ಕುಶಾಲನಗರ, ಜ. 26: ಕೂಡಿಗೆ ಸೈನಿಕ ಶಾಲೆಯ ಜನರಲ್ ತಿಮ್ಮಯ್ಯ ಪೆರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಶಾಲೆಯ ಪ್ರಾಂಶುಪಾಲ ಕ್ಯಾಪ್ಟನ್ ಬೆನ್ ಹೆಚ್ ಬೆರ್ಸನ್ ವಿದ್ಯಾರ್ಥಿಗಳ ಪಥಸಂಚಲನದ ಗೌರವ ವಂದನೆ ಸ್ವೀಕರಿಸಿದರು. ಶಾಲಾ ವಿದ್ಯಾರ್ಥಿ ನಾಯಕನಾದ ಕೆಡೆಟ್ ಶುಭಂ ಪಾಟೀಲ್ ನೇತೃತ್ವದಲ್ಲಿ ಆಕರ್ಷಕ ಪಥಸಂಚಲನವನ್ನು ನಡೆಯಿತು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರು ಶಾಲಾ ವಿದ್ಯಾರ್ಥಿ ನಾಯಕನಾದ ಕೆಡೆಟ್ ಶುಭಂ ಪಾಟೀಲ್ಗೆ ಶಾಲೆಯ ‘ಅತ್ಯುತ್ತಮ ಆಲ್ ರೌಂಡರ್ ಪ್ರಶಸ್ತಿ’ ಮತ್ತು ‘ಅತ್ಯುತ್ತಮ ಶೈಕ್ಷಣಿಕ ವಿದ್ಯಾರ್ಥಿ’ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಕೆಡೆಟ್ ಬಿ. ಕೆ. ಮಹೇಶ್ ‘ಶಾಲೆಯ ಅತ್ಯುತ್ತಮ ಕ್ರೀಡಾ ವಿದ್ಯಾರ್ಥಿ’ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ನಂತರ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಪ್ರಾಂಶುಪಾಲರು, ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳನ್ನು ಶ್ಲಾಘಿಸಿದರು. ಎಲ್ಲಾ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ತಲಪುವಲ್ಲಿ ಅವಿರತವಾಗಿ ಹೋರಾಟ ನಡೆಸಬೇಕು. ಜಗತ್ತಿನಲ್ಲಿ ಉತ್ತಮ ಸಾಧನೆ ಕೈಗೊಳ್ಳುವಾಗ ಎದುರಾಗುವ ಅಡೆ - ತಡೆಗಳನ್ನು ನಿವಾರಿಸಿ ಮುನ್ನುಗ್ಗುವಲ್ಲಿ ಎಚ್ಚರಿಕೆಯಿಂದಿರಬೇಕು ಎಂದು ತಿಳಿಸಿದ ಅವರು, ಶ್ರೀಮಂತಿಕೆಯ ಮೋಹದಲ್ಲಿ ಸಿಲುಕದಿರಿ ಮತ್ತು ಬೇರೆಯವರ ವಿಷಯಗಳಲ್ಲಿ ದುರಾಸೆಯನ್ನು ಹೊಂದದೇ ಇರುವಂತೆ ಸಲಹೆ ನೀಡಿದರು.
ಶಾಲೆಯು ತನ್ನ 12ನೇ ತರಗತಿಯ ವಿದ್ಯಾರ್ಥಿಗಳಿಗೆ ನಿರ್ಗಮನ ಪಥಸಂಚಲನ ಕಾರ್ಯಕ್ರಮವನ್ನು ಏರ್ಪಡಿಸುವದರ ಮೂಲಕ ಅವರ 7 ವರ್ಷದ ತರಬೇತಿಯ ಸಮಾರೋಪವನ್ನು ಹಮ್ಮಿಕೊಂಡಿತು. ಈ ನಿರ್ಗಮನ ಪಥಸಂಚಲನದಲ್ಲಿ ಒಟ್ಟು 61 ವಿದ್ಯಾರ್ಥಿಗಳಿದ್ದು, ಎಲ್ಲರೂ ತಮ್ಮ ಅತ್ಯುತ್ತಮ ಪಥ ಸಂಚಲನದ ಮೂಲಕ ಶಾಲೆಯ ಪ್ರಾಂಶುಪಾಲರಿಗೆ ಗೌರವ ವಂದನೆ ಸಲ್ಲಿಸುವ ಮೂಲಕ ನಿರ್ಗಮಿಸಿದರು.
ಗಣರಾಜ್ಯೋತ್ಸವ ಕಾರ್ಯಕ್ರಮದ ನಿಮಿತ್ತ ಶಾಲೆಯ ಕಿರಿಯ ವಿದ್ಯಾರ್ಥಿಗಳಿಂದ ರಚಿತ ‘ಮುಂಜಾನೆಯ ಹೂಗಳು’ ಎಂಬ ಶೀರ್ಷಿಕೆಯಡಿಯಲ್ಲಿ ದೇಶದ ಹುತಾತ್ಮರಿಗೆ ಗೌರವ ಸಲ್ಲಿಸುವ ನಿಮಿತ್ತ ಕಲಾ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಾಂಶುಪಾಲರು ಶಾಲೆಯ ವಿದ್ಯಾರ್ಥಿಗಳೊಂದಿಗೆ ರಾಷ್ಟ್ರದ ಹುತಾತ್ಮರಿಗೆ ಗೌರವ ಸಮರ್ಪಿಸಿದರು.