ಮಡಿಕೇರಿ, ಡಿ. 27: ಮಡಿಕೇರಿ ನಗರದ ರಸ್ತೆಗಳನ್ನು ಅಗೆದು-ಬಗೆದು ಹಾಕಲಾಗಿದೆ. ಮೊದಲೇ ಗುಂಡಿಗಳಿಂದ ತುಂಬಿ ರಸ್ತೆಗಳೇ ಕಾಣದಿದ್ದ ಈ ಸುಂದರ ನಗರ ಈಗ ಒಳ ಚರಂಡಿ ಹೆಸರಿನಲ್ಲಿ ಬೃಹತ್ ಪ್ರಪಾತಗಳು ನಿರ್ಮಾಣವಾಗಿ ರಸ್ತೆÀ್ತ ಎಂಬದು ಸಂಪೂರ್ಣ ನಿರ್ನಾಮವಾಗಿ ನಗರದಲ್ಲಿ ಸಂಚಾರ ವ್ಯವಸ್ಥೆ ಅಪಾಯದತ್ತ ಸಾಗುತ್ತಿದ್ದು ಹೀನಾಯ ಸ್ಥಿತಿ ತಲಪಿದೆ. 2015 ರ ಡಿಸೆಂಬರ್ನಲ್ಲಿ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ (ಏUWSಆಃ) ಯಿಂದÀ ರೂ.40.99 ಕೋಟಿಯ ಯೋಜನೆ ಸರಕಾರದ ಮಂಜೂರಾತಿ ಬಳಿಕ ಕಾರ್ಯಾರಂಭಗೊಂಡಿತು. ಅಹ್ಮದಾಬಾದ್ನ ಲಕ್ಷ್ಮಿ ಕಾಂಟ್ರಾಕ್ಟರ್ಸ್ಗೆ ಟೆಂಡರ್ ಮೂಲಕ ಗುತ್ತಿಗೆ ನೀಡಲಾಗಿದೆ. ಈ ಯೋಜನೆಗೆ ನಗರ ಸಭೆಯೂ ರೂ. 6.17 ಕೋಟಿ ಅನುದಾನ ನೀಡಬೇಕಾಗಿದ್ದು ಆ ಪೈಕಿ ಈಗಾಗಲೇ (ಮೊದಲ ಪುಟದಿಂದ) ರೂ. 4 ಕೋಟಿ 95 ಲಕ್ಷ ನೀಡಿರುವದಾಗಿ ಮಂಡಳಿಯ ಮಡಿಕೇರಿ ನಗರ ವಿಭಾಗದ ಸಹಾಯಕ ಇಂಜಿನಿಯರ್ ಆನಂದ್ “ಶಕ್ತಿ” ಗೆ ತಿಳಿಸಿದ್ದಾರೆ. ಮುಖ್ಯವಾಗಿ ನಗರ ವಸತಿಗಳ ಶೌಚಾಲಯದ ಸೆಪ್ಟಿಂಕ್ ಟ್ಯಾಂಕ್ನ ಮಲಿನ ಮತ್ತು ನೀರನ್ನು ಹರಿಯಬಿಡಲು ಈ ಯೋಜನೆ ರೂಪಿಸಲಾಗಿದೆ. ಒಟ್ಟು 3 ವರ್ಷದ ಈ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಎರಡು ವರ್ಷಗಳಿವೆ. ಕೆಲವೆಡೆ 6 ಇಂಚು ಗಾತ್ರದ ಪೈಪ್ಗಳನ್ನು ಮಾತ್ರ ಅಳವಡಿಸುತ್ತಿದ್ದು ಅಗತ್ಯವಿದ್ದ ಕಡೆ 2 ಅಡಿವರೆಗೂ ಪೈಪ್ಗಳನ್ನು ಅಳವಡಿಸುವ ಅವಕಾಶವಿದೆ ಎಂದು ಇಂಜಿನಿಯರ್ ತಿಳಿಸಿದ್ದಾರೆ.
ಈ ನಡುವೆ ಮಡಿಕೇರಿ ನಗರದ ರಸ್ತೆಗಳ ಸ್ಥಿತಿ ಏನಾಗಬಹುದು. ಈಗ ಅಗೆದು ಹಾಕಿರುವ ರಸ್ತೆಗಳನ್ನು ಕೂಡಲೇ ದುರಸ್ತಿ ಮಾಡುತ್ತಾರೆಯೇ, ಮತ್ತೆ ರಸ್ತೆ ಪೂರ್ಣವಾಗಿ ಸಿದ್ಧಗೊಳ್ಳ್ಳುತ್ತದೆಯೇ? ಎನ್ನುವ ತವಕದಿಂದ “ಶಕ್ತಿ” ಮಾಹಿತಿ ಬಯಸಿದಾಗ ನಾಗರಿಕರಿಗೆ ಕಳವಳಕಾರಿಯೆನಿಸುವ ಉತ್ತರ ದೊರಕಿದೆ. ಮಂಡಳಿಯ ನಗರ ವಿಭಾಗದ ಎ.ಇ. ಆನಂದ್ ಹಾಗೂ ಜೆ.ಇ. ಪ್ರಸನ್ನ ಅವರುಗಳಿಂದ ದೊರೆತ ಮಾಹಿತಿ ಕೇಳಿದವರಿಗೆ ನಿಜಕ್ಕೂ ಈ ಯೋಜನೆಯ ಪರಿಣಾಮ ಅಹಿತ ಎನಿಸದಿರದು.
ರಸ್ತೆಯನ್ನು ಅಗೆದು ಕಾಮಗಾರಿ ನಡೆಸಿದ ಸ್ಥಳವನ್ನಷ್ಟೆ ಮಂಡಳಿಯಿಂದ ದುರಸ್ತಿಪಡಿಸಲಾಗುತ್ತದೆ. ಇಡೀ ರಸ್ತೆÀ್ತಯನ್ನು ದುರಸ್ತಿ ಮಾಡುವ ಅವಕಾಶವಿಲ್ಲ. ತಾರು ರಸ್ತೆ ಅಗೆದ ಕಡೆ ತಾರನ್ನು ಹಾಕಿಕೊಡಲಾಗುತ್ತದೆ. ಸಿಮೆಂಟ್ ರಸ್ತೆಯಿದ್ದೆಡೆ ಸಿಮೆಂಟ್ ಬಳಸಿ ದುರಸ್ತಿಗೊಳಿಸಲಾಗುತ್ತದೆ. ಆದರೆ ಇದೆಲ್ಲವೂ ತೇಪೆ ಹಚ್ಚುವ ಕೆಲಸವಷ್ಟೆ. ಅದೂ ಕೂಡ ಕೆಲಸ ಮಾಡುವ ಸಂದರ್ಭ ಕೇಳಿದರೆ, ಮಡಿಕೇರಿ ನಾಗರಿಕರು ನಿದ್ದೆಗೆಡುವಂತಹುದು. 2015 ರ ಡಿಸೆÀಂಬರ್ನಿಂದ ನಡೆಸಿದ ಹಳೆಯ ಕೆಲಸಗಳ ರಸ್ತೆ ಗುಂಡಿಗಳನ್ನು ಈಗ ಮುಚ್ಚಲಾಗುತ್ತದೆ. ಇನ್ನುಳಿದಂತೆ ಈ ಗಷ್ಟೆ ಗುಂಡಿ ಅಗೆದು ಪೈಪ್ ಅಳವಡಿಸುತ್ತಿರುವ ಕಾಮಗಾರಿಗಳ ರಸ್ತೆಗಳಲ್ಲಿ ತೇಪೆ ಹಚ್ಚುವ ಕೆಲಸ ಮಾಡುವದು ಮುಂದಿನ ಮಳೆÀಗಾಲ ಕಳೆದ ಬಳಿಕವಂತೆ! ಈಗ ಒಂದು ಪ್ರಶ್ನೆಯನ್ನು ಮಂಡಳಿ ಅಧಿಕಾರಿಗಳ ಮುಂದೆ ಕೇಳಬೇಕಾಗಿದೆ. ಮಡಿಕೇರಿಯ ಭಾರೀ ಮಳೆಗೆ ಈಗ ಇರುವ ಅಲ್ಪ ಸ್ವಲ್ಪ ರಸ್ತೆ ಎನಿಸಿಕೊಂಡಿರುವ ತಳಪಾಯವೂ ಕಿತ್ತು ಹೋಗಿ, ಈಗ ನಡೆಸಿರುವ ಕಾಮಗಾರಿ ಎಲ್ಲಿ ನಡೆದಿದೆ ಎಂಬದೂ ಗೊತ್ತಾಗದೆ ತೇಪೆ ಹಚ್ಚುವ ಕೆಲಸವೂ ಅಸಾಧ್ಯವಾಗಬಹುದು. ನಾಗರಿಕರಿಗೆ ಭಾರಿ ಒಳಿತು ಮಾಡುವದಾಗಿ ಜಾರಿಗೊಂಡಿರುವ ಕೋಟಿಗಟ್ಟಲೆ ವೆಚ್ಚದ ಈ ಒಳ ಚರಂಡಿ ಯೋಜನೆ ಮೂಲಕ ಮಡಿಕೇರಿಯನ್ನು ಕೊಳಕು ಕೇರಿ ಮಾಡಿ ಹದಗೆಟ್ಟ ರಸ್ತೆಗಳಲ್ಲಿ ನಡೆಯಲೂ ಆಗದ ಸ್ಥಿತಿ ತಲುಪುವದಂತೂ ಖಚಿತ!
ಅಸಹಾಯಕ ನಗರ ಸಭೆ!
ಈ ನಡುವೆ ನಗರ ಸಭೆಯೇನಾದರೂ ಮಡಿಕೇರಿ ರಸ್ತೆ ದುರಸ್ತಿ ನಿರ್ವಹಿಸಲಿದೆಯೇ ಎಂದು ತಿಳಿಯಲು “ಶಕ್ತಿ” ಪ್ರಯತ್ನಿಸಿದಾಗ ನಾಗರಿಕರಿಗೆ ಆತಂಕ ಮೂಡಿಸುವ ಮತ್ತೊಂದು ಬೆಳವಣಿಗೆ ಬಹಿರಂಗಗೊಂಡಿತು. ಮಡಿಕೇರಿ ನಗರ ಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಹಾಗೂ ಆಯುಕ್ತೆ ಶುಭಾ ಇವರುಗಳನ್ನು “ಶಕ್ತಿ” ಸಂಪರ್ಕಿಸಿದಾಗ ಮಡಿಕೇರಿ ನಾಗರಿಕರಿಗೆ ಕಹಿ ಸುದ್ದಿ ಎದುರಾಗುವಂತಾಯಿತು. ಮಡಿಕೇರಿ ನಗರ ಸಭೆಯಿಂದ ನಗರದ ರಸ್ತೆ ದುರಸ್ತಿಗಾಗಿ ಯಾವದೇ ಯೋಜನೆ ಪ್ರಸ್ತುತ ಹಮ್ಮಿಕೊಂಡಿಲ್ಲ ಎಂಬದು ಸ್ಪಷ್ಟಗೊಂಡಿತು. ಒಳ ಚರಂಡಿ ಮಂಡಳಿಯವರು ಪೈಪ್ ಲೈನ್ಗಾಗಿ ಅಗೆದಿರುವ ರಸ್ತೆ ಪ್ರದೇಶವನ್ನಷ್ಟೇ ದುರಸ್ತಿಗೊಳಿಸುತ್ತಾರೆ. ನಗರ ಸಭೆಯೂ ಈ ಯೋಜನೆಗೆ ಅನುದಾನ ನೀಡಿದೆ. ಆದರೆ ಪ್ರಸಕ್ತ ರಸ್ತೆ ದುರಸ್ತಿ ಕೈಗೊಳ್ಳುವ ಯಾವ ಯೋಜನೆಯನ್ನೂ ನಗರಸಭೆ ಕೈಗೊಂಡಿಲ್ಲ. ಇದೀಗ ಅಗೆದಿರುವ ಪ್ರದೇಶದಲ್ಲಿ ಮಳೆಗಾಲಕ್ಕೆ ಮುನ್ನ ಕನಿಷ್ಟ “ಮೆಟಲಿಂಗ್” ಆದರೂ ಮಾಡಿ ಎಂದು ಒಳಚರಂಡಿ ಮಂಡಳಿಯ ಅಧಿಕಾರಗಳಲ್ಲಿ ಕೋರಿರುವದಾಗಿ ಈ ಪ್ರಮುಖರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
ಮಡಿಕೇರಿ ನಾಗರಿಕರು, ನಗರಕ್ಕೆ ಬರುವ ಪ್ರವಾಸಿಗರು ಇನ್ನು ಮುಂದೆ ಪ್ರಪಾತ ರಸ್ತೆಯಲ್ಲಿ ತಮ್ಮ ವಾಹನಗಳಲ್ಲಿ ಸಾಹಸೀ ಚಾಲನೆ ಮಾಡುವದೊಂದೇ ಪರಿಹಾರ ಮಾರ್ಗ ಎನ್ನುವಂತಾಗಿದೆ. ಇದರಿಂದಾಗಿ ಅವಘಡಗಳಿಗೂ ಕಾರಣವಾಗಬಹುದು. ಬೆಳಿಗ್ಗೆ ವೇಳೆ ‘ವಾಕ್’ ಹೋಗುವವರೂ ಈಗಾಗಲೇ ಗುಂಡಿ ಬಿದ್ದ ರಸ್ತೆಗಳಲ್ಲಿ ತಡಪಡಿಸುತ್ತಿದ್ದು. ಇನ್ನು ಕೆಲ ಕಾಲಾನಂತರ ಮೂಳೆ ಮರಿದುಕೊಂಡು ಆಸ್ಪತ್ರೆ ಸೇರುವ ಸನ್ನಿವೇಶವೂ ಬರಬಹುದು! ಈ ಬಗ್ಗೆ ಕ್ಷೇತ್ರದ ಶಾಸಕರುಗಳು, ನಗರಸಭಾ ಪ್ರಮುಖರು ಕೂಡಲೇ ಸಭೆ ಸೇರಿ ಮುಂದಿನ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ. ಉಸ್ತುವಾರಿ ಸಚಿವರ ಗಮನಕ್ಕೂ ತಂದು ಸಮಾಲೋಚಿಸಿ ಮಡಿಕೇರಿ ನಗರದ ರಸ್ತೆಗಳ ತುರ್ತು ಹಾಗೂ ಪೂರ್ಣ ಪ್ರಮಾಣದ ದುರಸ್ತಿಗೆ ಸರಕಾರದಿಂದ ಅಗತ್ಯ ಅನುದಾನ ಪಡೆಯುವ ಅನಿವಾರ್ಯತೆಯಿದೆ. ತಕ್ಷಣವೇ ನಗರಸಭೆ ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಎಚ್ಚತ್ತುಕೊಂಡು ಕಾರ್ಯೋನ್ಮುಖರಾಗಬೇಕಿದೆ. 3 ವರ್ಷಗಳ ದೀರ್ಘ ಕಾಲದವರೆÀಗೆ ಹಮ್ಮಿಕೊಂಡು ನಿತ್ಯ ಸಮಸ್ಯೆಗೆ ಕಾರಣವಾಗುತ್ತಿರುವ ಈ ಯೋಜನೆಯ ಅವಧಿಯನ್ನು ಮೊಟಕುಗೊಳಿಸಿ ಶೀಘ್ರ ಮುಕ್ತಾಯಕ್ಕೂ ನಾಂದಿ ಹಾಡಬೇಕಾಗಿದೆ.