ತಾ. 9 ರಿಂದ ಜಾರಿಗೆ ಬರುವಂತೆ ರೂ. 1,000 ಮತ್ತು 500ರ ಮುಖ ಬೆಲೆಯ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಸೂಕ್ತ ಪ್ರಕಟಣೆ ನೀಡುವುದರ ಮೂಲಕ ರದ್ದು ಪಡಿಸಿದೆ.
ಚಲಾವಣೆಯಲ್ಲಿರುವ ಕಳ್ಳನೋಟುಗಳನ್ನು ಸ್ಥಗಿತಗೊಳಿಸುವುದು, ಚಲಾವಣೆಯಲ್ಲಿರುವ ಕಪ್ಪುಹಣವನ್ನು ಹೊರತೆಗೆಯುವುದು, ಚಲಾವಣೆಯಲ್ಲಿಲ್ಲದೆ ಕೂಡಿಟ್ಟ ಎಲ್ಲ ಹಣವನ್ನು ಹೊರಹಾಕುವುದು, ತನ್ಮೂಲಕ ಭ್ರಷ್ಟಾಚಾರ ನಿವಾರಣೆ ಇತ್ಯಾದಿಗಳು ಇದರ ಮುಖ್ಯ ಉದ್ದೇಶ.
2011ರಿಂದ 2016ರವರೆಗಿನ ಚಲಾವಣೆಯಲ್ಲಿರುವ ಎಲ್ಲಾ ನೋಟುಗಳ ಪ್ರಮಾಣ 40% ಹೆಚ್ಚಿದ್ದರೆ ರೂ. 500/-ರ ನೋಟುಗಳು 76% ಹಾಗೂ ರೂ.1,000/-ದ ನೋಟುಗಳು 109%ರಷ್ಟು ಹೆಚ್ಚಿವೆ.
ಕಳ್ಳಹಣ ಚಲಾವಣೆಯ ನಿಗ್ರಹಕ್ಕಾಗಿ ಭಾರತ ಸರಕಾರ ಇತ್ತೀಚೆಗೆ ಅನೇಕ ದಿಟ್ಟ ಹೆಜ್ಜೆಗಳನ್ನಿಟ್ಟಿದೆ. ವಿಶೇಷ ತನಿಖಾದಳದ ಆಯೋಜನೆ, ಪರದೇಶದಲ್ಲಿ ಆಸ್ತಿಗಳಿದ್ದು ಅದನ್ನು ಘೋಷಿಸದೇ ಇದ್ದಲ್ಲಿ ಅದನ್ನು ಘೋಷಿಸಲು ಅವಕಾಶ ಮಾಡಿಕೊಡುವ ಕಾಯಿದೆ, ಎಲ್ಲಾ ದೇಶಗಳೊಂದಿಗಿರುವ ದ್ವಿಮುಖ ತೆರಿಗೆ ಹಾಕದಿರುವಂತೆ ಮಾಡಿಕೊಂಡಂತಹ ಒಪ್ಪಂದಗಳಿಗೆ ಸೂಕ್ತ ಬದಲಾವಣೆ, ಹೆಚ್ಚಿನ ವ್ಯವಹಾರಗಳನ್ನು ಎಲೆಕ್ಟ್ರಾನಿಕ್ ವರ್ಗಾವಣೆ ವ್ಯವಸ್ಥೆಯಲ್ಲಿ ಅಥವಾ ಇತರ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕವೇ ಮಾಡಲು ಬೇಕಾದ ಎಲ್ಲ ವ್ಯವಸ್ಥೆ, ಬೇನಾಮಿ ವ್ಯವಹಾರಗಳ ಕಾಯಿದೆಗೆ ಸೂಕ್ತ ತಿದ್ದುಪಡಿ ಮತ್ತು ಇನ್ನೂ ಪ್ರಮುಖವಾಗಿ ಆದಾಯ ಘೋಷಣೆ ಯೋಜನೆ 2016, ಇವುಗಳು ಈ ನಿಟ್ಟಿನಲ್ಲಿ ಸರಕಾರ ತೆಗೆದುಕೊಂಡಂತಹ ಇತ್ತೀಚೆಗಿನ ಯೋಜನೆಗಳು.
ಇದೀಗ ಉಚ್ಚ ಬೆಲೆಯ ನೋಟುಗಳನ್ನು ರದ್ಧತಿ ಮಾಡಿರುವುದು ಈ ನಿಟ್ಟಿನಲ್ಲಿ ಸರಕಾರದ ಇನ್ನೊಂದು ದಿಟ್ಟ ಹೆಜ್ಜೆ.
ನೋಟುಗಳ ದಿಢೀರ್ ರದ್ದತಿಯಿಂದ ದೇಶದ ಎಲ್ಲಾ ಜನತೆಗೂ ಸ್ವಲ್ಪ ಮಟ್ಟಿಗೆ ಅನಾನುಕೂಲಗಳಾಗುವುದರಲ್ಲಿ ಸಂಶಯವಿಲ್ಲ. ಆದರೆ ಇದನ್ನು ನಿವಾರಿಸಲು ಸರಕಾರ ಸೂಕ್ತ ಕ್ರಮಗಳನ್ನು ಕೈಗೊಂಡಿರುವುದನ್ನೂ ಇಲ್ಲಿ ಗಮನಿಸಬಹುದು.
1. ಕೈಯಲ್ಲಿರುವ ರದ್ದಾದ ಹಳೆಯ ನೋಟುಗಳು ಎಷ್ಟೇ ಇದ್ದರೂ ತಮ್ಮ ತಮ್ಮ ಬ್ಯಾಂಕ್ ಖಾತೆಗಳಿಗೆ ಯಾವಾಗಲೂ ಜಮೆ ಮಾಡುವ ರೀತಿಯಲ್ಲಿ ಜಮೆ ಮಾಡಬಹುದು. ಬ್ಯಾಂಕ್ ಖಾತೆಗಳಿಗೆ ತಮ್ಮ ಪೂರ್ಣ ಪರಿಚಯ ನೀಡುವ (ಏಙಅ) ಪ್ರಕ್ರಿಯೆ ಆಗದಿದ್ದಲ್ಲಿ ರೂ. 50,000/-ಕ್ಕಿಂತ ಹೆಚ್ಚು ಖಾತೆಗೆ ಜಮಾ ಮಾಡಲಾಗದು.
2.
ನೋಟುಗಳ ಬದಲಾವಣೆಗೆ ರೂ. 4,500/-ರÀ ಮಿತಿಯನ್ನು ತಾತ್ಕಾಲಿಕವಾಗಿ ವಿಧಿಸಲಾಗಿದೆಯಲ್ಲದೆ, ನೋಟು ಬದಲಾಯಿಸುವವರು ತಮ್ಮ ಪರಿಚಯ ಪತ್ರ ನೀಡಿ ಒಂದು ಅರ್ಜಿ ನೀಡಬೇಕಿದೆ. 15 ದಿನಗಳ ನಂತರ ರೂ. 4,500/-ಕ್ಕಿಂತ ಹೆಚ್ಚಿನ ಮೊತ್ತದ ನೋಟುಗಳ ಬದಲಾವಣೆಗೆ ಅವಕಾಶ ಸಿಗಲಿದೆ. ಡಿಸೆಂಬರ್ 30, 2016ರ ನಂತರ ಇಂತಹ ಅವಕಾಶಗಳು ಇರುವುದಿಲ್ಲ.
3. ಯಾರಾದರೂ ಇನ್ನೊಬ್ಬರ ಬ್ಯಾಂಕ್ ಖಾತೆಗೆ ಇಂತಹ ರದ್ದಾದ ಹಳೆಯ ನೋಟುಗಳನ್ನು ಜಮೆ ಮಾಡುವುದಾದಲ್ಲಿ ಹಣ ಜಮೆ ಮಾಡುವವರ ಪರಿಚಯ ಪತ್ರದೊಂದಿಗೆ ಅಂತಹ ಖಾತೆದಾರರಿಂದ ನೀಡಲ್ಪಟ್ಟ ಅಧಿಕಾರ ಪತ್ರವನ್ನು ಬ್ಯಾಂಕ್‍ಗಳಿಗೆ ನೀಡಬೇಕಾಗುತ್ತದೆ.
4. ನಮ್ಮ ನಮ್ಮ ಖಾತೆಗಳಿಂದ ಚೆಕ್ಕು ನೀಡಿ ಹಣ ಪಡೆಯುವಲ್ಲಿ ತಾತ್ಕಾಲಿಕ ಮಿತಿಗಳನ್ನು ನವೆಂಬರ್ 24ರವರೆಗೆ ವಿಧಿಸಲಾಗಿದೆ. ಒಂದು ಖಾತೆಯಿಂದ ಒಬ್ಬರು ಒಂದು ವಾರದಲ್ಲಿ ಒಂದೇ ಬಾರಿಗೆ 24 ಸಾವಿರ ತೆಗೆಯಬಹುದು.
5.
6. ನ. 18-2016ರವರೆಗೆ ಎ. ಟಿ. ಎಂ.ಗಳಿಂದ ದಿನಕ್ಕೆ ರೂ. 2500/- ಮಾತ್ರ ಪಡೆಯಬಹುದು. ನಂತರದ ದಿನಗಳಿಗೆ ಅದನ್ನು ರೂ. 4,000/-ಕ್ಕೆ ಹೆಚ್ಚಿಸಲಾಗುವದು.
7. ರೂ. 100/-, ರೂ.50/-, ರೂ. 20/-, ರೂ. 10/-, ರೂ. 5/- ಮತ್ತು ರೂ. 1/-ರ ನೋಟುಗಳು ಮತ್ತು ಎಲ್ಲಾ ನಾಣ್ಯಗಳು ಅಧಿಕೃತವಾದ ಹಣವಾಗಿಯೇ ಇದೆ. ಕೇವಲ ರೂ. 1,000/- ಮತ್ತು ರೂ. 500/-ರ ನೋಟುಗಳು ಅನಧಿಕೃತವಾಗಿರುತ್ತವೆ.
ತಮ್ಮ ದೈನಂದಿನ ಖರ್ಚುಗಳಿಗಾಗಿ ಇರಿಸಿಕೊಂಡಂತಹ ಚಿಕ್ಕ ಮೊತ್ತದ (ಸುಮಾರು ರೂ.20-30 ಸಾವಿರ) ಹಣ ಹಳೆಯ ನೋಟುಗಳಲ್ಲಿದ್ದರೆ, ತಾ. 30 ಡಿಸೆಂಬರ್ ಒಳಗಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡುವುದು ಒಳ್ಳೆಯದು.
ಅದಕ್ಕಿಂತ ಹೆಚ್ಚು ಇದ್ದಲ್ಲಿ ಅಂತಹ ಹಣ ಕೈಗೆ ಬಂದುದಕ್ಕೆ ಸೂಕ್ತ ಮಾಹಿತಿಗಳನ್ನು, ದಾಖಲಾತಿಗಳನ್ನು ಹೊಂದಿರುವುದು ಒಳ್ಳೆಯದು.
ದಿನವಹಿ ಲೆಕ್ಕಪತ್ರವಿಡುವ ವರ್ತಕರಿಗೆ, ಅವರ ಲೆಕ್ಕಪುಸ್ತಕವೇ ದಾಖಲಾತಿಯಾಗಬಹುದು. ಪುಸ್ತಕದಲ್ಲಿ ತಾ. 08.11.2016ರಂದು ಇದ್ದ ನಗದು ಶಿಲ್ಕನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಿಕೊಳ್ಳಬಹುದು. ಲೆಕ್ಕ ಪುಸ್ತಕ ಇಡದೇ ಇರುವ ವ್ಯವಹಾರಸ್ಥರು ಅವರ ವ್ಯವಹಾರಗಳಿಗೆ ಅನುಗುಣವಾದ ಮೊತ್ತವನ್ನು ಜಮೆ ಮಾಡಿದಲ್ಲಿ ಮುಂದೆ ತೊಂದರೆಯಾಗದು.
ರೂ. 3 ಲಕ್ಷಕ್ಕಿಂತ ಹೆಚ್ಚಿನ ಎಲ್ಲ ಹಳೇ ನೋಟುಗಳ ಜಮೆಯ ವ್ಯವಹಾರದ ವಿವರಗಳು ರಿಸರ್ವ್ ಬ್ಯಾಂಕ್ ಹಾಗೂ ಆದಾಯ ತೆರಿಗೆ ಕಚೇರಿಗಳಿಗೆ ಬ್ಯಾಂಕ್‍ಗಳು ನೀಡುವುದರಿಂದ ತಮ್ಮ ವ್ಯವಹಾರಗಳಿಗೆ ಅನುಗುಣವಲ್ಲದ ಮೊತ್ತವನ್ನು ಬ್ಯಾಂಕ್‍ಗೆ ಜಮೆ ಮಾಡುವಾಗ ಜಾಗ್ರತೆ ವಹಿಸಬೇಕು.
ಕಾಫಿ, ಏಲಕ್ಕಿ, ಕರಿಮೆಣಸು ಇತ್ಯಾದಿ ಪ್ಲಾಂಟೇಶನ್ ಬೆಳೆಗಳನ್ನು ಬೆಳೆಯುವ ಕೃಷಿಕರ ಆದಾಯ ಕೃಷಿ ವರಮಾನ ಮುಕ್ತವಾದ ನಂತರ, ಹೆಚ್ಚಿನ ಕೃಷಿಕರು ಲೆಕ್ಕಪತ್ರ ಇಡುವ ಅಭ್ಯಾಸವನ್ನು ಕೈ ಬಿಟ್ಟಿದ್ದಾರೆ ಎನ್ನಲಾಗಿದೆ.
ಕಾಫಿ, ಏಲಕ್ಕಿ ಅಥವಾ ಮುಖ್ಯವಾಗಿ ಕರಿಮೆಣಸು ಮಾರಾಟವನ್ನು ನಗದಾಗಿಯೇ ಹೆಚ್ಚಿನ ಕೃಷಿಕರು ಮಾಡುತ್ತಾರೆ. ಇಂತಹ ನಗದು ಎಲ್ಲವೂ ಬ್ಯಾಂಕ್‍ಗಳಿಗೆ ಆಗಿಂದಾಗ್ಗೆ ಜಮೆಯಾಗದೇ ಕೈಯಲ್ಲಿ ಉಳಿದು ದೊಡ್ಡ ಮೊತ್ತದ ಹಣವಾಗಿ ಮನೆಯಲ್ಲಿ ಉಳಿದಿರಲೂಬಹುದು.
ಅಂತಹ ಹಣ ರೂ.100/-ರ ಅಥವಾ ಅದಕ್ಕಿಂತ ಚಿಕ್ಕ ಮೌಲ್ಯದ ನೋಟುಗಳಲ್ಲಿದ್ದರೆ ಕಷ್ಟವಿಲ್ಲ. ಅದು ರೂ. 1,000/- ಅಥವಾ ರೂ. 500/-ರ ಕಂತೆಗಳಾಗಿರುವ ಸಾಧ್ಯತೆಯೇ ಹೆಚ್ಚು. ಅಂತಹ ಕೃಷಿಕರೂ ತಮ್ಮ ಕೈಯಲ್ಲಿರುವ ಹಣವನ್ನು ಬ್ಯಾಂಕ್ ಖಾತೆಗೆ ಹಾಕಲೇಬೇಕು. ಅಂತಹ ಸಂದರ್ಭದಲ್ಲಿ, ತಮ್ಮ ಕೃಷಿ ಉತ್ಪನ್ನಗಳನ್ನು ಸದ್ಯದಲ್ಲಿ ಮಾರಿರುವುದಕ್ಕೆ ಸೂಕ್ತ ದಾಖಲೆಗಳನ್ನು ಹೊಂದಿಸಿಕೊಳ್ಳುವುದು ಉತ್ತಮ. ಇಲ್ಲವಾದಲ್ಲಿ ಮುಂದೊಂದು ದಿನ ಆದಾಯ ತೆರಿಗೆ ಇಲಾಖೆಯು ವಿವರಣೆ ಕೇಳಿದಲ್ಲಿ ತಬ್ಬಿಬ್ಬಾಗುವ ಪರಿಸ್ಥಿತಿ ಕೂಡ ಬಂದೀತು.
ಈ ಯೋಜನೆಯಿಂದ ತಾತ್ಕಾಲಿಕವಾಗಿ ಎಲ್ಲ ರೀತಿಯ ಜನರಿಗೂ ತೊಂದರೆಗಳಾಗುವುದು ಸಹಜ. ಕೊಡಗಿನಲ್ಲಿ ಕಾಫಿ ಬೆಳೆಗಾರರು ತೋಟ ಕಾರ್ಮಿಕರಿಗೆ ನೀಡಬೇಕಾದ ವಾರದ ಮುಂಗಡ, ಸಂಬಳಕ್ಕಾಗಿ ಹಣಕ್ಕೆ ಪರದಾಟ ಪಡುವ ಪರಿಸ್ಥಿತಿ ಇದೆ. ಕೈಯಲ್ಲಿರುವುದು ರದ್ದಾದ ನೋಟುಗಳು, ಬ್ಯಾಂಕ್‍ನಲ್ಲಿ ಹಣವಿದ್ದರೂ ಮಿತಿಗಿಂತ ಕ್ಕಿಂತ ಹೆಚ್ಚು ಹಿಂಪಡೆಯುವಂತಿಲ್ಲ. ಕಾಫಿ ಕೊಯ್ಲಿನ ಈ ಸಮಯದಲ್ಲಿ ಸಂಬಳಕ್ಕೆ ಬೇಕಾದ ಹೆಚ್ಚಿನ ಹಣಕ್ಕಾಗಿ ಪರಿತಪಿಸುವ ಪರಿಸ್ಥಿತಿ ಇದೆ.
ಈಗ ಎಲ್ಲಾ ಕಾರ್ಮಿಕರಿಗೂ ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್‍ಗಳಿರುವುದು ಅತ್ಯಂತ ಅನುಕೂಲ ಪರಿಸ್ಥಿತಿ.
ಕಾಫಿ ಬೆಳೆಗಾರರು ತಮ್ಮ ಎಲ್ಲ ಕೆಲಸಗಾರರ ಬ್ಯಾಂಕ್ ಖಾತೆಗಳ ಮಾಹಿತಿ ಪಡೆದು, ಅವರಿಗೆ ನೀಡಬೇಕಾದ ಮುಂಗಡ ಅಥವಾ ಸಂಬಳಗಳನ್ನು ತಮ್ಮ ಖಾತೆಯಿಂದ ಅವರ ಖಾತೆಗೆ ವರ್ಗಾವಣೆ ಮಾಡಿಸಬಹುದು. ಕೆಲಸಗಾರರು ತಮ್ಮ ಖಾತೆಯಿಂದ ಅದನ್ನು ಬೇಕಾದಾಗ ಪಡೆದುಕೊಳ್ಳಬಹುದು ಅಥವಾ ಕಾರ್ಮಿಕರಿಗೆ ತಮ್ಮಲ್ಲಿರುವ ಹಳೆಯ ನೋಟುಗಳನ್ನೇ ನೀಡಿದಲ್ಲಿ, ಕೆಲಸಗಾರರು ಬ್ಯಾಂಕುಗಳಲ್ಲಿ ಅಥವಾ ಅಂಚೆ ಕಛೇರಿಗಳಲ್ಲಿ ತಮ್ಮ ಪರಿಚಯ, ದಾಖಾಲಾತಿ ಮತ್ತು ಅರ್ಜಿ ನೀಡಿ ಅವುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಿಕೊಳ್ಳಬಹುದು.
ಬ್ಯಾಂಕಿಂಗ್ ವ್ಯವಸ್ಥೆಗೆ ತರಲಾಗದ ಕಳ್ಳಹಣ ಅಥವಾ ಕಳ್ಳನೋಟುಗಳು ಕತ್ತಲೆಯಲ್ಲಿಯೇ ಕೊನೆಗಾಣುತ್ತವೆ. ಅದನ್ನು ಹೊಂದಿದವರ ಪರಿಸ್ಥಿತಿಯೂ ಶೋಚನೀಯವಾಗಬಹುದು.
ಇಂತಹ ಚಾಣಾಕ್ಷ ಯೋಜನೆಯಿಂದ ಚಲಾವಣೆಯಲ್ಲಿರುವ ಎಲ್ಲ ದೊಡ್ಡ ಮೌಲ್ಯದ ಹಣ ಒಂದು ಬಾರಿ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ವಾಪಾಸ್ ರಿಸರ್ವ್ ಬ್ಯಾಂಕಿಗೆ ಬರುತ್ತದೆ. ಬಂದ ಹಣಕ್ಕೆ ಸರಿಯಾಗಿ ಹೊಸ ನೋಟುಗಳು ಚಲಾವಣೆಗೆ ಬರುತ್ತವೆ.
ಆದ್ದರಿಂದ ಹಳೆಯ ನೋಟುಗಳ ದಾಸ್ತಾನು ಇರುವವರು ನಿಗದಿತ ಸಮಯದ ಒಳಗಾಗಿ, ಸೂಕ್ತ ದಾಖಲಾತಿಗಳನ್ನು ಹೊಂದಿಸಿಕೊಂಡು ಬ್ಯಾಂಕ್‍ಗೆ ಜಮೆ ಮಾಡುವುದು ಅಗತ್ಯವಾಗಿದೆ.
ಹಳೇಯ ನೋಟುಗಳು ಚಲಾವಣೆಗೆ ಈಗಾಗಲೇ ಯೋಗ್ಯವಲ್ಲದ ಕಾರಣ ರಿಸರ್ವ್ ಬ್ಯಾಂಕ್‍ನ ಪ್ರತಿನಿಧಿಗಳಾಗಿ ಬ್ಯಾಂಕಿಂಗ್ ವ್ಯವಸ್ಥೆ ಯಲ್ಲಿ ಮಾತ್ರ ನೀಡಬಹುದಾಗಿದೆ. ಈ ಸಂದರ್ಭದಲ್ಲಿ ನಮ್ಮಲ್ಲಿರುವ ಹಳೆಯ ನೋಟುಗಳನ್ನು ಬ್ಯಾಂಕ್‍ಗೆ ನಿಗದಿತ ಸಮಯದ ಒಳಗೆ ತಲುಪಿಸದಿದ್ದಲ್ಲಿ, ಅಂತಹ ನೋಟುಗಳು ಯಾವುದೇ ಉಪಯೋಗಕ್ಕೆ ಬಾರದ ಬರೇ ಕಾಗದದ ತುಂಡುಗಳಾಗಿ ಉಳಿದು ಬಿಡುತ್ತವೆ.
-ಎಂ. ಈಶ್ವರಭಟ್ (ಸಿ.ಎ.)
ಮಡಿಕೇರಿ.