ಮಡಿಕೇರಿ, ನ. 23: 500 ಹಾಗೂ 1000 ಮುಖಬೆಲೆಯ ನೋಟು ನಿಷೇಧದಿಂದ ಜನ ಸಾಮಾನ್ಯರಿಗೆ ತೊಂದರೆ ಯುಂಟಾಗುತ್ತಿದೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.ನಗರದ ಗಾಂಧಿ ಮೈದಾನದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯ ಕರ್ತರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಕೇಂದ್ರದ ಮೋದಿ ಸರ್ಕಾರದ 500 ಮತ್ತು 1000 ರೂ. ಮುಖಬೆಲೆಯ ನೋಟು ಬದಲಾವಣೆ ನಿರ್ಧಾರ ಸ್ವಾಗತಾರ್ಹವಾಗಿದೆ. ಆದರೆ ಇದರಿಂದ ಬ್ಯಾಂಕ್ಗಳನ್ನು ಅವಲಂಭಿಸಿರುವ ಗ್ರಾಹಕರಿಗೆ ಉಂಟಾ ಗುತ್ತಿರುವ ತೊಂದರೆಯನ್ನು ನಿವಾರಿಸು ವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಟಿ. ಪ್ರದೀಪ್, ಚುನಾವಣೆಗೂ ಮುನ್ನ ಪ್ರಧಾನಮಂತ್ರಿಗಳು ವಿದೇಶದಿಂದ ಕಪ್ಪು ಹಣವನ್ನು ತಂದು ಬಡವರ ಖಾತೆಗೆ 15 ಲಕ್ಷ ಹಣವನ್ನು 100 ದಿನದೊಳಗೆ ಹಾಕುತ್ತೇವೆ ಎಂದು ಹೇಳಿದ್ದರು. 100 ದಿನ ಹೋಗಿ 2 ವರ್ಷ ಕಳೆದರೂ ಆ ಮಾತನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಅದನ್ನು ಮುಚ್ಚಿ ಹಾಕಲು ನೋಟು ನಿಷೇಧದ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಪ್ರಧಾನಮಂತ್ರಿಗಳಿಗೆ ಅನುಭವದ ಕೊರತೆ ಇರುವದು ಎದ್ದು ಕಾಣಿಸುತ್ತಿದೆ. ಕಪ್ಪು ಹಣವನ್ನು ನಿಷೇಧಿಸುವ ಕ್ರಮವನ್ನು ರಾಷ್ಟ್ರಾದ್ಯಂತ ಹಾಗೂ ಕಾಂಗ್ರೆಸ್ ಕೂಡ ಸ್ವಾಗತಿಸಿತ್ತು. ಆದರೆ ಪೂರ್ವ ತಯಾರಿಯನ್ನು ಮಾಡಿಕೊಂಡು ಜನಸಾಮಾನ್ಯರಿಗೆ ತೊಂದರೆಯಾಗದ ರೀತಿಯಲ್ಲಿ ಕಪ್ಪು ಹಣವನ್ನು ಬಯಲಿಗೆಳೆಯುತ್ತಾರೆ ಎನ್ನುವ ನಂಬಿಕೆ ಇತ್ತು. ಒಂದು ವಾರದಲ್ಲಿ ಸರಿಹೋಗುವ ವಿಶ್ವಾಸದಿಂದ ಎಲ್ಲರೂ ಬೆಂಬಲ ನೀಡಿದ್ದರು. ಆದರೆ ಮೂರು ವಾರ ಕಳೆದರೂ ಬ್ಯಾಂಕಿನಲ್ಲಿ ‘ಕ್ಯೂ’ ನಿಲ್ಲಬೇಕಾಗಿದೆ ಎಂದು ಆರೋಪಿಸಿದರು.
ಇದೇ ಸಂದರ್ಭ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಸಾಗಿದ ಪ್ರತಿಭಟನಾಕಾರರು ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು.
ಕಾಂಗ್ರೆಸ್ ಜಿಲ್ಲಾ ವಕ್ತಾರ ಕೆ.ಕೆ. ಮಂಜುನಾಥ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ವಿ.ಪಿ. ಶಶಿಧರ್, ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಸದಸ್ಯರಾದ ಪ್ರಕಾಶ್ ಆಚಾರ್ಯ, ಲೀಲಾ ಶೇಷಮ್ಮ, ಜುಲೇಕಾಬಿ, ಚುಮ್ಮಿದೇವಯ್ಯ, ಉದಯಕುಮಾರ್, ನಗರಾಧ್ಯಕ್ಷ ಅಬ್ದುಲ್ ರಜಾಕ್, ಬಂಧಿಖಾನೆ ಸಲಹಾ ಸಮಿತಿ ಸದಸ್ಯ ಪುಷ್ಪಪೂಣಚ್ಚ, ನಗರ ಕಾಂಗ್ರೆಸ್ ವಕ್ತಾರ ತೆನ್ನೀರಾ ಮೈನಾ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.