ಕುಶಾಲನಗರ, ನ. 15: ಸಹಕಾರ ಕ್ಷೇತ್ರದ ವ್ಯಾಪ್ತಿ, ವಿಸ್ತಾರ, ಪ್ರಾಮುಖ್ಯತೆ ಹಾಗೂ ಮಹತ್ವವನ್ನು ಅರಿತು ಕಾರ್ಯನಿರ್ವಹಿಸಿದಲ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್ ಹೇಳಿದರು.

63ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಕುಶಾಲನಗರದ ವಿವಿಧ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ಸ್ಥಳೀಯ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಸಹಕಾರ ಸಂಘಗಳ ಮೂಲಕ ಕೌಶಲ್ಯ ಮತ್ತು ಉದ್ಯಮಶೀಲತೆಯನ್ನು ಅಭಿವೃದ್ಧಿಪಡಿಸುವ ದಿನ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಪಡಿತರ ವಿತರಣೆ, ರಸಗೊಬ್ಬರ, ಹಾಲು ವಿತರಣೆ ಸೇರಿದಂತೆ ಹಲವು ವಿಚಾರಗಳಲ್ಲಿ ಸಹಕಾರ ರಂಗ ದೇಶದಲ್ಲಿ ಮುಂಚೂಣಿಯಲ್ಲಿದೆ. ಇದರೊಂದಿಗೆ ಅತ್ಯಮೂಲ್ಯವಾದ ಸೇವೆಯನ್ನು ಒದಗಿಸುವ ಮೂಲಕ ಸಹಕಾರ ಕ್ಷೇತ್ರ ಸಮಾಜಮುಖಿ ಯಾಗಿದೆ ಎಂದರು.

ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಸಹಕಾರ ಕ್ಷೇತ್ರದ ವೇಗಕ್ಕೆ ತಕ್ಕಂತೆ ಸಹಕಾರಿಗಳು ಕೂಡ ಅಗತ್ಯ ಶಿಕ್ಷಣ, ವೃತ್ತಿಪರತೆ, ಕೌಶಲ್ಯಗಳನ್ನು ಬೆಳೆಸಿಕೊಂಡಲ್ಲಿ ಮತ್ತಷ್ಟು ಯಶಸ್ಸು ಗಳಿಸಲು ಸಾಧ್ಯ. ಜನಸಾಮಾನ್ಯರು ಸಹಕಾರ ರಂಗಗಳ ಬಗ್ಗೆ ಒಲವು ತೋರಬೇಕಿದೆ. ಸಹಕಾರ ಕ್ಷೇತ್ರದಲ್ಲಿ ದೊರಕುವ ಹಲವಾರು ಸೌಲಭ್ಯಗಳನ್ನು ಪಡೆದು ಅಭಿವೃದ್ಧಿ ಹೊಂದಬೇಕಿದೆ ಎಂದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಎ.ಕೆ.ಮನುಮುತ್ತಪ್ಪ ಮಾತನಾಡಿ, ಪೂರ್ವಿಕರು ಕಲ್ಪಿಸಿಕೊಟ್ಟ ಅಡಿಪಾಯ ಹಾಗೂ ಮಾರ್ಗದರ್ಶನದ ಮೂಲಕ ಜಿಲ್ಲೆಯಲ್ಲಿ ಸಹಕಾರ ರಂಗ ಬೃಹದಾಕಾರವಾಗಿ ಬೆಳೆದಿದೆ. ರೈತರನ್ನು ಆರ್ಥಿಕವಾಗಿ ಸಬಲಗೊಳಿಸುವದರೊಂದಿಗೆ ಶಿಕ್ಷಣ ಕ್ಷೇತ್ರಕ್ಕೂ ಕೊಡುಗೆಗಳನ್ನು ನೀಡಿದ ಹಿರಿಯ ಸಹಕಾರಿಗಳ ಸೇವೆ ಅತ್ಯಮೂಲ್ಯವಾಗಿದೆ ಎಂದರು.

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಎಂ.ಎನ್. ಕುಮಾರಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಹೆಚ್.ಬಿ.ಚಂದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮಡಿಕೇರಿ ಕೆಐಸಿಎಂ ಪ್ರಾಂಶುಪಾಲ ಆರ್.ಎಸ್. ರೇಣುಕಾ ದಿನದ ಮಹತ್ವದ ಕುರಿತು ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿಗಳಾದ ಹೆಚ್.ಬಿ. ಶಿವಕುಮಾರ್ ಮತ್ತು ಲೀಲಾ ಬಂಗಾರಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಬ್ಯಾಂಕ್ ಉಪಾಧ್ಯಕ್ಷ ಎಸ್.ಪಿ.ನಿಂಗಪ್ಪ, ನಿರ್ದೇಶಕ ಹೆಚ್.ಎನ್.ರಾಮಚಂದ್ರ, ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯP ಟಿ.ಆರ್.ಶರವಣಕುಮಾರ್, ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಆರ್.ರವಿಕುಮಾರ್, ನಿಸರ್ಗ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಪಿ.ಕೆ.ಜಗದೀಶ್, ಮಾವೇಲಿ ಸಹಕಾರ ಸಂಘದ ಅಧ್ಯಕ್ಷ ಪಿ.ಟಿ. ಸುದೇಶ್‍ಕುಮಾರ್, ಶಾರದಾ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಾಂತ ಶ್ರೀಪತಿ, ನಾಡಪ್ರಭು ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಡಿ.ರಂಗಸ್ವಾಮಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.