ಮಡಿಕೇರಿ, ನ. 17: ಬಗೆ ಬಗೆ ವೇಷ ತೊಟ್ಟ ಪುಟಾಣಿ ಮಕ್ಕಳು... ಒಬ್ಬರೊನ್ನೊಬ್ಬರು ನೋಡಿ ನಲಿದು, ಆಲಂಗಿಸಿ, ಕುಣಿದು ಕುಪ್ಪಳಿಸಿದರೆ. ಇವರ ಉಸ್ತುವಾರಿ ಗಮನಿಸಿ ತಿದ್ದಿ ತೀಡುವ ಕಾರ್ಯಕರ್ತೆಯರು, ನೃತ್ಯ, ನಾಟಕದ ಮೂಲಕ ತಮ್ಮ ದುಗುಡ ಮರೆತರು... ಇವೆಲ್ಲವೂ ನಡೆದದ್ದು ಹಾಕತ್ತೂರಿನ ಕುವೆಂಪು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಮೂರ್ನಾಡು ಹಾಗೂ ಮರಗೋಡು ವೃತ್ತದ ಎಲ್ಲಾ ಅಂಗನವಾಡಿಗಳ ಮಕ್ಕಳು ಹಾಗೂ ಕಾರ್ಯಕರ್ತೆಯರನ್ನು ಒಂದೆಡೆ ಸೇರಿಸಿ ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ವೃತ್ತದ 39 ಅಂಗನವಾಡಿಗಳ ಮಕ್ಕಳನ್ನು ಒಂದೆಡೆ ಸೇರಿಸಲಾಗಿತ್ತು. ಮಕ್ಕಳಿಗೆ ವಿವಿಧ ಸ್ಪರ್ಧೆಗಳು, ಛದ್ಮವೇಷ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಾರ್ಯಕರ್ತೆಯರಿಗೂ ನೃತ್ಯ, ನಾಟಕದಂತಹ ಚಟುವಟಿಕೆಗಳನ್ನು ನಡೆಸಲಾಯಿತು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೋಹನ್ ಪ್ರಭು ಅವರು ಕಾರ್ಯಕ್ರಮ ಉದ್ಘಾಟನೆ ಮಾಡಿ ಮಕ್ಕಳ ಮತ್ತು ಮಹಿಳೆಯರ ಹಕ್ಕುಗಳ ಬಗ್ಗೆ ತಿಳಿಸಿದರು. ಹಾಕತ್ತೂರು ಗ್ರಾ.ಪಂ. ಅಧ್ಯಕ್ಷೆ ಶಾರದ, ತಾ.ಪಂ. ಸದಸ್ಯೆ ಕುಮುದಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ದಮಯಂತಿ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಡಂಡ ಸವಿತಾ ಕೀರ್ತನ್, ಹಾಕತ್ತೂರು ಶಾಲೆ ಮುಖ್ಯೋಪಾಧ್ಯಾಯ ಸ್ವಾಮಿ ಹಾಜರಿದ್ದರು. 39 ಅಂಗನವಾಡಿಗೆ ಸಂಬಂಧಿಸಿದ ಮಕ್ಕಳಿಂದ ಛದ್ಮವೇಷ, ಸಾಂಸ್ಕøತಿಕ ಕಾರ್ಯಕ್ರಮ, ಭಾಷಣ, ಅಂಗನವಾಡಿ ಕಾರ್ಯಕರ್ತೆಯರಿಂದ ನೃತ್ಯ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿತು.

ಈ ಸಂದರ್ಭ ಕಾರ್ಯಕರ್ತೆಯರು, ಪ್ರಬಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಅವರ ಸೇವಾ ಕಾರ್ಯವನ್ನು ಮೆಚ್ಚಿ ಅವರನ್ನು ಸನ್ಮಾನಿಸಿ, ಅಭಿನಂದನೆ ಪತ್ರವನ್ನು ನೀಡಿ ಗೌರವಿಸಿದರು.