ಕೂಡಿಗೆ, ನ. 1: ಕೂಡಿಗೆ ಹಾಲು ಉತ್ಪದಾಕರ ಮಹಿಳಾ ಸಹಕಾರ ಸಂಘದ ವತಿಯಿಂದ ಹಾಸನ ಹಾಲು ಒಕ್ಕೂಟದ ಆಶ್ರಯದಲ್ಲಿ ಹಾಲು ಉತ್ಪಾದಕ ರೈತರ ಹಸುಗಳಿಗೆ ಲಸಿಕೆ ಹಾಕುವ ಶಿಬಿರವನ್ನು ಕೂಡಿಗೆ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಹಾಸನ ಹಾಲು ಒಕ್ಕೂಟಕ್ಕೆ ಸಂಬಂಧಪಟ್ಟ ವೈದ್ಯಾಧಿಕಾರಿಗಳಾದ ಸಂತೋಷ್ ಮತ್ತು ತಂಡ ಈ ವ್ಯಾಪ್ತಿಯ ಹಸುಗಳ ಗರ್ಭಧರಿಸುವಿಕೆ ತೊಂದರೆಗಳನ್ನು ತಪಾಸಣೆ ಮಾಡಿದರು.

ನಂತರ ಕಾಲುಬಾಯಿ ಜ್ವರದ ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆ ಹಾಕಲಾಯಿತು. ಅಲ್ಲದೆ, ಜರ್ಸಿ ಹಸುಗಳ ಹಾಗೂ ನಾಡ ಹಸುಗಳ ಬೆಳವಣಿಗೆಯ ಅಂತರದ ಬಗ್ಗೆ ಹಾಗೂ ಪೌಷ್ಟಿಕ ಆಹಾರ ನೀಡುವ ಬಗ್ಗೆ, ಹಸಿರು ಪಶು ಆಹಾರ ಉಪಯೋಗಿಸುವ ಬಗ್ಗೆ ಮಾಹಿತಿ ನೀಡಲಾಯಿತು.

ಈ ಸಂದರ್ಭ ಹಾಲು ಉತ್ಪಾದಕ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಕಮಲ, ಕಾರ್ಯದರ್ಶಿ ಲಕ್ಷ್ಮಿ, ಕಾರ್ಯಕಾರಿ ಮಂಡಳಿ ಹಾಗೂ ಹಾಸನ ಹಾಲು ಒಕ್ಕೂಟದ ಕೂಡಿಗೆ ಘಟಕದ ವಿಸ್ತರಣಾಧಿಕಾರಿ ಪ್ರಕಾಶ್ ಸೇರಿದಂತೆ ಸಿಬ್ಬಂದಿವರ್ಗ ಇದ್ದರು.