ಸಿದ್ದಾಪುರ, ಆ. 26: ಸಿದ್ದಾಪುರದ ವಿ ಸೆವೆನ್ ಯುವಕ ಸಂಘದ ವತಿಯಿಂದ ಸಿದ್ದಾಪುರದ ಸಂತ ಅನ್ನಮ್ಮ ಚರ್ಚ್‍ನ ಮೈದಾನದಲ್ಲಿ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕೆ. ಮಣಿ ಉದ್ಘಾಟಿಸಿದರು. ಮುಖ್ಯ ಅತಿಥಿ ಗಳಾಗಿ ಪಾಲ್ಗೊಂಡು ಮಾತ ನಾಡಿದ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಬಿ.ಜೆ.ಪಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್, ಕ್ರೀಡೆ ಸೌಹಾರ್ದತೆಯನ್ನು ಮೂಡಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ವಿ ಸೆವೆನ್ ಯುವಕ ಸಂಘದ ಅಧ್ಯಕ್ಷ ಎಂ.ಹೆಚ್. ಮೂಸಾ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸೇವಕ ಅಜ್ಜಿನಿಕಂಡ ರಾಜು ಅಪ್ಪಯ್ಯ, ಅಮೇಚೂರ್ ಕಬಡ್ಡಿಯ ಜಿಲ್ಲಾಧ್ಯಕ್ಷ ಉತ್ತಪ್ಪ, ಕಾರ್ಯದರ್ಶಿ ಕಪಿಲ್, ರಾಷ್ಟ್ರಮಟ್ಟದ ಓಟಗಾರ ಹೊಸೋಕ್ಲು ಚಿಣ್ಣಪ್ಪ, ಪೊಲೀಸ್ ಪೇದೆ ಕೃಷ್ಣ, ಕಬಡ್ಡಿ ಪಟು ಸತೀಶ್, ಹಿರಿಯ ನಿರ್ದೇಶಕ ಕೆ.ಸಿ. ಬಷೀರ್ ಇವರುಗಳನ್ನು ಸನ್ಮಾನಿಸಲಾಯಿತು.
ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಸಿದ್ದಾಪುರದ ವಿ ಸೆವೆನ್ ಯುವಕ ಸಂಘ, ದ್ವಿತೀಯ ಸ್ಥಾನವನ್ನು ಉಜಿರೆ ತಂಡ ಹಾಗೂ ತೃತೀಯ ಸ್ಥಾನವನ್ನು ಕುಶಾಲನಗರದ ಭೈರಪ್ಪ ಫ್ರೆಂಡ್ಸ್ ತಂಡ ಹಾಗೂ ಚತುರ್ಥ ಸ್ಥಾನವನ್ನು ಜೆ.ಬಿ.ಸಿ. ಕುಶಾಲನಗರ ತಂಡ ಪಡೆದುಕೊಂಡಿತು. ಉತ್ತಮ ಧಾಳಿಗಾರ ರತನ್ ಉಜಿರೆ, ಉತ್ತಮ ಹಿಡಿತಗಾರ ಅರುಣ್ ಉಜಿರೆ, ಸರಣಿ ಶ್ರೇಷ್ಠ ಅರ್ಜುನ್ ವಿ ಸೆವೆನ್, ಉತ್ತಮ ತಂಡ ಚೆಟ್ಟಳ್ಳಿ-ಮಲ್ಮೋಡ್ ತಂಡ ಪಡೆದುಕೊಂಡಿತು. ಗ್ರಾ.ಪಂ. ಉಪಾಧ್ಯಕ್ಷೆ ರಾಜೇಶ್ವರಿ, ಜಾಫರ್ ಆಲಿ, ಷಾಜನ್ ಇನ್ನಿತರರು ಹಾಜರಿದ್ದರು.