ವೀರಾಜಪೇಟೆ, ಆ. 12: ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಹಾಗೂ ಛಲದಿಂದ ವಿದ್ಯೆ ಕಲಿತು ಉತ್ತಮ ಮಾರ್ಗವನ್ನು ಆರಿಸಿಕೊಳ್ಳುವ ಮೂಲಕ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುನಿಲ್ ಸುಬ್ರಮಣಿ ಹೇಳಿದರು.
ವೀರಾಜಪೇಟೆ ಸಮೀಪದ ದೇವಣಗೇರಿ ಬಿ.ಸಿ. ಪ್ರೌಢಶಾಲಾ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ನಾಯಕತ್ವ ಗುಣಗಳೊಂದಿಗೆ ಸೇವಾ ಮನೋಭಾವನೆಯನ್ನು ವಿದ್ಯಾರ್ಥಿ ಗಳು ಬೆಳೆಸಿಕೊಳ್ಳುವಂತಾಗಬೇಕು ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ ಮಾತನಾಡಿ, ವಿದ್ಯಾರ್ಥಿಗಳು ದುಷ್ಚಟ ವನ್ನು ದೂರ ಮಾಡಿ ಪಾಠದೊಂದಿಗೆ ಕ್ರೀಡೆಯಲ್ಲೂ ಭಾಗವಹಿಸಿ, ಶ್ರದ್ಧೆಯಿಂದ ಶಿಕ್ಷಣ ಕಲಿತು ಗುರಿಮುಟ್ಟುವಂತಾಗಬೇಕು ಎಂದರು.
ವಿದ್ಯಾಸಂಸ್ಥೆಯ ಅಧ್ಯಕ್ಷ ಮುಕ್ಕಾಟಿರ ಸುನಿಲ್ ನಾಣಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯ ಹೆಚ್.ಡಿ. ಲೋಕೇಶ್ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು, ಚೆಂಬೆಬೆಳ್ಳೂರು ಪಂಚಾಯಿತಿ ಅಧ್ಯಕ್ಷ ವಾಟೇರಿರ ನಾಣಯ್ಯ, ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಚೇಂದಂಡ ಪೊನ್ನಪ್ಪ, ಖಜಾಂಚಿ ಅಲ್ಲಪಂಡ ದಾದ ಉತ್ತಪ್ಪ, ಸದಸ್ಯರುಗಳು ಹಾಗೂ ಶಿಕ್ಷಕ ವೃಂದದವರು ಹಾಜರಿದ್ದರು.
ಶಿಕ್ಷಕ ಲೋಕೇಶ್ ಸ್ವಾಗತಿಸಿ, ಎಸ್. ನಂದಿನಿ ನಿರೂಪಿಸಿದರೆ, ವೈ. ಪ್ರಮೀಳ ಕುಮಾರಿ ವಂದಿಸಿದರು.