ನಾಪೆÇೀಕ್ಲು, ಅ. 9: ಜಿಲ್ಲೆಯಿಂದ ಸೇನೆಗೆ ಇಬ್ಬರು ಜನರಲ್ ಹಾಗೂ ಇಪ್ಪತ್ತಾರು ಮಂದಿ ಲೆಫ್ಟಿನೆಂಟ್ ಜನರಲ್ ಸೇರಿದಂತೆ ಹಲವಾರು ಸೈನಿಕರನ್ನು ನೀಡಿದ ಕೊಡಗಿನ ಸೇವೆ ಅವಿಸ್ಮರಣೀಯ ಎಂದು ಸಂಸದ ಪ್ರತಾಪ್ ಸಿಂಹ ಅಭಿಪ್ರಾಯಪಟ್ಟರು.
ಸ್ಥಳೀಯ ಕೊಡವ ಸಮಾಜದಲ್ಲಿ ನಡೆದ ಕೈಲ್‍ಪೊಳ್ದ್ ಹಬ್ಬದ ಸಂತೋಷ ಕೂಟದಲ್ಲಿ ಸಮಾಜದ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ನಾಗರಿಕತೆಯನ್ನು ಉತ್ತಮವಾಗಿ ರೂಢಿಸಿಕೊಂಡಿರುವ, ಸೌಜನ್ಯವನ್ನು ಹೊಂದಿರುವ ಸಾಂಪ್ರದಾಯಿಕ ಉಡುಗೆ ತೊಡುಗೆಗಳಿಂದ ಕೊಡವ ವ್ಯವಹಾರಿಕ ರೀತಿ ಶ್ಲಾಘನೀಯ. ಇಂದು ಜಿಲ್ಲೆಯ ನೆಲ ಜಲ ಹಾಗೂ ಪರಿಸರ ಅಪಾಯವನ್ನು ಎದುರಿಸುತ್ತಿರುವ ಪರಿಸ್ಥಿತಿ ಕಂಡುಬರುತ್ತಿದೆ. ಎಲ್ಲರೂ ಒಗ್ಗಟ್ಟಾಗಿ ಸಾಂದರ್ಭಿಕ ಪರಿಸ್ಥಿತಿ ಯನ್ನು ಎದುರಿಸುವ ಮನೋಭಾ ವವನ್ನು ರೂಢಿಸಿಕೊಳ್ಳಬೇಕು ಎಂದರು.
ಜಿಲ್ಲೆಯ ಅಭಿವೃದ್ಧಿಗಾಗಿ ಸಂಸದರ ನಿಧಿಯಿಂದ ರೂ. 10 ಲಕ್ಷ ಹಾಗೂ ನಾಪೆÇೀಕ್ಲುವಿನಲ್ಲಿ ಏಪ್ರಿಲ್ 2017ರಲ್ಲಿ ನಡೆಯುವ ಹಾಕಿ ಉತ್ಸವಕ್ಕೆ ಅನುದಾನ ನೀಡುವ ಭರವಸೆ ನೀಡಿದರು. ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಇದ್ದು, ಎಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸಿ ಕೊಡಗಿನ ರಕ್ಷಣೆ ಮಾಡಬೇಕಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುನಿಲ್ ಸುಬ್ರಮಣಿ ಮಾತನಾಡಿ, ಟಿಪ್ಪು ಜಯಂತಿ ಆಚರಣೆಯನ್ನು ಜಿಲ್ಲೆಯಲ್ಲಿ ಆಚರಿಸದಂತೆ ಸರ್ಕಾರದ ಮೇಲೆ ಒತ್ತಡ ತರಲಾಗುವದು ಎಂದರು.