ಗೋಣಿಕೊಪ್ಪ, ಆ. 22: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಚೇರಿಯನ್ನು ಶಾಸಕ ಕೆ.ಜಿ.ಬೋಪಯ್ಯ ಉದ್ಘಾಟಿಸಿದರು.

ಪೊನ್ನಂಪೇಟೆ ಜಿಲ್ಲಾ ಪಂಚಾಯಿತಿ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಆವರಣದಲ್ಲಿ ರೂ.12.5 ಲಕ್ಷದಲ್ಲಿ ಕಟ್ಟಡವನ್ನು ನಿರ್ಮಿಸಲಾಗಿದೆ.

ಬಳಿಕ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ, ಕಚೇರಿ ಸಾರ್ವಜನಿಕರ ಅನುಕೂಲಕ್ಕೆ ಬಳಕೆಯಾಗಬೇಕು. ಕೇವಲ ಕಚೇರಿಯಾಗಿ ಉಳಿದು ಕೊಳ್ಳದೆ ಅಧಿಕಾರಿಗಳು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.

ಈ ಸಂದರ್ಭ ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್, ಸದಸ್ಯೆ ಆಶಾ ಪೂಣಚ್ಚ, ತಾಲೂಕು ಬಿ.ಜೆ.ಪಿ. ಅಧ್ಯಕ್ಷ ಅರುಣ್ ಭೀಮಯ್ಯ, ಕಾರ್ಯದರ್ಶಿ ಚೆಪ್ಪುಡಿರ ದಿನು, ಪೆಡರೇಷನ್ ಉಪಾಧ್ಯಕ್ಷ ಮಲ್ಲಂಡ ಮಧು ದೇವಯ್ಯ, ಕಾರ್ಯ ನಿರ್ವಹಣಾಧಿಕಾರಿ ಕಿರಣ್ ಪೆಡ್ನೇಕರ್, ಜಿಲ್ಲಾ ಕಾರ್ಯಪಾಲಕ ಇಂಜಿನಿಯರ್ ಪೂಣಚ್ಚ, ಕುಡಿಯುವ ನೀರು ಮತ್ತು ನೈರ್ಮಲ್ಯ ಕಾರ್ಯಪಾಲಕ ಇಂಜಿನಿಯರ್ ಲಕ್ಷ್ಮಿ ಕಾಂತ್ ಉಪಸ್ಥಿತರಿದ್ದರು.