ಮಡಿಕೇರಿ,ಡಿ.27: ಸಮಾಜದಲ್ಲಿ ಅನೇಕ ಪ್ರತಿಭೆಗಳಿದ್ದು ಅವಕಾಶದಿಂದ ವಂಚಿತರಾಗಿದ್ದಾರೆ. ಸ್ವಪ್ರಯತ್ನ, ಸಮಾಜದ ಬೆಂಬಲದೊಂದಿಗೆ ಸಾಧನೆ ಮಾಡಿ ಸಮಾಜಕ್ಕೆ ಹೆಸರು ತರಬೇಕು; ಇತರ ಸಮಾಜಗಳಿಗೆ ಮಾದರಿಯಾಗಬೇಕೆಂದು ಶಾಸಕ ಕೊಂಬಾರನ ಜಿ. ಬೋಪಯ್ಯ ಹೇಳಿದರು. ಕೊಡಗು ಗೌಡ ಸಮಾಜ ವತಿಯಿಂದ ಏರ್ಪಡಿಸಲಾಗಿದ್ದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು. ಸಾಧಕರು ಇನ್ನೂ ಹೆಚ್ಚಾಗಿ ಸಾಧನೆ ಮಾಡಬೇಕು ಹಾಗೂ ಇತರರಿಗೆ ಸ್ಫೂರ್ತಿಯಾಗಬೇಕೆಂಬ ಹಿನ್ನೆಲೆಯಲ್ಲಿ ಸನ್ಮಾನ ಮಾಡುತ್ತಿರುವದು ಉತ್ತಮ ಕಾರ್ಯವಾಗಿದೆ. ಮಡಿಕೇರಿ ನಗರ ಸಭೆಯಲ್ಲಿ ಕಾವೇರಮ್ಮ ಅವರ ಅಧ್ಯಕ್ಷಾವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ, ಧೈರ್ಯದಿಂದ ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದಲ್ಲದೆ ಸ್ವಾತಂತ್ರ್ಯ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯಗೌಡರ ಪ್ರತಿಮೆ ಸ್ಥಾಪನೆಗೆ ಜಾಗ ನೀಡಿದ್ದಾರೆ. ಒಳಚರಂಡಿ ಕಾಮಗಾರಿ ಕೂಡ ಅವರ ಅವಧಿಯಲ್ಲಿ ತಾನು ಶಾಸಕನಾಗಿದ್ದಾಗ ಪ್ರಸ್ತಾವನೆ ಸಲ್ಲಿಸಿದ್ದು ಇದೀಗ ಕಾಮಗಾರಿ ಪ್ರಗತಿಯಲ್ಲಿದೆ, ಕುಶಾಲನಗರದಲ್ಲೂ ಅಭಿವೃದ್ಧಿ ಕಾರ್ಯಗಳಾಗುತ್ತಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಪಕ್ಷ ಬೇಧ ಮರೆತು ಸಹಕಾರ ನೀಡಬೇಕು, ತಮಗೆ ಲಭಿಸಿರುವ ಜವಾಬ್ದಾರಿಯನ್ನು ಸಮರ್ತವಾಗಿ ನಿರ್ವಹಿಸಿ ಮಾದರಿಯಾಗಬೇಕೆಂದು ಹೇಳಿದರು. ಸಮಾಜದಲ್ಲಿ ಸಾಕಷ್ಟು ಆದರ್ಶ ವ್ಯಕ್ತಿಗಳಿದ್ದು, ಹಿರಿಯರ ಕನಸು ನನಸಾಗುವ ಕಾಲ ಹತ್ತಿರವಾಗುತ್ತಿದೆ. ಗೌಡ ಸಮಾಜ ಆದರ್ಶ ಸಮಾಜ ವಾಗಲಿ ಎಂದು ಆಶಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಗೌಡ ಸಮಾಜದ ಮಾಜಿ ಅಧ್ಯಕ್ಷ ಪೈಕೇರ ಅನಂತ್ ರಾಂ, ಹತ್ತು ಕುಟುಂಬ ಹದಿನೆಂಟು ಗೋತ್ರಕ್ಕೆ ಸೇರಿದ ಗೌಡ ಜನಾಂಗ ಬಾಂಧವರು ರೈತಾಪಿ ವರ್ಗದವರಾಗಿದ್ದು, ವ್ಯವಸಾಯವನ್ನೇ ಮುಖ್ಯ ಕಸುಬನ್ನಾಗಿ ಮುಂದುವರಿಸಿಕೊಂಡು ಬರುತ್ತಿದ್ದಾರೆ, ಜನಾಂಗ ಬಾಂಧವರು ಇನ್ನಷ್ಟು ಸಾಧನೆ ಮಾಡುವದರೊಂದಿಗೆ ಅಭಿವೃದ್ಧಿ ಹೊಂದಬೇಕು. ಸಮಾಜ ದಲ್ಲಿ ಗುರುತಿಸಿಕೊಳ್ಳಬೇಕೆಂದು ಹೇಳಿದರು. ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಹಾಗೂ ಅಂದು ವಿಧಾನ ಸಭಾಧ್ಯಕ್ಷರಾಗಿದ್ದ ಕೆ.ಜಿ.ಬೋಪಯ್ಯ ಅವರುಗಳ ಮುತುವರ್ಜಿಯಿಂದ ನಮಗೆ ಭಾಷಾ ಅಕಾಡೆಮಿ ಲಭಿಸಿದೆ. ಇದೀಗ ಅಕಾಡೆಮಿ ಉತ್ತಮ ಕಾರ್ಯವನ್ನು ಮಾಡುತ್ತಿದೆ, ಇದರಿಂದ ನಾವೂ ಕೂಡ ಇತರ ಸಮಾಜದೊಂದಿಗೆ ಸಮಾನವಾಗಿ ಗುರುತಿಸಿಕೊಳ್ಳುತ್ತಿದ್ದೇವೆ ಹಾಗೂ ರಾಷ್ಟ್ರಮಟ್ಟದಲ್ಲೂ ಗುರುತಿಸಿಕೊಳ್ಳುವಂತಾಗಿದೆ ಎಂದು ಹೇಳಿದರು. ಸಂಘ - ಸಂಸ್ಥೆಗಳನ್ನು ಕಟ್ಟುವದು ಸುಲಭ ಅದನ್ನು ಸಮರ್ಥವಾಗಿ ನಡೆಸಿಕೊಂಡು ಹೋಗುವದು ಮುಖ್ಯವೆಂದ ಅವರು ತಮಗೆ ಸಹಕಾರ ನೀಡಿದವರನ್ನು ಸ್ಮರಿಸಿಕೊಂಡರು.

ನಗರ ಸಭಾಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ ಅವರು, ಮನೆ, ಶಾಲೆಯಲ್ಲಿ ಗುರುಗಳಿರುವಂತೆ ರಾಜಕೀಯದಲ್ಲೂ ಗುರುಗಳಿರಬೇಕು. ಎಲ್ಲರೂ ಒಗ್ಗಟ್ಟಾಗಿ ಅಭಿವೃದ್ಧಿಯತ್ತ ಸಾಗುವ ಎಂದು ಹೇಳಿದರು.

ತಾ.ಪಂ.ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಕುಶಾಲನಗರ ಪ.ಪಂ.ಅಧ್ಯಕ್ಷ ಮುಕ್ಕಾಟಿ ಚರಣ್ ಮೊಬಲಯ್ಯ ಅವರುಗಳು ಅನಿಸಿಕೆ ವ್ಯಕ್ತಪಡಿಸಿದರು.

ಸನ್ಮಾನ

ಕೊಡಗು ಗೌಡ ಸಮಾಜದ ಮಾಜಿ ಅಧ್ಯಕ್ಷ ಪೈಕೇರ ಅನಂತ್‍ರಾಂ, ಮಡಿಕೇರಿ ನಗರ ಸಭಾಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ, ಮಡಿಕೇರಿ ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಕುಶಾಲನಗರ ಪ.ಪಂ.ಅಧ್ಯಕ್ಷ ಮುಕ್ಕಾಟಿ ಚರಣ್ ಮೊಬಲಯ್ಯ, ಅಂತರ್ರಾಷ್ಟ್ರೀಯ ಟೆಕ್ವಾಂಡೋ ಪಟು ಹುದೇರಿ ಎಲ್.ಮುತ್ತಪ್ಪ, ವಿಶ್ವ ದಾಖಲೆ ಮಾಡಿದ ಅಂತರ್ರಾಷ್ಟ್ರೀಯ ಯೋಗ ಗುರು ಚೆರಿಯಮನೆ ಸಂತೋಷ್, ಕಬ್ಬು ಬೆಳೆದು ಗಿನ್ನಿಸ್ ದಾಖಲೆ ಮಾಡಿದ ಮಾಜಿ ಯೋಧ ಬಳ್ಳಡ್ಕ ಹೂವಯ್ಯ ಗೌಡ ಅವರುಗಳನ್ನು ಸನ್ಮಾನಿಸಲಾಯಿತು. ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಅತಿಥಿಗಳಾಗಿ ಕೊಡಗು ಗೌಡ ಸಮಾಜಗಳ ಒಕ್ಕೂಟಗಳ ಅಧ್ಯಕ್ಷ ದಂಬೆಕೋಡಿ ಆನಂದ, ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಇದ್ದರು.

ಗೌಡ ಸಮಾಜದ ಕಾರ್ಯದರ್ಶಿ ಕೋಡಿ ಚಂದ್ರಶೇಖರ್ ಸ್ವಾಗತಿಸಿದರೆ, ಉಪಾಧ್ಯಕ್ಷ ಸೂರ್ತಲೆ ಸೋಮಣ್ಣ ಸನ್ಮಾನಿತರನ್ನು ಪರಿಚಯಿಸಿದರು. ನಿರ್ದೇಶಕ ಕೋಳುಮುಡಿಯನ ಅನಂತ್‍ಕುಮಾರ್ ನಿರೂಪಿಸಿದರೆ, ನಿರ್ದೇಶಕಿ ಉಳುವಾರನ ಅಮೃತ ಸುರೇಶ್ ವಂದಿಸಿದರು.

ಮಹಾಸಭೆ

ಇದಕ್ಕೂ ಮುನ್ನ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ ಅವರ ಅಧ್ಯಕ್ಷತೆಯಲ್ಲಿ ಸಮಾಜದ ಮಹಾಸಭೆ ನಡೆಯಿತು. ಸಮಾಜದ ಅಭಿವೃದ್ಧಿ ಬಗ್ಗೆ, ಸಮಾಜದ ವತಿಯಿಂದ ವಿದ್ಯಾಸಂಸ್ಥೆ ಸ್ಥಾಪನೆ ಬಗ್ಗೆ ಚರ್ಚೆಗಳು ನಡೆದವು. ವಕ್ಕಲಿಗರ ಸಮಾಜದವರಿಗೆ ಸಮಾಜದಲ್ಲಿ ಸದಸ್ಯತ್ವ ನೀಡುವ ಬಗ್ಗೆ ಚರ್ಚೆ ನಡೆದು ಸಧ್ಯದ ಮಟ್ಟಿಗೆ ಸದಸ್ಯತ್ವ ನೀಡಲು ಬೈಲಾ ಆಧಾರದಲ್ಲಿ ಕಷ್ಟಸಾಧ್ಯ ವಿರುವದರಿಂದ ಸದಸ್ಯತ್ವ ನೀಡಲು ಅಸಾಧ್ಯವೆಂದು ತೀರ್ಮಾನಿಸ ಲಾಯಿತು. ಸಭೆಯಲ್ಲಿ ಸದಸ್ಯರುಗಳು ಹಲವಾರು ಸಲಹೆಗಳನ್ನು ನೀಡಿದರು. ಕಾರ್ಯದರ್ಶಿ ಕೋಡಿ ಚಂದ್ರಶೇಖರ್ ವರದಿ ವಾಚಿಸಿದರೆ, ಖಜಾಂಚಿ ಕುಯ್ಯಮುಡಿ ವಸಂತ ಲೆಕ್ಕ ಪತ್ರ ಮಂಡಿಸಿದರು. ಉಪಾಧ್ಯಕ್ಷ ಸೂರ್ತಲೆ ಸೋಮಣ್ಣ, ನಿರ್ದೇಶಕರುಗಳಾದ ಕಾಳೇರಮ್ಮನ ಪಾಲಾಕ್ಷ, ಕೋಳುಮುಡಿಯನ ಅನಂತ್ ಕುಮಾರ್, ಕೂಡಕಂಡಿ ಕಾವೇರಮ್ಮ ಸೋಮಣ್ಣ, ಪೊನ್ನಚನ ಮಧುಸೂಧನ್, ದಂಬೆಕೋಡಿ ಆನಂದ, ಉಳುವಾರನ ಅಮೃತ ಸುರೇಶ್, ಪೈಕೇರ ಮನೋಹರ್ ಮಾದಪ್ಪ, ನಾಮ ನಿರ್ದೇಶಿತ ಸದಸ್ಯರುಗಳಾದ ಕುಯ್ಯಮುಡಿ ಪೂರ್ಣಯ್ಯ, ನೆಯ್ಯಣಿ ಗೋಪಾಲ, ಹುದೇರಿ ರಾಜೇಂದ್ರ, ಕುಂಜಿಲನ ರಾಮಯ್ಯ, ವ್ಯವಸ್ಥಾಪಕ ಬೊಳ್ತಜ್ಜಿ ಅಶೋಕ್, ಸಿಬ್ಬಂದಿ ಅಚ್ಚಾಲ್ಪಾಡಿ ಪ್ರಸಾದ್ ಉಪಸ್ಥಿತರಿದ್ದರು.