರರ ಭದ್ರತೆ, ಕಾರ್ಮಿಕರ ವಿವಿಧ ಬೇಡಿಕೆಗಳಿಗೆ ಹಕ್ಕೊತ್ತಾಯ ಮಾಡಲಾಗುತ್ತದೆ. ಸಂಘಟನೆಯ ಮೂಲಕ ಒಗ್ಗಟ್ಟಿನೊಂದಿಗೆ ಕಾರ್ಮಿಕರಿಗೆ ನ್ಯಾಯ ಒದಗಿಸಲು ನಿರಂತರ ಹೋರಾಟ ಮುಂದುವರೆಯುವದಾಗಿ ಅವರು ತಿಳಿಸಿದರು.

ಈ ಸಂದರ್ಭ ಮಾತನಾಡಿದ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ವಿ.ಪಿ.ಶಶಿಧರ್ ಮತ್ತು ಮಾಜಿ ಅಧ್ಯಕ್ಷ ವಿಜಯನ್, ನೌಕರರ ಹೋರಾಟಕ್ಕೆ ತಾವುಗಳು ಸದಾ ಬೆಂಬಲ ನೀಡುವದಾಗಿ ತಿಳಿಸಿದರು.

ಸಮ್ಮೇಳನ ಉದ್ಘಾಟಿಸಿದ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಬಿ.ನಾಡಗೌಡ, ನೌಕರರ ಬದುಕಿಗೆ ಸರಕಾರ ಖಾತ್ರಿ ನೀಡುವಂತಾಗಬೇಕು. ಸೇವಾ ಭದ್ರತೆಗೆ ಸರಕಾರ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭ ವಿಮಾ ನೌಕರರ ಸಂಘದ ಮೈಸೂರು ವಿಭಾಗದ ಅಧ್ಯಕ್ಷ ವಿಜಯಕುಮಾರ್, ಜಿಲ್ಲಾ ಸಿಐಟಿಯು ಕಾರ್ಯದರ್ಶಿ ಹೆಚ್.ಬಿ.ರಮೇಶ್, ಜಿಲ್ಲಾ ಜನರಲ್ ವರ್ಕರ್ಸ್ ಯೂನಿಯನ್ ಕಾರ್ಯದರ್ಶಿ ಮಹದೇವ್, ಜಿಲ್ಲಾ ತೋಟ ಕಾರ್ಮಿಕರ ಸಂಘದ ಕಾರ್ಯದರ್ಶಿ ಎನ್.ಡಿ.ಕುಟ್ಟಪ್ಪನ್ ನೌಕರರನ್ನು ಉದ್ದೇಶಿಸಿ ಮಾತನಾಡಿದರು.

ನಂತರ ನಡೆದ ಪ್ರತಿನಿಧಿ ಸಮಾವೇಶವನ್ನು ಸಿಐಟಿಯು ಜಿಲ್ಲಾಧ್ಯಕ್ಷ ಐ.ಆರ್.ದುರ್ಗಪ್ರಸಾದ್ ಉದ್ಘಾಟಿಸಿದರು.

ಕೊಡಗು ಜಿಲ್ಲೆಯ ಸೋಮವಾರಪೇಟೆ ಸೇರಿದಂತೆ 3 ತಾಲೂಕುಗಳ ನೌಕರರ ಸಂಘದ ಅಧ್ಯಕ್ಷರಾದ ಪುನೀತ್‍ಕುಮಾರ್, ಪೆಮ್ಮಯ್ಯ, ಅನೀಶ್ ಅವರುಗಳು ಪಾಲ್ಗೊಂಡಿದ್ದರು.

ಸಮಾವೇಶಕ್ಕೂ ಮುನ್ನ ಕುಶಾಲನಗರದ ಮಾರಿಯಮ್ಮ ದೇವಾಲಯದ ಬಳಿಯಿಂದ ಬೃಹತ್ ಮೆರವಣಿಗೆ ನಡೆಯಿತು.