ಮಡಿಕೇರಿ, ಆ. 26: ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿಯಮಬಾಹಿರವಾಗಿ ಕಚೇರಿಯ ಗುಮಾಸ್ತ ಹುದ್ದೆಗೆ ನೇಮಕಾತಿ ನಡೆಸಿದೆ ಎಂದು ಸಂಘದ ನಿರ್ದೇಶಕರಾದ ಹೆಚ್.ಬಿ. ಚಂದ್ರಪ್ಪ ಮತ್ತು ಕೆ.ಎಸ್. ಕೃಷ್ಣೇಗೌಡ ಅವರು ಮಾಡಿರುವ ಆರೋಪವನ್ನು ಹಾಲಿ ಅಧ್ಯಕ್ಷರೂ, ಉಪಾಧ್ಯಕ್ಷರೂ ಸೇರಿ ಇತರ 8 ಮಂದಿ ನಿರ್ದೇಶಕರು ನಿರಾಕರಿಸಿದ್ದಾರೆ.

ಈ ಕುರಿತು ಸ್ಪಷ್ಟೀಕರಣ ನೀಡಿರುವ ಸಂಘದ ಅಧ್ಯಕ್ಷ ಹೆಚ್.ಡಿ. ದಿನೇಶ್, ಉಪಾಧ್ಯಕ್ಷೆ ಪೊನ್ನಮ್ಮ ಇತರ ನಿರ್ದೇಶಕರು ಆರೋಪವನ್ನು ಅಲ್ಲಗಳೆದಿದ್ದಾರೆ. ಹಾಲಿ ಖಾಲಿ ಇರುವ ಹುದ್ದೆಗೆ ಆಡಳಿತ ಮಂಡಳಿಯಲ್ಲಿ ಈಗಾಗಲೇ ಹಿಂದಿನ ಮೂರು ಮಾಸಿಕ ಸಭೆಯಲ್ಲಿ ಆಡಳಿತ ಮಂಡಳಿಯ ಸರ್ವ ಸದಸ್ಯರ ಸಮ್ಮುಖದಲ್ಲಿ ಚರ್ಚಿಸಿ ತಾತ್ಕಾಲಿಕವಾಗಿ ಹಿರಿಯ ಗುಮಾಸ್ತ - ಲೆಕ್ಕಿಗರ ಹುದ್ದೆಯನ್ನು ಭರ್ತಿ ಮಾಡಲಾಗಿದೆ. ಮುಂದೆ ಇಲಾಖಾ ಅನುಮತಿ ಮೇರೆಗೆ ಆಡಳಿತ ಮಂಡಳಿಯಲ್ಲಿ ಚರ್ಚಿಸಿ ಮುಂದಿನ ಕ್ರಮ ಜರುಗಿಸಲಾಗುವದೆಂದು ಸರ್ವ ಸದಸ್ಯರ ಸಮ್ಮುಖದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಸಂಘದ ವಾರ್ಷಿಕ ವಹಿವಾಟು ರೂ. 36 ಕೋಟಿಗೂ ಮೀರಿದ್ದು, ಹೆಬ್ಬಾಲೆ, ತೊರೆನೂರು ಹಾಗೂ ಶಿರಂಗಾಲ ಈ ಮೂರು ಪಂಚಾಯಿತಿ ವ್ಯಪ್ತಿಯ ಸುಮಾರು 18 ಗ್ರಾಮಗಳು ಸಂಘದ ವ್ಯಾಪ್ತಿಗೆ ಬರುತ್ತದೆ. ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ಬ್ಯಾಂಕ್‍ಗಳಿಂದ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‍ಗಳಿಗೆ ರೈತರ ವ್ಯವಹಾರಗಳು ಹೆಚ್ಚಾಗಿ ಕಂಡು ಬಂದ ಹಿನ್ನೆಲೆ ಪ್ರಸ್ತುತ ನಮ್ಮ ಸಂಘದಲ್ಲಿ ಸಿಬ್ಬಂದಿಗಳ ಕೊರತೆಯ ಕಾರಣ ಸಂಘದ ಅಭಿವೃದ್ಧಿ ಮತ್ತು ಬೆಳವಣಿಗೆಯ ಹಿತದೃಷ್ಟಿಯಿಂದ ಮೇಲಿನ ತಾತ್ಕಾಲಿಕ ಹುದ್ದೆಯನ್ನು ನೇಮಕ ಮಾಡಿಕೊಂಡಿರುವದಷ್ಟೇ ಹೊರತೂ ಸಹಕಾರ ಸಂಘದ ಯಾವದೇ ನಿಯಮಗಳನ್ನು ಗಾಳಿಗೆ ತೂರಿರುವದಿಲ್ಲ. ಅಧ್ಯಕ್ಷರು ಮತ್ತು ಆಡಳಿತ ಮಂಡಳಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಸಿಬ್ಬಂದಿ ವರ್ಗ ಜವಾಬ್ದಾರಿಯುತವಾಗಿ ಹಾಗೂ ಗೌರವಯುತವಾಗಿ ಸಂಘದ ದೈನಂದಿನ ಕಾರ್ಯಗಳನ್ನು ನಿರ್ವಹಿಸಿಕೊಂಡು ಬರಲಾಗುತ್ತಿದೆ. ಸಂಘದ ಎರಡು ಜನ ನಿರ್ದೇಶಕರಾದ ಕೆ.ಎಸ್. ಕೃಷ್ಣೇಗೌಡ ಮತ್ತು ಹೆಚ್.ಬಿ. ಚಂದ್ರಪ್ಪ ಇವರುಗಳು ನೀಡಿರುವ ಹೇಳಿಕೆ ದುರುದ್ದೇಶಪೂರ್ವಕವಾಗಿದ್ದು, ಸಂಘದ ಮಾಸಿಕ ಸಭೆಗಳಲ್ಲಿ ಹಾಜರಿದ್ದರೂ ಮಾಸಿಕ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಅರಿವಿಲ್ಲದೆ ಬೇಜವಾಬ್ದಾರಿಯುತ ಹೇಳಿಕೆ ನೀಡಿರುವದು ಸತ್ಯಕ್ಕೆ ದೂರವಾದ ವಿಚಾರವಾಗಿರುತ್ತವೆ.

ಸಂಘದ ಹಿತದೃಷ್ಟಿಯಿಂದ ತಾತ್ಕಾಲಿಕ ಹುದ್ದೆ ಭರ್ತಿ ಮಾಡಲು ಸಹಕಾರ ಇಲಾಖೆಯ ಯಾವದೇ ಪೂರ್ವಾನುಮತಿ ಅಗತ್ಯ ಇಲ್ಲ. ಸಂಘದ ಆಡಳಿತ ಮಂಡಳಿಯೇ ಸಂಪೂರ್ಣ ಜವಾಬ್ದಾರಿಯಾಗಿರುತ್ತದೆ. ಆದರೂ ಕೊಡಗು ಜಿಲ್ಲಾ ಸಹಕಾರ ಉಪನಿಬಂಧಕರ ಮೌಖಿಕ ಸಲಹೆಯ ಮೇರೆಗೆ ಹುದ್ದೆಯನ್ನು ಭರ್ತಿ ಮಾಡಿರುವದಾಗಿ ಅವರುಗಳು ತಿಳಿಸಿದ್ದಾರೆ.