ಮಡಿಕೇರಿ, ಜು. 5: ಕಾನೂನಿನ ಬಗ್ಗೆ ತಿಳುವಳಿಕೆ ಇದ್ದಲ್ಲಿ ಭಯವಿರುವದರ ಜೊತೆಗೆ ಕಾನೂನು ವ್ಯಾಪ್ತಿಯಲ್ಲಿ ಹೇಗೆ ನಡೆದುಕೊಳ್ಳುವದು ಎಂಬದು ತಿಳಿಯಲಿದೆ. ಆದ್ದರಿಂದ ಕಾನೂನಿನ ಬಗ್ಗೆ ಪ್ರತಿಯೊಬ್ಬರಲ್ಲಿಯೂ ತಿಳುವಳಿಕೆ ಇರಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್.ಕೆ.ಜಿ.ಎಂ.ಎಂ. ಮಹಾಸ್ವಾಮೀಜಿ ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ವಕೀಲರ ಸಂಘ, ಪೊಲೀಸ್ ಇಲಾಖೆ ಮತ್ತು ಜಿಲ್ಲಾ ಕಾರಾಗೃಹ, ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಗರದ ಜಿಲ್ಲಾ ಕಾರಾಗೃಹದಲ್ಲಿ ನಡೆದ ವಿಚಾರಣಾಧೀನ ಬಂಧಿಗಳಿಗೆ ಫ್ಲೀ ಬಾರ್ಗೆನಿಂಗ್ ಮತ್ತು ಕಾನೂನು ಅರಿವು ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜೀವನದಲ್ಲಿ ಪ್ರತಿಯೊಬ್ಬರೂ ತಿಳಿದು ಅಥವಾ ತಿಳಿಯದೆ ತಪ್ಪುಗಳನ್ನು ಮಾಡುತ್ತಾರೆ. ಆದರೆ ತಪ್ಪುಗಳು ಆದಾಗ ಕಾನೂನಿನ ಶಿಕ್ಷೆಗೆ ಒಳಗಾಗ ಬೇಕಾಗುತ್ತದೆ. ಆದ್ದರಿಂದ ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಇರಬೇಕು. ತಪ್ಪುಗಳು ಆಗದಂತೆ ಎಚ್ಚರಿಕೆ ವಹಿಸುವದು ಅತ್ಯಗತ್ಯ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಅಭಿಪ್ರಾಯಪಟ್ಟರು. ಏಳು ವರ್ಷದೊಳಗಿನ ಕಡಿಮೆ ಶಿಕ್ಷೆಗೆ ಗುರಿಯಾಗುವವರು ಫ್ಲೀ ಬಾರ್ಗೆನಿಂಗ್ ಅವಕಾಶವನ್ನು ಪಡೆದುಕೊಳ್ಳ ಬಹುದಾಗಿದೆ. ತಪ್ಪು ಮಾಡಿದ್ದಲ್ಲಿ ಒಪ್ಪಿಕೊಂಡರೆ ಶಿಕ್ಷೆ ಕಡಿಮೆಯಾಗಲಿದೆ. ಇದರಿಂದ ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ, ಸಮಾಜದಲ್ಲಿ ಇತರರಂತೆ ಬದುಕು ನಡೆಸುವಂತಾಗಬೇಕು. ಉತ್ತಮ ಬದುಕು ನಡೆಸಿದಾಗ ಎಲ್ಲರಿಗೂ ಒಳಿತಾಗಲಿದೆ. ಇದರಿಂದ ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಮಾತನಾಡಿ, ಪ್ರತಿಯೊಬ್ಬರಲ್ಲಿ ಶಾಂತಿ, ಸಹನೆ, ತಾಳ್ಮೆ ಇರಬೇಕು. ಕೋಪವನ್ನು ಕೈಗೆತ್ತಿಕೊಳ್ಳಬಾರದು. ಪ್ರಚೋದನೆಗೆ ತುತ್ತಾಗಬಾರದು ಎಂದು ಸಲಹೆ ಮಾಡಿದರು.
ತಪ್ಪು ಮಾಡಿದ್ದಲ್ಲಿ ಕಾನೂನಿನಡಿ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಆದ್ದರಿಂದ ಸಮಾಜದಲ್ಲಿ ಕಾನೂನಿನ ತಿಳುವಳಿಕೆ ಪಡೆದು ಉತ್ತಮ ಜೀವನ ನಡೆಸುವಂತಾಗಬೇಕು ಎಂದು ನುಡಿದರು.
ವಕೀಲರ ಸಂಘದ ಉಪಾಧ್ಯಕ್ಷ ಕೆ.ಡಿ.ದಯಾನಂದ ಅವರು ಕೈದಿಗಳ ಹಕ್ಕುಗಳ ಕುರಿತು ಹಾಗೂ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರೀತಂ ಅವರು ಫ್ಲೀ ಬಾರ್ಗೆನಿಂಗ್ ಬಗ್ಗೆ ಉಪನ್ಯಾಸ ನೀಡಿದರು. ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೋಹನ್ ಪ್ರಭು ಅವರು ಬಂಧಿತ ಕೈದಿಗಳ ಕುಂದುಕೊರತೆ ಆಲಿಸಿದರು. ನಗರ ಕಾರಾಗೃಹ ಅಧೀಕ್ಷಕ ಮಹಾದೇವ ನಾಯಕ್ ಅವರು ಸ್ವಾಗತಿಸಿದರು. ಸಂಪತ್ ಕುಮಾರ್ ಪ್ರಾರ್ಥಿಸಿದರು. ಕಾನೂನು ಸೇವಾ ಪ್ರಾಧಿಕಾರದ ಜಯಪ್ಪ ನಿರೂಪಿಸಿ, ವಂದಿಸಿದರು.