ಮಡಿಕೇರಿ, ಆ. 30: ಸಮಾಜದಲ್ಲಿ ಕಾನೂನು ಅರಿವು ಹಾಗೂ ಜಾಗೃತಿ ಪ್ರತಿಯೊಬ್ಬರಲ್ಲಿಯೂ ಅತ್ಯವಶ್ಯಕವಾಗಿರಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಮಾಸ್ಟರ್ ಆರ್.ಕೆ.ಜಿ.ಎಂ.ಎಂ. ಮಹಾಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ರೋಟರಿ ಸಂಸ್ಥೆ, ಲಯನ್ಸ್ ಸಂಸ್ಥೆ ಹಾಗೂ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ರೋಟರಿ ಸಭಾಂಗಣದಲ್ಲಿ ಅರೆಕಾಲಿಕ ಕಾನೂನು ಸ್ವಯಂಸೇವಕರಿಗಾಗಿ (ಪ್ಯಾರಾ ಲೀಗಲ್ ವಾಲಂಟಿಯರ್ಸ್) ನಡೆದ ಕಾನೂನು ತರಬೇತಿ ಹಾಗೂ ಗುರುತಿನ ಚೀಟಿ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕಾನೂನು ಸೇವಾ ಪ್ರಾಧಿಕಾರ ತಾಲೂಕು, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ. ಹುಟ್ಟಿನಿಂದ ಸಾಯುವ ತನಕ ಪ್ರತಿಯೊಬ್ಬರ ಜೀವನದಲ್ಲಿ ಕಾನೂನು ಹಾಸುಹೊಕ್ಕಾಗಿರುತ್ತದೆ. ಕಾನೂನು ಮಾಹಿತಿ ಪಡೆದುಕೊಳ್ಳುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಜನನ-ಮರಣ ಹಾಗೂ ವಿವಾಹ ನೋಂದಣಿ ಕಡ್ಡಾಯವಾಗಿದ್ದು, ಅಗತ್ಯ ಸಂದರ್ಭದಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಅನುಕೂಲವಾಗುತ್ತದೆ. 6 ರಿಂದ 14ವರ್ಷ ವಯೋಮಾನದವರಿಗೆ ಉಚಿತ ಶಿಕ್ಷಣದ ಕಾನೂನು ಜಾರಿಯಲ್ಲಿದೆ. ಇದರ ಅರಿವು ಪ್ರತಿಯೊಬ್ಬರಲ್ಲೂ ಇರಬೇಕಾಗಿದೆ. ಒಂದು ಲಕ್ಷಕ್ಕಿಂತ ಕಡಿಮೆ ಆದಾಯವಿರುವವರು ಸಮಸ್ಯೆಗಳಲ್ಲಿ ಸಿಲುಕಿಕೊಂಡಲ್ಲಿ ಉಚಿತ ಕಾನೂನು ಸೇವೆ ಒದಗಿಸಲಾಗುವದು. ಅಂತಹವರು ಪ್ರಾಧಿಕಾರವನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ಅರೆಕಾಲಿಕ ಕಾನೂನು ಸ್ವಯಂಸೇವಕರಾಗಿ ತರಬೇತಿ ಪಡೆದವರು ಕರ್ತವ್ಯದ ಜೊತೆಗೆ ಜನರಲ್ಲಿ ಕಾನೂನು ಅರಿವು ಮೂಡಿಸುವ ಪ್ರಾಧಿಕಾರದ ಕೆಲಸವನ್ನು ಮಾಡಬೇಕು. ಕಾನೂನಿನ ಅರಿವನ್ನು ಸಾಮಾನ್ಯ ಜನರಿಗೆ ಹಂಚುವ ಕೆಲಸ ಮಾಡಬೇಕು. ಲೋಕಾ ಅದಾಲತ್, ಮದ್ಯಸ್ಥಿಕೆ, ಸಂಧಾನದ ಬಗ್ಗೆ ಅರಿವು ಮೂಡಿಸಬೇಕು. ಸಮಾಜ ಹಿತದ ಕೆಲಸವನ್ನು ಸ್ವಯಂಸೇವಕರು ಮಾಡಬೇಕು ಎಂದು ಹೇಳಿದರು.
ಮಡಿಕೇರಿ ಪೊಲೀಸ್ ಉಪ ಅಧೀಕ್ಷಕ ಛಬ್ಬಿ ಮಾತನಾಡಿ, ಕಾನೂನಿನ ಅರಿವು ಇಲ್ಲದೇ ಇರುವದು ದೊಡ್ಡ ತಪ್ಪಾಗಿದೆ. ನಮ್ಮ ದೇಶದಲ್ಲಿ ಸುಮಾರು 22000 ಕಾನೂನುಗಳಿದ್ದು, ಕಡಿಮೆ ಕಾನೂನುಗಳಿರುವ ದೇಶ ಇಂದು ಸುಭೀಕ್ಷೆಯಿಂದಿದೆ. ಸಣ್ಣ ಪುಟ್ಟ ವ್ಯತ್ಯಾಸಗಳು, ಘಟನೆಗಳು ನಡೆದಾಗ ಅಂತಹ ಸಂದರ್ಭದಲ್ಲಿ ಪೊಲೀಸ್ ಠಾಣೆಗೆ ಧಾವಿಸುವ ಮೊದಲು ಅಲ್ಲಲೇ ಹಿರಿಯರು ಸಂಧಾನದ ಮೂಲಕ ಬಗೆಹರಿಸಿಕೊಳ್ಳುವದು ಮುಖ್ಯ. ಇದರಿಂದ ಸಮಾಜದಲ್ಲಿ ಶಾಂತಿ ಹಾಗೂ ಸಾಮರಸ್ಯ ಮೂಡುತ್ತದೆ. ಇಂತಹ ಅರಿವನ್ನು ಸ್ವಯಂಸೇವಕರು ಸಮಾಜದಲ್ಲಿ ಜಾಗೃತಿ ಮೂಡಿಸಬೇಕೆಂದರು.
ವಕೀಲರ ಸಂಘದ ಅಧ್ಯಕ್ಷ ಸಿ.ಟಿ. ಜೋಸೆಫ್ ಮಾತನಾಡಿ, ಯಾವದೇ ಅಹಿತಕರÀ ಘಟನೆಗಳು ನಡೆದು ಮೊಕದ್ದಮೆ ದಾಖಲಾಗಿ ನ್ಯಾಯಕ್ಕಾಗಿ ವರ್ಷಾನುಗಟ್ಟಲೇ ಕೋರ್ಟ್ಗೆ ಅಲೆಯುವ ಬದಲು ಸಂದಾನದ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಂಡಲ್ಲಿ ವ್ಯಕ್ತಿಗಳು ಕುಟುಂಬಗಳ ಮಧ್ಯೆ ಸಾಮರಸ್ಯ ಬೆಸೆಯಲು ಸಾಧ್ಯವಿದೆ. ಪ್ರತೀ ತಿಂಗಳ 2ನೇ ಶನಿವಾರದಂದು ಲೋಕಾ ಅದಾಲತ್ ನಡೆಯುತ್ತಿದೆ. ಕಾನೂನು ಸೇವಾ ಪ್ರಾಧಿಕಾರದ ಧ್ಯೇಯೋದ್ದೇಶಗಳ ಬಗ್ಗೆ ಸಾಮಾನ್ಯ ಜನರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಅಗಸ್ಟಿನ್ ಜಯರಾಜ್ ಮಾತನಾಡಿ, ಇಂತಹ ಕಾರ್ಯಕ್ರಮಗಳನ್ನು ಶಾಲಾ - ಕಾಲೇಜು, ಸಂಘ- ಸಂಸ್ಥೆಗಳಲ್ಲಿ ಆಯೋಜಿಸಿ ಅರಿವು ಮೂಡಿಸುವ ಕೆಲಸ ಮಾಡುವಂತಾಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಸಂಸ್ಥೆ ಅಧ್ಯಕ್ಷ ಡಾ. ಮೋಹನ್ ಅಪ್ಪಾಜಿ ಮಾತನಾಡಿ, ಸ್ವಯಂ ಸೇವಕರು ಕಾನೂನಿನ ಅರಿವನ್ನು ಸಮಾಜದಲ್ಲಿ ಮೂಡಿಸುವ ಮೂಲಕ ಸಮಾಜಕ್ಕೆ ಬಹಳಷ್ಟು ಕೊಡುಗೆ ನೀಡಬಹುದು. ಸಾಮಾನ್ಯ ಜನತೆ ಬಹಳಷ್ಟು ಕಷ್ಟ ಅನುಭವಿಸುವದನ್ನು ಕಾಣುತ್ತಿದ್ದೇವೆ. ತಾನು ಕೂಡ ಗುರುತಿನ ಚೀಟಿಯನ್ನು ಪಡೆದುಕೊಳ್ಳುವ ಮೂಲಕ ಕಾನೂನಿನ ಅರಿವನ್ನು ಮೂಡಿಸುವ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದರು. ಇದೇ ಸಂದರ್ಭ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೋಹನ್ ಪ್ರಭು, ವಕೀಲರಾದ ಕೆ.ಎಂ. ಮೀನಕುಮಾರಿ, ಪಿ.ಯು. ಪ್ರೀತಂ ಹಾಗೂ ಎಂ.ಎ. ನಿರಂಜನ್ ಅರೆಕಾಲಿಕ ಕಾನೂನು ಸ್ವಯಂಸೇವಕರಿಗೆ ವಿವಿಧ ಕಾನೂನುಗಳ ಬಗ್ಗೆ ತರಬೇತಿ ನೀಡಿದರು. ಬಳಿಕ ತರಬೇತಿ ಪಡೆದ ಸ್ವಯಂಸೇವಕರಿಗೆ ಗುರುತಿನ ಚೀಟಿ ವಿತರಿಸಲಾಯಿತು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಾಯಕ ಜಯಪ್ಪ ಕಾರ್ಯಕ್ರಮ ನಿರೂಪಿಸಿ, ವಕೀಲ ಹಾಗೂ ರೋಟರಿ ಸಂಸ್ಥೆ ಪದಾಧಿಕಾರಿ ಪಿ.ಯು. ಪ್ರೀತಂ ಸ್ವಾಗತಿಸಿದರು. ಈ ಸಂದರ್ಭ ಸ್ತ್ರೀ ಶಕ್ತಿ, ಸ್ವಸಹಾಯ ಸಂಘ ಹಾಗೂ ಓಡಿಪಿ ಸಂಸ್ಥೆಯ ಸದಸ್ಯರು ಮತ್ತು ವಿವಿಧ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.