ಕುಶಾಲನಗರ, ಅ. 17: ಅತೀ ಶೀಘ್ರದಲ್ಲಿ ಬೆಳವಣಿಗೆ ಕಂಡಿರುವ ಕುಶಾಲನಗರ ಪಟ್ಟಣದಲ್ಲಿ ನಿಯಮ ಬಾಹಿರವಾಗಿ ಬಹು ಮಹಡಿ ಕಟ್ಟಡಗಳು ತಲೆ ಎತ್ತುವದರೊಂದಿಗೆ ಪಟ್ಟಣ ಕಿಷ್ಕಿಂಧೆಯಂತೆ ಪರಿವರ್ತನೆಗೊಳ್ಳುತ್ತಿರುವದು ಕಾಣಬಹುದು. ಸರಕಾರದ ಕಾನೂನು ಕಟ್ಟಲೆಗಳನ್ನು ಗಾಳಿಗೆ ತೂರಿ ಅವೈಜ್ಞಾನಿಕವಾಗಿ ಬಹು ಮಹಡಿ ಕಟ್ಟಡ ನಿರ್ಮಾಣದೊಂದಿಗೆ ನೆರೆಯ ರಾಜ್ಯಗಳ ವಲಸಿಗರು ತಮಗಿಷ್ಟ ಬಂದಂತೆ ನಿರ್ಮಾಣದಲ್ಲಿ ತೊಡಗಿರುವ ದೃಶ್ಯ ಸಾಮಾನ್ಯವಾಗಿದೆ. ಮುಂದಿನ ದಿನಗಳಲ್ಲಿ ಕುಶಾಲನಗರ ಪಟ್ಟಣ ಭಾರೀ ಅಪಾಯವನ್ನು ಎದುರಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಪಟ್ಟಣದಲ್ಲಿ ನೂತನ ಕಟ್ಟಡಗಳ ನಿರ್ಮಾಣ ಸಂದರ್ಭ ಸ್ಥಳೀಯ ಆಡಳಿತದ ಯಾವದೇ ಅನುಮತಿ ಪಡೆಯದೆ ಅಕ್ರಮವಾಗಿ ನಿರ್ಮಾಣಗೊಳ್ಳುತ್ತಿರುವದು ಒಂದೆಡೆಯಾದರೆ. ಇನ್ನೊಂದೆಡೆ ಮುಂದಿನ ದಿನಗಳಲ್ಲಿ ಇಂತಹ ನಿರ್ಮಾಣಗಳಿಂದ ಅಪಾಯ ಮಾತ್ರ ಕಟ್ಟಿಟ್ಟ ಬುತ್ತಿ ಎನ್ನುವದು ಸಾರ್ವಜನಿಕರ ಆತಂಕವಾಗಿದೆ.
ಕುಶಾಲನಗರದ ಮುಖ್ಯ ರಸ್ತೆಯ ಬದಿಯಲ್ಲಿ ದಿನಕ್ಕೊಂದರಂತೆ ಬೃಹತ್ ಕಟ್ಟಡಗಳು ಅವೈಜ್ಞಾನಿಕವಾಗಿ ತಲೆ ಎತ್ತುತ್ತಿದ್ದು ಬಡಾವಣೆಗಳಲ್ಲಿ ಕೂಡ ಇಂತಹ ನಿರ್ಮಾಣ ಕಾಮಗಾರಿಗಳು ನಿರಾತಂಕವಾಗಿ ನಡೆಯುತ್ತಿವೆ. ಕಟ್ಟಡ ನಿರ್ಮಾಣ ಸಂದರ್ಭ ವಾಹನ ನಿಲುಗಡೆಗೆ ಯಾವದೇ ವ್ಯವಸ್ಥೆ ಕಲ್ಪಿಸದಿರುವದು ಇಲ್ಲಿ ಗಮನಾರ್ಹ ವಿಷಯವಾಗಿದೆ. ಪ್ರವಾಸಿಗರ ವಾಹನಗಳು ಎಲ್ಲೆಂದರಲ್ಲಿ ನಿಲುಗಡೆಗೊಳ್ಳುವದರೊಂದಿಗೆ ಇಡೀ ಸಂಚಾರಿ ವ್ಯವಸ್ಥೆ ಹದಗೆಡಲು ಕಾರಣವಾಗುತ್ತಿದೆ. ಕುಶಾಲನಗರ ಯೋಜನಾ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದು 8 ವರ್ಷಗಳು ಕಳೆದರೂ, ಇದರ ವ್ಯಾಪ್ತಿಗೆ ಒಳಪಟ್ಟ ಗ್ರಾಮ ಪಂಚಾಯಿತಿಗಳು ಮಾತ್ರ ಪ್ರಾಧಿಕಾರವನ್ನು ಗಣನೆಗೆ ತೆಗೆದುಕೊಳ್ಳದೆ ಅಕ್ರಮ ಬಡಾವಣೆ ನಿರ್ಮಾಣಕ್ಕೆ ಕುಮ್ಮಕ್ಕು ನೀಡುತ್ತಿರುವದಾಗಿ ಆರೋಪಗಳು ಕೇಳಿಬಂದಿವೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸಮರ್ಪಕ ಸ್ಪಷ್ಟನೆ ನೀಡುವಲ್ಲಿ ನುಣುಚಿಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಸ್ಥಳೀಯ ಯೋಗಾನಂದ ಬಡಾವಣೆ ನಿವಾಸಿ ಹೆಚ್.ಎಸ್. ಅಶೋಕ್ ಅವರದ್ದಾಗಿದೆ.
ಕುಶಾಲನಗರ ಪಟ್ಟಣ ಪಂಚಾಯಿತಿ ಒಳಪಟ್ಟಂತೆ ಮುಳ್ಳುಸೋಗೆ, ಕೂಡುಮಂಗಳೂರು, ಗುಮ್ಮನಕೊಲ್ಲಿ, ಮಾದಾಪಟ್ಟಣ ಕಂದಾಯ ಗ್ರಾಮಗಳು ಕುಶಾಲನಗರ ಯೋಜನಾ ಪ್ರಾಧಿಕಾರಕ್ಕೆ ಸೇರ್ಪಡೆಗೊಂಡಿದೆ. 2008 ರ ಫೆಬ್ರವರಿ 18 ರ ರಾಜ್ಯ ಸರ್ಕಾರದ ಆದೇಶದಂತೆ, ಈ ವ್ಯಾಪ್ತಿಯಲ್ಲಿ ಭೂಪರಿವರ್ತನೆ, ವಿನ್ಯಾಸ, ಇನ್ನಿತರ ಕಟ್ಟಡಗಳಿಗೆ ಅನುಮತಿ ಬೇಕಾಗಿದ್ದಲ್ಲಿ ಪ್ರಾಧಿಕಾರದ ಅನುಮೋದನೆ ಕಡ್ಡಾಯವಾಗಿದೆ.
2008 ರ ನಂತರದ ಅವಧಿಯಲ್ಲಿ ಗ್ರಾಮ ಪಂಚಾಯಿತಿ ಅಥವಾ ಪಟ್ಟಣ ಪಂಚಾಯಿತಿ ಮೂಲಕ ನೇರವಾಗಿ ಖಾತೆ ಬದಲಾವಣೆ, ವರ್ಗಾವಣೆ ಮತ್ತು ಕಟ್ಟಡ ನಿರ್ಮಾಣ, ಬಡಾವಣೆಗಳಿಗೆ ಅನುಮತಿ ನೀಡಿದ್ದಲ್ಲಿ ಅವುಗಳು ಸಂಪೂರ್ಣವಾಗಿ ಕಾನೂನು ಬಾಹಿರವಾಗಿರುತ್ತದೆ.
ಈ ಬಗ್ಗೆ ಹಲವು ಬಾರಿ ಸಭೆಯಲ್ಲಿ ಚರ್ಚೆ ನಡೆದರೂ ಯಾವದೇ ರೀತಿಯ ಕ್ರಮಕ್ಕೆ ಮುಂದಾಗದೆ ಪಂಚಾಯಿತಿ ಮುಖ್ಯಾಧಿಕಾರಿಗಳು ಹಾಗೂ ಇಂಜಿನಿಯರ್‍ಗಳು ತಟಸ್ಥ ಧೋರಣೆ ತಾಳುವದರೊಂದಿಗೆ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಕುಮ್ಮಕ್ಕು ನೀಡಿರುವದು ಸಾರ್ವಜನಿಕರಲ್ಲಿ ಸಂಶಯಕ್ಕೆ ಎಡೆ ಮಾಡಿದೆ. ನೂತನ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆಯುವ ಸಂದರ್ಭ ವಾರ್ಡ್ ಸದಸ್ಯರನ್ನು ಅಧಿಕಾರಿಗಳು ಗಣನೆಗೆ ತೆಗೆದುಕೊಳ್ಳದೆ ಸಂಪೂರ್ಣ ನಿರ್ಲಕ್ಷಿಸಿದ್ದೇ ಈ ಎಲ್ಲಾ ಅವಾಂತರಗಳಿಗೆ ಕಾರಣವಾಗಿದೆ ಎನ್ನುವದು ಪ್ರಸಕ್ತ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಟಿ.ಆರ್. ಶರವಣಕುಮಾರ್ ಅವರ ಸ್ಪಷ್ಟನೆಯಾಗಿದೆ. ಕುಶಾಲನಗರದ ಗೌಡ ಸಮಾಜ ರಸ್ತೆ ಬದಿಯಲ್ಲಿ ಬಹು ಅಂತಸ್ತಿನ ಕಟ್ಟಡವೊಂದು ನಿರ್ಮಾಣಗೊಳ್ಳುತ್ತಿದ್ದು, ಪಟ್ಟಣ ಪಂಚಾಯಿತಿಯಿಂದ ಬಹು ಮಹಡಿ ನಿರ್ಮಾಣ ಕಾಮಗಾರಿಗೆ ಯಾವದೇ ರೀತಿಯ ಅಧಿಕೃತ ಅನುಮತಿ ಪಡೆದಿಲ್ಲ ಎಂದು ಪಂಚಾಯಿತಿ ಅಧಿಕಾರಿಗಳು ‘ಶಕ್ತಿ’ಯೊಂದಿಗೆ ಸ್ಪಷ್ಟಪಡಿಸಿದ್ದಾರೆ. ಈ ಕಟ್ಟಡದ ಅಡಿಪಾಯ ಬಹುತೇಕ ಶಿಥಿಲಾವಸ್ಥೆಯಲ್ಲಿದ್ದು, ಮಹಡಿಗಳು ಮೇಲೇರುತ್ತಿದ್ದು ಈ ಬಗ್ಗೆ ಕೂಡ ಅಧಿಕಾರಿಗಳು ಹಾಗೂ ಇಂಜಿನಿಯರ್‍ಗಳು ಪರಿಶೀಲನೆ ನಡೆಸುವಲ್ಲಿ ವಿಫಲರಾಗಿದ್ದಾರೆ.
ಸಾರ್ವಜನಿಕರ ರಸ್ತೆ ಸೇರಿದಂತೆ ಕೆಲವೆಡೆ ಸರಕಾರಿ ಸ್ವತ್ತುಗಳ ಒತ್ತುವರಿಯೊಂದಿಗೆ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು ಇನ್ನೊಂದೆಡೆ ಎರಡು ಕಟ್ಟಡಗಳ ನಡುವೆ ಯಾವದೇ ಅಂತರವನ್ನು ಕೂಡ ಕಾಯ್ದುಕೊಳ್ಳದೆ ನಿಯಮ ಮೀರಿ ಹಲವಾರು ಕಟ್ಟಡಗಳು ನಿರ್ಮಾಣಗೊಂಡಿದ್ದು ಇದಕ್ಕೆ ಸ್ಪಷ್ಟ ಉದಾಹರಣೆಗಳನ್ನು ಇಲ್ಲಿ ಕಾಣಬಹುದು.
ನಿಯಮ ಬಾಹಿರವಾಗಿ 4 ರಿಂದ 5 ಮಹಡಿಗಳನ್ನು ಒಳಗೊಂಡ ಕಟ್ಟಡಗಳು ಕೂಡ ಕುಶಾಲನಗರದ ಪಟ್ಟಣದಲ್ಲಿ ನಿರ್ಮಾಣಗೊಂಡಿದ್ದು ಇದಕ್ಕೆ ಪಟ್ಟಣ ಪಂಚಾಯಿತಿಯ ಯಾವದೇ ಅನುಮತಿ ಪಡೆದಿಲ್ಲ ಎನ್ನುವದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಅವರ ಸ್ಪಷ್ಟನೆಯಾಗಿದೆ. ಕೆಲವು ಕಟ್ಟಡಗಳಿಂದ ಶೌಚವನ್ನು ಚರಂಡಿ ಮೂಲಕ ಹರಿಸಲಾಗುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸಿದ್ದು ಹಲವು ಕಟ್ಟಡಗಳ ಮಾಲೀಕರಿಗೆ ನೋಟೀಸ್ ನೀಡಲಾಗಿದೆ. ಕೆಲವು ಲಾಡ್ಜ್‍ಗಳ ಮಾಲೀಕರಿಗೆ ದಂಡ ವಿಧಿಸಲಾಗಿದೆ. ಇನ್ನು ಕೆಲವು ಪ್ರಕರಣಗಳ ಹಿನ್ನೆಲೆ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಶ್ರೀಧರ್ ‘ಶಕ್ತಿ’ಗೆ ತಿಳಿಸಿದ್ದಾರೆ.
ಮೈಸೂರು ರಸ್ತೆಯಲ್ಲಿ ಅಕ್ರಮ ಬಹು ಮಹಡಿ ಕಟ್ಟಡ ನಿರ್ಮಾಣ, ಬೈಪಾಸ್ ರಸ್ತೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಕೆಲವು ಕಟ್ಟಡಗಳು, ಕೋಣಮಾರಿಯಮ್ಮ ವೃತ್ತದ ಬಳಿ ನಿರ್ಮಾಣಗೊಂಡಿರುವ ಬಹು ಮಹಡಿ ಕಟ್ಟಡ ಹಾಗೂ ಕೆಲವು ಬಡಾವಣೆಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡಗಳು ಇಂತಹ ಅಕ್ರಮಗಳಿಗೆ ಜ್ವಲಂತ ಸಾಕ್ಷಿ ಎನ್ನಬಹುದು. ಕೆಲವೆಡೆ ಚರಂಡಿಗಳನ್ನು ಮುಚ್ಚಿ ಒತ್ತುವರಿ ಮಾಡಿ ಕಟ್ಟಡಗಳ ನಿರ್ಮಾಣದೊಂದಿಗೆ ವ್ಯಾಪಾರ ವಹಿವಾಟು ನಡೆಯುತ್ತಿರುವದು ಕುಶಾಲನಗರ ಪಟ್ಟಣದ ಇತ್ತೀಚಿನ ಬೆಳವಣಿಗೆಯಾಗಿದೆ.
ಪಟ್ಟಣದ ವ್ಯಾಪ್ತಿಯಲ್ಲಿ ತಮಗಿಷ್ಟ ಬಂದಂತೆ ಕಟ್ಟಡಗಳ ನಿರ್ಮಾಣವಾಗುತ್ತಿದ್ದು ಕೆಲವು ಕಡೆ ಹೆದ್ದಾರಿ ರಸ್ತೆಯಲ್ಲಿ ಕೂಡ ಕಟ್ಟಡಗಳ ನಿರ್ಮಾಣ ಕಂಡು ಬಂದಿದ್ದರೂ ಇದಕ್ಕೆ ಯಾವದೇ ಕ್ರಮ ಕೈಗೊಳ್ಳದಿರುವದು ಸಂಶಯಕ್ಕೆ ಎಡೆ ಮಾಡಿದೆ. ಕುಶಾಲನಗರ ಪಟ್ಟಣದ ಮೂಲಕ ಸಾವಿರಾರು ಸಂಖ್ಯೆಯ ಪ್ರವಾಸಿಗರು ಓಡಾಟ ನಡೆಸುತ್ತಿದ್ದು ಈ ಮೂಲಕ ಉಂಟಾಗುವ ಸಮಸ್ಯೆಗಳು ಹೇಳತೀರದು. ವಾರಾಂತ್ಯದಲ್ಲಿ ಕುಶಾಲನಗರದ ಜನತೆ ಪಟ್ಟಣದ ಎಲ್ಲೆಡೆ ಮೂಗು ಮುಚ್ಚಿ ತಿರುಗಾಡಬೇಕಾದ ದುಸ್ಥಿತಿ ಸೃಷ್ಟಿಯಾಗುತ್ತದೆ. ಎಲ್ಲಿ ನೋಡಿದರೂ ಪ್ಲಾಸ್ಟಿಕ್ ಬಾಟಲಿಗಳ ರಾಶಿ ಚೆಲ್ಲಾಡಿರುವ ದೃಶ್ಯ ಸಾಮಾನ್ಯವಾಗಿದೆ. ಇನ್ನೊಂದೆಡೆ ಪ್ರವಾಸಿಗರ ವಾಹನಗಳನ್ನು ಮುಖ್ಯ ರಸ್ತೆಯಲ್ಲಿಯೇ ನಿಲುಗಡೆಗೊಳಿಸುತ್ತಿದ್ದು ಇದರಿಂದ ಪಾದಾಚಾರಿಗಳಿಗೆ ಭಾರೀ ಅನಾನುಕೂಲದೊಂದಿಗೆ ಆಗಾಗ್ಯೆ ಅಪಘಾತಗಳು ಸಂಭವಿಸುವದು ಕಂಡುಬಂದಿದೆ. ಪ್ರವಾಸಿಗರ ಒತ್ತಡ ಅಧಿಕವಾಗುತ್ತಲೆ ಲಾಡ್ಜ್‍ಗಳ ಸೆಪ್ಟಿಕ್ ಟ್ಯಾಂಕ್ ಭರ್ತಿಯಾಗುವದರೊಂದಿಗೆ ಇದನ್ನು ಕಟ್ಟಡಗಳಿಂದ ನೇರವಾಗಿ ಚರಂಡಿ ಮೂಲಕ ಕಾವೇರಿ ನದಿಗೆ ಹರಿಸುತ್ತಿರುವದು ಇತ್ತೀಚಿನ ವಾಡಿಕೆÉಯಾಗಿದೆ. ಈ ಬಗ್ಗೆ ಸ್ಥಳೀಯ ಪಂಚಾಯಿತಿ ಆಡಳಿತ ಕಣ್ಣು ಮುಚ್ಚಿ ಕುಳಿತಿದೆ ಎಂದರೆ ತಪ್ಪಾಗಲಾರದು. ಬಹುತೇಕ ಬಹುಮಹಡಿ ಕಟ್ಟಡಗಳ ನೀಲಿ ನಕ್ಷೆ ವಿನ್ಯಾಸ ಮತ್ತು ಅಂದಾಜು ಪಟ್ಟಿಗೆ ಸ್ಥಳೀಯ ಆಡಳಿತದಿಂದ ಅನುಮತಿ ಪಡೆಯದಿರುವದು ಇಲ್ಲಿ ಕಾಣಬಹುದು. ಕಟ್ಟಡ ನಿರ್ಮಾಣ ಸಂದರ್ಭ ಮಂಜೂರು ಮಾಡಲು ನೀಡುವ ದಾಖಲೆಗಳಿಗೆ ಕಟ್ಟಡ ನಿರ್ಮಾಣದ ದಾಖಲೆಗಳಿಗೆ ಅಜಗಜಾಂತರ ವ್ಯತ್ಯಾಸ ಉಂಟಾಗಿದ್ದು ಇಲ್ಲಿ ನಿಯಮಗಳನ್ನು ಸಂಪೂರ್ಣ ಗಾಳಿಗೆ ತೂರಲಾಗಿರುವದೇ ಈ ಎಲ್ಲಾ ಅವಾಂತರಗಳಿಗೆ ಕಾರಣವಾಗಿದೆ.
ಇಂತಹ ಬೆಳವಣಿಗೆಯಿಂದ ಕುಶಾಲನಗರ ಮೂಲಕ ಹರಿಯುವ ಕಾವೇರಿ ನದಿಯ ನೀರಿನ ಗುಣಮಟ್ಟ ಕುಸಿತಕ್ಕೊಳಗಾಗಿದ್ದು ಕೆಳಭಾಗದ ಜನತೆ ನೀರನ್ನು ಕುಡಿಯಲು ಬಳಸುವದು ಕೂಡ ಆತಂಕಕಾರಿಯಾಗಿದೆ ಎನ್ನುವದು ತಿಳಿದು ಬಂದ ವಿಚಾರ. ನಿಯಮ ಬಾಹಿರವಾಗಿ ನಿರ್ಮಾಣಗೊಂಡಿರುವ ಕಟ್ಟಡಗಳ ಪರಿಶೀಲನೆ ನಡೆಸಿ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎನ್ನುವದು ಈ ಭಾಗದ ನಾಗರಿಕರ ಆಗ್ರಹವಾಗಿದೆ. ತಕ್ಷಣ ಸಂಬಂಧಿಸಿದ ಇಲಾಖೆಗಳು ಈ ಬಗ್ಗೆ ಕಾರ್ಯೋನ್ಮುಖರಾಗಿ ನಿಯಮ ಬಾಹಿರವಾಗಿ ಕಟ್ಟಲಾದ ಕಟ್ಟಡಗಳ ಮೇಲೆ ಕಾನೂನು ಕ್ರಮ ಕೈಗೊಂಡು ಮುಂದೆ ಉಂಟಾಗಲಿರುವ ಅಪಾಯಕ್ಕೆ ಶಾಶ್ವತ ಕಡಿವಾಣ ಹಾಕಬೇಕಾಗಿದೆ.
- ಚಂದ್ರಮೋಹನ್