ಸೋಮವಾರಪೇಟೆ, ಆ. 12: ರೋಟರಿ ಸಂಸ್ಥೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಮಹಿಳಾ ಸಮಾಜದಲ್ಲಿ ಸಾರ್ವಜನಿಕರಿಗೆ ಉಚಿತ ಕಣ್ಣಿನ ಪೊರೆ ಹಾಗೂ ಮಧುಮೇಹ ತಪಾಸಣಾ ಶಿಬಿರ ನಡೆಯಿತು.
ಶಿಬಿರಕ್ಕೆ ಮಡಿಕೇರಿಯ ಸ್ಮಿತಾ ಐ ಕೇರ್ನ ನೇತ್ರ ತಜ್ಞ ಪ್ರಶಾಂತ್ ಚಾಲನೆ ನೀಡಿದರು. ನಂತರ ಮಾತನಾಡಿ, ಮಾನವನ ಎಲ್ಲಾ ಅಂಗಗಳಲ್ಲಿ ಕಣ್ಣು ಪ್ರಮುಖ ಸ್ಥಾನವನ್ನು ಹೊಂದಿದೆ. ಕಣ್ಣಿನ ರಕ್ಷಣೆಯ ಬಗ್ಗೆ ಹೆಚ್ಚಿನವರು ಜಾಗ್ರತೆಗೆ ಮುಂದಾಗುವದಿಲ್ಲ. ಕಾಲ ಕಾಲಕ್ಕೆ ಕಣ್ಣಿನ ತಪಾಸಣೆ ಮಾಡಿಸುವದರಿಂದ ದೃಷ್ಟಿ ದೋಷ ಸಮಸ್ಯೆಗೆ ಪರಿಹಾರ ಕಾಣಬಹುದಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಸಂಸ್ಥೆಯ ಅಧ್ಯಕ್ಷ ಭರತ್ ಭೀಮಯ್ಯ ಮಾತನಾಡಿ, ಪ್ರತಿ ವರ್ಷವೂ ರೋಟರಿ ಸಂಸ್ಥೆಯ ವತಿಯಿಂದ ಸಾರ್ವಜನಿಕರಿಗೆ ಕಣ್ಣು ತಪಾಸಣಾ ಶಿಬಿರವನ್ನು ನಡೆಸಿಕೊಂಡು ಬರಲಾಗುತ್ತಿದೆ. ಶಿಬಿರದ ಪ್ರಯೋಜನ ವನ್ನು ನೂರಾರು ಸಾರ್ವಜನಿಕರು ಪಡೆದುಕೊಳ್ಳುತ್ತಿದ್ದಾರೆ. ಇಂದಿನ ಶಿಬಿರದಲ್ಲಿ ಕಣ್ಣಿನ ಪೊರೆ ಸಮಸ್ಯೆ ಕಂಡುಬಂದಲ್ಲಿ ಅಂತಹವರನ್ನು ಮಡಿಕೇರಿಯ ಸ್ಮಿತಾ ಕಣ್ಣಿನ ಕ್ಲಿನಿಕ್ನಲ್ಲಿ ಉಚಿತ ಶಸ್ತ್ರ ಚಿಕಿತ್ಸೆ ಮಾಡಲಾಗುವದು ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ನಾಗರಾಜ್ ಮಾತನಾಡಿ, ಇಂದು ಹೆಚ್ಚಿನ ಮಕ್ಕಳು ಸೇರಿದಂತೆ ಸಾರ್ವಜನಿಕರು ತಮ್ಮ ಕಣ್ಣಿನ ಬಗ್ಗೆ ಕಾಳಜಿ ವಹಿಸದೆ ದೃಷ್ಟಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಕಣ್ಣಿನ ರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಕಾರ್ಯ ಮಾಡಿದಲ್ಲಿ ಹೆಚ್ಚಿನ ಅನುಕೂಲ ವಾಗುವದು ಎಂದರು. ವೇದಿಕೆಯಲ್ಲಿ ರೋಟರಿ ಸಂಸ್ಥೆಯ ಕಾರ್ಯದರ್ಶಿ ವನಮಾಲಿ ಕೆ. ಹೆಬ್ಬಾರ್, ಸೇವಾ ಪ್ರತಿನಿಧಿ ರುಬೀನಾ ಉಪಸ್ಥಿತರಿದ್ದರು.