ಶನಿವಾರಸಂತೆ, ಜು. 13: ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿರುವ ವಿವಾದಾಸ್ಪದ ವಾಣಿಜ್ಯ ಸಂಕೀರ್ಣದ ವಿಚಾರವಾಗಿ ಗ್ರಾ.ಪಂ. ಹಾಗೂ ಗುತ್ತಿಗೆದಾರರ ನಡುವೆ ನಡೆಯುತ್ತಿದ್ದ ವ್ಯಾಜ್ಯವನ್ನು ಹೈಕೋರ್ಟ್ ವಜಾ ಗೊಳಿಸಿದ್ದು, ಗ್ರಾ.ಪಂ. ಮತ್ತು ಅಧ್ಯಕ್ಷರಿಗೆ ತಾ. 1 ರಂದು ಆದೇಶ ಪತ್ರವನ್ನು ನೀಡಿದೆ. ಗ್ರಾ.ಪಂ.ನಿಂದ ನಿರ್ಮಿಸಲ್ಪಟ್ಟಿದ್ದ ವಾಣಿಜ್ಯ ಸಂಕೀರ್ಣವನ್ನು ಗುತ್ತಿಗೆದಾರ ಎಸ್.ಎನ್. ರಘು 12 ವರ್ಷಗಳ ಅವಧಿಗೆ ನೆಲಬಾಡಿಗೆ ಆಧಾರದ ಮೇಲೆ ಗುತ್ತಿಗೆ ಪಡೆದಿದ್ದರು. ಅವಧಿ ಮುಗಿದರೂ ಪಂಚಾಯಿತಿ ವಶಕ್ಕೆ ಬಿಟ್ಟುಕೊಡದ ಹಿನ್ನೆಲೆಯಲ್ಲಿ ಗ್ರಾ.ಪಂ. ಪೊಲೀಸರ ಬಂದೋಬಸ್ತ್‍ನಲ್ಲಿ ವಾಣಿಜ್ಯ ಸಂಕೀರ್ಣದ ಮಳಿಗೆಗಳಿಗೆ ಬೀಗ ಜಡಿದು ಸ್ವಾಧೀನಪಡಿಸಿ ಕೊಂಡಿತ್ತು. ಈ ವಿಚಾರವಾಗಿ ಗುತ್ತಿಗೆದಾರ ರಘು ಹೈಕೋರ್ಟ್‍ನಲ್ಲಿ ದಾವೆ ದಾಖಲಿಸಿದ್ದು, ಬೀಗ ಮುದ್ರೆ ಹಾಕಿದ್ದ ಪಂಚಾಯಿತಿ ಕ್ರಮದ ಬಗ್ಗೆ ಪ್ರಶ್ನಿಸಿದ್ದರು. ಹೈಕೋರ್ಟ್ ಬೀಗ ತೆರವುಗೊಳಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರಿಗೆ ಸೂಚನೆ ನೀಡಿದ್ದ ಪರಿಣಾಮ ಪುನಃ ವಾಣಿಜ್ಯ ಸಂಕೀರ್ಣದ ಮಳಿಗೆಗಳು ತೆರೆಯಲ್ಪಟ್ಟು ಗುತ್ತಿಗೆದಾರ ರಘು ಮಳಿಗೆ ಮಾಲೀಕರೊಂದಿಗೆ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದ್ದರು.

ನಂತರ ಈ ವಿಚಾರವಾಗಿ ಗ್ರಾಮ ಪಂಚಾಯಿತಿ ಪರವಾಗಿ ವಕೀಲ ಮಧು ಸೂದನ್ ಪಂಚಾಯಿತಿಯ ಸೂಕ್ತ ದಾಖಲಾತಿಗಳನ್ನೆಲ್ಲ ಹೈಕೋರ್ಟ್‍ಗೆ ಒದಗಿಸಿದ್ದರು. ಇದೀಗ ಸುದೀರ್ಘ ವಿಚಾರಣೆ ಬಳಿಕ ಹೈಕೋರ್ಟ್ ನ್ಯಾಯಮೂರ್ತಿಗಳು ವಾಣಿಜ್ಯ ಸಂಕೀರ್ಣಕ್ಕೆ ಲೈಸನ್ಸ್ ಕೊಡುವದು ಮತ್ತು ರದ್ದುಗೊಳಿಸುವಿಕೆ ಪಂಚಾಯಿತಿ ನಿರ್ಣಯವಾಗಿರುತ್ತದೆ. ವಾಣಿಜ್ಯ ಸಂಕೀರ್ಣದ ಭೂ ಮಾಲೀಕತ್ವದ ವಿಚಾರಕ್ಕೆ ಸಂಬಂಧಪಟ್ಟ ದಾಖಲಾತಿಗಳನ್ನು ಜು. 11 ರಿಂದ ಅಕ್ಟೋಬರ್ 11ರ ಒಳಗೆ 3 ತಿಂಗಳ ಅವಧಿಯೊಳಗೆ ಉಪ ವಿಭಾಗಾಧಿಕಾರಿ ಅವರಿಗೆ ಉಭಯ ಕಡೆಯವರು ಸಲ್ಲಿಸಿ, ವ್ಯಾಜ್ಯವನ್ನು ಇತ್ಯರ್ಥಗೊಳಿಸಿ ಕೊಳ್ಳಬೇಕು ಎಂದು ವ್ಯಾಜ್ಯ ವಜಾಗೊಳಿಸಿದ ಪತ್ರದಲ್ಲಿ ತಿಳಿಸಿದ್ದಾರೆ.

ಈ ವಿಚಾರವಾಗಿ ತಾಲೂಕು ಪಂಚಾಯಿತಿ ಸದಸ್ಯ ಬಿ.ಎಸ್. ಅನಂತ್ ಕುಮಾರ್ ಮಾತನಾಡಿ, ವಾಣಿಜ್ಯ ಸಂಕೀರ್ಣದ 4 ವರ್ಷಗಳ ವಿವಾದಕ್ಕೆ ತೆರೆ ಬೀಳುವ ಲಕ್ಷಣ ಗೋಚರಿಸುತ್ತಿದೆ. ವ್ಯಾಜ್ಯವನ್ನು ಹೈಕೋರ್ಟ್ ವಜಾ ಗೊಳಿಸಿದ್ದು, ಉಪ ವಿಭಾಗಾಧಿಕಾರಿ ಅವರ ನ್ಯಾಯಾಲಯಕ್ಕೆ ಹಸ್ತಾಂತರಿಸ ಲಾಗಿದೆ. ವಾಣಿಜ್ಯ ಸಂಕೀರ್ಣದ ಸಂಪೂರ್ಣ ದಾಖಲಾತಿಗಳು ಪಂಚಾಯಿತಿಯಲ್ಲಿದ್ದು ಸೂಕ್ತ ದಾಖ ಲಾತಿಗಳನ್ನು ಉಪ ವಿಭಾಗಾಧಿಕಾರಿ ಅವರಿಗೆ ಸಲ್ಲಿಸಲಾಗುವದು. ಭೂ ದಾಖಲಾತಿ ಮತ್ತು ಸರ್ವೆ ಕಾರ್ಯವನ್ನು ಇತ್ಯರ್ಥಪಡಿಸಿಕೊಂಡು ವಾಣಿಜ್ಯ ಸಂಕೀರ್ಣವನ್ನು ಪಂಚಾಯಿತಿ ಸುಪರ್ದಿಗೆ ಪಡೆದು ಕೊಳ್ಳಬಹುದು. ಲೈಸನ್ಸ್ ನೀಡುವ ಮತ್ತು ರದ್ದುಪಡಿಸುವ ಬಗ್ಗೆ ಪಂಚಾಯಿತಿಗೇ ಸೂಕ್ತ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವಿದೆ ಎಂದು ತಿಳಿಸಿದರು.