ಮಡಿಕೇರಿ, ನ. 16: ದೇಶದ ಕಾನೂನು ಸುವ್ಯವಸ್ಥೆಯಲ್ಲಿ ಮಕ್ಕಳನ್ನು ಗೌರವಿಸಬೇಕು. ಮಕ್ಕಳ ಪೋಷಣೆಯಲ್ಲಿ ಪ್ರತಿ ಕುಟುಂಬ ಜವಾಬ್ದಾರಿ ವಹಿಸಬೇಕಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಾಸ್ಟರ್ ಆರ್.ಕೆ.ಜಿ. ಎಂ.ಎಂ. ಮಹಾಸ್ವಾಮೀಜಿ ಹೇಳಿದರು. ನಗರದ ಕೊಡವ ಸಮಾಜದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಮಕ್ಕಳ ದಿನಾಚರಣೆ ಮತ್ತು ಅಂಗನವಾಡಿ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ದೇಶದ ಆಸ್ತಿ, ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಬೆಳೆಸುವಲ್ಲಿ ಶಿಕ್ಷಕರು ಮತ್ತು ಪೋಷಕರ ಜವಾಬ್ದಾರಿ ಹೆಚ್ಚಿನದ್ದಾಗಿದೆ. ಪ್ರತಿ ಮಗುವಿನ ಬೆಳವಣೆಗೆಗೆ ಉತ್ತಮ ವಾತಾವರಣವನ್ನು ನಿರ್ಮಿಸುವದರ ಜೊತೆಗೆ ಮಕ್ಕಳ ರಕ್ಷಣೆ ಮತ್ತು ಪೋಷಣೆ ಕಡೆ ವಿಶೇಷ ಗಮನಹರಿಸಬೇಕಿದೆ ಎಂದರು.

ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ, 2 ರಿಂದ 5 ವರ್ಷದೊಳಗಿನ ಪ್ರತಿ ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಕಳುಹಿಸುವಲ್ಲಿ ಪೋಷಕರು ಗಮನಹರಿಸುವಂತೆ ಆಗಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಪಾಲನೆ ಪೋಷಣೆಯ ಜೊತೆಗೆ ಶುಚಿತ್ವ ಕಾಪಾಡಿಕೊಳ್ಳುವಲ್ಲಿ ನಿಗಾವಹಿಸಬೇಕಿದೆ ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೋಹನ್ ಪ್ರಭು ಮಾತನಾಡಿ, ಸಮಾಜದಲ್ಲಿ ಶೋಷಣೆಗೆ ಒಳಗಾದ ಮಕ್ಕಳು ಮತ್ತು ಬಾಲಕಾರ್ಮಿಕ ಪದ್ಧತಿಗೆ ಒಳಗಾಗುವ ಮಕ್ಕಳನ್ನು ರಕ್ಷಿಸಿ ಅವರಿಗೆ ಸಮಾನ ರೀತಿಯ ಹಕ್ಕುಗಳನ್ನು ಮತ್ತು ಸವಲತ್ತುಗಳನ್ನು ನೀಡುವದು ಅತೀ ಅವಶ್ಯವಾಗಿದೆ ಎಂದು ಹೇಳಿದರು.

ಕೆ. ನಿಡುಗಡೆ ಗ್ರಾ.ಪಂ. ಅಧ್ಯಕ್ಷೆ ರೀಟಾ ಮುತ್ತಣ್ಣ ಮಾತನಾಡಿ, ಮಕ್ಕಳಿಗೆ ಮನೆಯೇ ಪಾಠ ಶಾಲೆ, ಜನನಿ ಮೊದಲ ಗುರು ಎಂಬಂತೆ ಪೋಷಕರು ಮಕ್ಕಳ ಪೋಷಣೆಗೆ ಹೆಚ್ಚು ನಿಗಾವಹಿಸಬೇಕಿದೆ. ಮಕ್ಕಳ ಸಾಮಾಜಿಕ ಅಭಿವೃದ್ಧಿಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವದು ಉತ್ತಮ ಎಂದು ಸಲಹೆ ಮಾಡಿದರು. ಜಿ.ಪಂ. ಸದಸ್ಯೆ ಯಾಲದಾಳು ಪದ್ಮಾವತಿ, ನಗರಸಭೆ ಸದಸ್ಯೆ ವೀಣಾಕ್ಷಿ ಹಾಗೂ ಇತರರು ಇದ್ದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ರವೀಂದ್ರ ಅವರು ಮಕ್ಕಳ ರಕ್ಷಣೆ ಮತ್ತು ಪೋಷಣೆಯಲ್ಲಿ ಸಾರ್ವಜನಿಕರ ಜವಾಬ್ದಾರಿ ಕುರಿತು ತಿಳಿಸಿದರು. ನಂತರ ನಡೆದ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಮಡಿಕೇರಿ ತಾಲೂಕಿನ ಅಂಗನವಾಡಿ ಮಕ್ಕಳು ಭಾಗವಹಿಸಿದ್ದರು.

ಬಾಣೆಮೊಟ್ಟೆ ಅಂಗನವಾಡಿ ಮಕ್ಕಳು ಪ್ರಾರ್ಥಿಸಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ದಮಯಂತಿ ಸ್ವಾಗತಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯಕ ಜಯಪ್ಪ ನಿರೂಪಿಸಿ, ವಂದಿಸಿದರು.