ಸೋಮವಾರಪೇಟೆ, ಜ. 1: ಸಮೀಪದ ಗರ್ವಾಲೆ ಗ್ರಾಮದಲ್ಲಿ ವೃದ್ಧೆಯೋರ್ವರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಕುಟುಂಬ ಸದಸ್ಯರು ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಗರ್ವಾಲೆ ಗ್ರಾಮದ ಬೊಳ್ಳಮ್ಮ (73) ಎಂಬವರು ಮನೆಯ ಮಂಚದ ಮೇಲೆ ಮಲಗಿರುವ ಸ್ಥಿತಿಯಲ್ಲಿ ಮೃತಪಟ್ಟಿದ್ದು, ಮಂಚದ ಕೆಳಗೆ ಪರ್ಸ್ ಸೇರಿದಂತೆ ಇತರ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಮೃತೆ ಬೊಳ್ಳಮ್ಮ ಅವರ ಮೂಗಿನಲ್ಲಿ ರಕ್ತ ಹೊರಬಂದಿದ್ದು, ಮುಖ ಊದಿಕೊಂಡಿದೆ. ಮನೆಯೊಳಗಿದ್ದ ಸೂಟ್ಕೇಸ್ ಒಡೆಯಲಾಗಿದ್ದು, ಹಣವನ್ನು ದೋಚಿರುವ ಅನುಮಾನ ಮೂಡಿದೆ.
ಬೊಳ್ಳಮ್ಮ ಅವರು ತಮ್ಮ ಮನೆಯಲ್ಲಿ ಒಂಟಿಯಾಗಿ ವಾಸವಿದ್ದು, ಈರ್ವರು ಪುತ್ರರಾದ ರಮೇಶ್ ಹಾಗೂ ಸುರೇಶ್ ಅವರುಗಳು ಬೆಂಗಳೂರಿನಲ್ಲಿದ್ದರೆ, ಮಗಳು ಮಡಿಕೇರಿಯಲ್ಲಿ ನೆಲೆಸಿದ್ದಾರೆ. ನಿನ್ನೆ ದಿನ ದೂರವಾಣಿ ಕರೆ ಮಾಡಿದ ಸಂದರ್ಭ ಸ್ವೀಕರಿಸದೇ ಇದ್ದುದರಿಂದ ಅನುಮಾನಗೊಂಡ ಮಕ್ಕಳು ಸ್ಥಳೀಯರಿಗೆ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ.
ಕಳೆದೆರಡು ದಿನಗಳ ಹಿಂದೆಯೇ ಘಟನೆ ನಡೆದಿರಬಹುದಾದ ಸಂಶಯವಿದ್ದು, ಮನೆಗೆ ನುಗ್ಗಿರುವ ಯಾರೋ ದುಷ್ಕರ್ಮಿಗಳು ಹಣಕ್ಕಾಗಿ ತಡಕಾಡಿ ಈ ಕೃತ್ಯ ಎಸಗಿರಬಹುದಾಗಿದ್ದು, ಬೊಳ್ಳಮ್ಮ ಅವರ ಸಾವಿನ ಬಗ್ಗೆ ಸಂಶಯವಿರುವದಾಗಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಶಿವಣ್ಣ, ಮಾದಾಪುರ ಪೊಲೀಸ್ ಎಎಸ್ಐ ರವೀಂದ್ರನಾಥ್ ಸೇರಿದಂತೆ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದಾರೆ.