ಮಡಿಕೇರಿ, ಅ. 9: ಕೊಡಗಿನ ರಾಜಧಾನಿ ಮಡಿಕೇರಿಯ ಗಾಂಧಿ ಮೈದಾನ ಇಂದು ಅಕ್ಷರಷಃ ಮಕ್ಕಳ ಹಿಡಿತದಲ್ಲಿತ್ತು. ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದ ಪ್ರಯುಕ್ತ ಇಂದು ದಸರಾ ಜನೋತ್ಸವ ಸಾಂಸ್ಕøತಿಕ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಮಕ್ಕಳ ದಸರಾ ಕಾರ್ಯಕ್ರಮಕ್ಕೆ ಮಕ್ಕಳಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಮುಂಜಾನೆಯಿಂದ ಗಾಂಧಿಮೈದಾನದ ಕಲಾ ಸಂಭ್ರಮ ವೇದಿಕೆ ಎದುರು ಜಮಾಯಿಸಿದ್ದ ಚಿಣ್ಣರ ದಂಡು ‘ನಾವೇನು ಕಡಿಮೆಯಲ್ಲ’ ಎಂಬಂತೆ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ತೊಡಗಿಸಿ ಕೊಂಡಿತ್ತು.
ಮಕ್ಕಳ ಸಂತೆಯಲ್ಲಂತೂ ವ್ಯಾಪಾರ ಬಲು ಜೋರಾಗಿತ್ತು. ಹಣ್ಣು, ತರಕಾರಿ, ದಿನನಿತ್ಯ ಬಳಕೆಯ ಹಲವು ಪದಾರ್ಥಗಳ ಮಾರಾಟದಲ್ಲಿ ತಲ್ಲೀನರಾಗಿದ್ದ ಮಕ್ಕಳನ್ನು ಕಂಡು ನೈಜ ವ್ಯಾಪಾರಿಗಳು ಕೂಡ ಒಂದು ಕ್ಷಣ ತಲ್ಲಣಗೊಂಡರು ಎಂದರೆ ಅತಿಶಯೋಕ್ತಿಯಲ್ಲ.