ಕುಶಾಲನಗರ, ಆ. 25: ಕಳೆದ ತಾ. 14ರಂದು ಕುಶಾಲನಗರದಲ್ಲಿ ಸಂಕಲ್ಪ ಯಾತ್ರೆಯ ಬಳಿಕ ಭೀಕರ ಹತ್ಯೆಗೀಡಾಗಿದ್ದ ಆಟೋ ಚಾಲಕ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತ ಪ್ರವೀಣ್ ಪೂಜಾರಿ ಅವರ ಹತ್ಯೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಡಿಕೇರಿಯ ಪಿಎಫ್‍ಐ ಸಂಘಟನೆಯ ಪ್ರಮುಖ ತುಪೈಲ್ ಹಾಗೂ ಈತನ ಸಹಚರರುಗಳಾದ ಕುಶಾಲನಗರದ ಇಲಿಯಾಸ್, ಷರೀಫ್ ಹಾಗೂ ಇತರ ಕಡೆಗಳ ನಯಾಜ್ ಮತ್ತು ಮುಸ್ತಫಾ ಸೇರಿದಂತೆ ಒಟ್ಟು 8 ಮಂದಿಯನ್ನು ಪೊಲೀಸರು ಬಂಧನಕ್ಕೆ ಒಳಪಡಿಸಿದ್ದಾರೆ. ಇಂದು ಈ ಆರೋಪಿಗಳನ್ನು ಕುಶಾಲನಗರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಎಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಆರೋಪಿಗಳ ಪೈಕಿ ಮಡಿಕೇರಿ, ಕುಶಾಲನಗರ, ದ.ಕನ್ನಡದ ಉಪ್ಪಿನಂಗಡಿ, ಮೈಸೂರು ಜಿಲ್ಲೆಯ ಹುಣಸೂರು ಹಾಗೂ ಕೊಡಗಿನ ಗೊಂದಿಬಸವನಹಳ್ಳಿ ಮತ್ತು ಮಾದಾಪಟ್ಟಣಕ್ಕೆ ಸೇರಿದ ಆರೋಪಿಗಳು ಎಂದು ತಿಳಿದು ಬಂದಿದೆ.

ಸಾಹುಲ್ ಹತ್ಯೆಗೆ ಪ್ರತೀಕಾರ

ಪೊಲೀಸರಿಗೆ ದೊರೆತ ಸ್ಫೋಟಕ ಮಹಿತಿ ಪ್ರಕಾರ ಮಡಿಕೇರಿಯಲ್ಲಿ ಟಿಪ್ಪು ಜಯಂತಿ ಸಂದರ್ಭ ಸಂಭವಿಸಿದ ಘಟನೆಗಳಿಗೆ ಈ ಹತ್ಯೆ ಪ್ರಚೋದನೆ ನೀಡಿದೆ ಎನ್ನಲಾಗಿದೆ. ಟಿಪ್ಪು ಜಯಂತಿ ದಿನ ಗುಂಡೇಟಿಗೆ ಬಲಿಯಾದ ನೆಲ್ಲಿಹುದಿಕೇರಿ ಗ್ರಾಮದ ಸಾಹುಲ್ ಹಮೀದ್ ಹತ್ಯೆಗೆ ಪ್ರತೀಕಾರವಾಗಿ ಪ್ರವೀಣ್ ಪೂಜಾರಿಯನ್ನು ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಇದರಿಂದಾಗಿ ಈ ಪ್ರಕರಣ ಪೂರ್ವ ನಿಯೋಜಿತ ಎನ್ನುವದು ಪೊಲೀಸ್ ತನಿಖೆಯಿಂದ ಸ್ಪಷ್ಟಗೊಂಡಿದೆ.

ಪೊಲೀಸರ ಕಾರ್ಯಾಚರಣೆ

ಜಿಲ್ಲಾ ಅಪರಾಧ ಪತ್ತೆದಳದ ಇನ್ಸ್‍ಪೆಕ್ಟರ್ ಲಿಂಗಪ್ಪ, ಸುಂಟಿಕೊಪ್ಪ ಠಾಣಾಧಿಕಾರಿ ಅನೂಪ್ ಮಾದಪ್ಪ ನೇತೃತ್ವದಲ್ಲಿ ಜಿಲ್ಲಾ ಎಸ್‍ಪಿ ಡಾ. ರಾಜೇಂದ್ರ ಪ್ರಸಾದ್ , ಐಜಿಪಿ ಬಿ.ಕೆ. ಸಿಂಗ್ ಮಾರ್ಗದರ್ಶನದಲ್ಲಿ ಸುದೀರ್ಘ ತನಿಖೆ ನಡೆದು ಆರೋಪಿಗಳು ಬಲೆಗೆ ಬಿದ್ದಿದ್ದಾರೆ.

ಪೊಲೀಸರ ಈ ಕಾರ್ಯಾ ಚರಣೆಯನ್ನು ಕುಶಾಲನಗರ ಆಟೋ ಚಾಲಕರ ಸಂಘದ ಪದಾಧಿಕಾರಿಗಳಾದ ಮಹೇಶ್ ಮತ್ತು ಚಂದ್ರ ಇವರುಗಳು ಶ್ಲಾಘಿಸಿದ್ದು, ಮುಂದೆ ಜಿಲ್ಲೆಯಲ್ಲಿ ಅಮಾಯಕರಿಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.

ಐಜಿ ಆಗಮನ ನಿರೀಕ್ಷೆ

‘ಶಕ್ತಿ’ಗೆ ಇಂದು ಲಭ್ಯವಾದ ಮಾಹಿತಿಯನ್ನು ಪ್ರಕಟಿಸಿದ್ದು, ಪ್ರಕರಣದ ವಿವರವನ್ನು ದಕ್ಷಿಣ ವಲಯ ಪೊಲೀಸ್ ಮಹಾ ನಿರ್ದೇಶಕರಾದ ಬಿ.ಕೆ. ಸಿಂಗ್ ಅವರು ಮಡಿಕೇರಿಗೆ ಆಗಮಿಸಿ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಲಿರುವದಾಗಿ ಬಲ್ಲ ಮೂಲ ಗಳಿಂದ ತಿಳಿದು ಬಂದಿದೆ.