ವೀರಾಜಪೇಟೆ, ಡಿ. 4: ಗಾಂಧಿನಗರದ ಸರ್ವಜನಾಂಗ ಸಂಘಟನೆಯ ಪ್ರಥಮ ಸಮಾವೇಶವನ್ನು ತಾ. 31 ರಂದು ರಾತ್ರಿ 7 ಗಂಟೆಗೆ ತಾಲೂಕು ಮೈದಾನದ ರೋಟರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಅಧ್ಯಕ್ಷ ಪಿ.ಎ. ಮಂಜುನಾಥ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ್ ಅವರು, ಪ್ರಥಮ ಸಮಾವೇಶದ ಅಂಗವಾಗಿ ಕಳೆದ ಬಾರಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡ ಅಂಖಿತಾ ಲೋಬೋ ಹಾಗೂ ಎಂ.ಎ. ಅಸೀನಾ, ಎಸ್‍ಎಸ್‍ಎಲ್‍ಸಿಯಲ್ಲಿ ನಿಹಾರಿಕಾ, ಅಥ್ಲೆಟಿಕ್ಸ್‍ನಲ್ಲಿ 350ಕ್ಕೂ ಅಧಿಕ ಪದಕ ಪಡೆದೊಕೊಂಡು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಶುಶ್ರೂಷಕಿ ಎ.ಬಿ. ಲಲಿತಾ, ಸ್ವಚ್ಛತೆಯ ಆದ್ಯತೆಯಡಿಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಜನಪರ ಹೋರಾಟದಡಿಯಲ್ಲಿ ಪ್ರಮುಖ ಸಮಾಜ ಸೇವಕರಾದ ಮೇರಿಯಂಡ ಸಂಕೇತ್ ಪೂವಯ್ಯ ಇವರುಗಳನ್ನು ಸನ್ಮಾನಿಸಲಾಗುವದು. ನಂತರ ಕೇರಳದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಸಂಘಟನೆಯ ಗೌರವ ಅಧ್ಯಕ್ಷ ಮಾಳೇಟಿರ ಕಾಶಿ ಕುಂಞಪ್ಪ ಮಾತನಾಡಿ, ಸಮಾಜ ಸೇವೆ, ಪರಸ್ಪರ ಸಹಕಾರ, ನಿಷ್ಪಕ್ಷಪಾತದ ಸಾಮಾಜಿಕ ಸೇವೆ, ರಾಜಕೀಯ ಹಾಗೂ ವರ್ಗ ರಹಿತವಾಗಿ ಸಮಾಜ ಸೇವೆಯನ್ನು ಮುಖ್ಯ ಉದ್ದೇಶವನ್ನಾಗಿರಿಸಿ ಕೊಂಡಿರುವ ಸರ್ವ ಜನಾಂಗದ ಸಂಘಟನೆ ಪ್ರಥಮ ಹಂತದಲ್ಲಿ ಪಟ್ಟಣ ಪಂಚಾಯಿತಿಯ 16 ವಾರ್ಡ್‍ಗಳಲ್ಲಿ ಸಂಘಟನೆಯ ಪ್ರತಿನಿಧಿಗಳ ಮೂಲಕ ಸ್ಪಂದಿಸಲಿದೆ. ಹಂತ ಹಂತವಾಗಿ ಈ ಸೇವೆಯನ್ನು ತಾಲೂಕಿಗೂ ವಿಸ್ತರಿಸಲು ಸಂಘಟನೆ ಚಿಂತನೆ ನಡೆಸಿದೆ. ಬಡವರು, ಕಡು ಬಡವರು ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೂ ಸಂಘಟನೆ ಸೇವೆಗೆ ಮುಂದಾಗಿದೆ, ಈಗಾಗಲೇ ರಕ್ತ ದಾನ ಶಿಬಿರ ಸೇರಿದಂತೆ ಇತರ ಸಾಮಾಜಿಕ ಸೇವೆಯನ್ನು ಕೈಗೊಂಡು ಯಶಸ್ಸನ್ನು ಕಂಡಿದೆ ಎಂದರು.

ಗೋಷ್ಠಿಯಲ್ಲಿ ಮನೋಜ್ ಗೌಡ, ಮೈಕಲ್ ಮೆನೇಜಸ್, ಫಾಜಿಲ್, ರಚನ್, ಹನೀಶ್, ಸುರೇಶ್, ಬೇಬಿ ಸಿಕ್ವೇರಾ, ನೌಪಾಲ್, ಹರ್ಷ, ಕುಂಞÂೀರ ಸುನು ಗಣೇಶ್, ರಚನ್ ಉಪಸ್ಥಿತರಿದ್ದರು.