ಗೋಣಿಕೊಪ್ಪಲು, ನ.23: ಬಾಳೆಲೆ ಹೋಬಳಿಯ ಜನತೆಯ ವಿವಿಧ ಸಮಸ್ಯೆಗಳನ್ನು ಆಲಿಸಲು ಇಂದು ಅಲ್ಲಿನ ವಿಜಯಲಕ್ಷ್ಮಿ ಪ.ಪೂ.ಕಾಲೇಜು ಆವರಣದಲ್ಲಿ ದಿಢೀರನೆ ಜಿಲ್ಲಾಧಿಕಾರಿ ಮಟ್ಟದ ಜನಸಂಪರ್ಕ ಸಭೆಯನ್ನು ಆಯೋಜಿಸಲಾಗಿತ್ತು.ಸಭೆಯಲ್ಲಿ ಬಾಳೆಲೆ ಹೋಬಳಿ ಮಟ್ಟದಲ್ಲಿ ಭೀಕರ ಬರಗಾಲದ ಸ್ಥಿತಿ, ಭತ್ತ ಬೆಳೆದ ರೈತರ ಬವಣೆ, ಲಕ್ಷ್ಮಣ ತೀರ್ಥ ನದಿ ಪಾತ್ರದಲ್ಲಿಯೇ ಕುಡಿಯುವ ನೀರಿಗೆ ಹಾಹಾಕಾರ, ಅಕ್ರಮ ಮರಳುಗಾರಿಕೆ, ಕಾಫಿ, ಕಾಳುಮೆಣಸು ಇತ್ಯಾದಿ ತೋಟಗಾರಿಕೆ ಬೆಳೆಗಳಿಗೂ ನೀರಿನ ಅಭಾವ ಕುರಿತಂತೆ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಮುಂದಿಟ್ಟರು.

ಬಾಳೆಲೆ ಹೋಬಳಿಯಲ್ಲಿ ಪೈಸಾರಿ ಕೆರೆ ಒತ್ತುವರಿ ತೆರವು, ತೆರೆದ ಬಾವಿ ದುರಸ್ತಿ, ಕೊಳವೆ ಬಾವಿಗೆ ಅವಕಾಶಕ್ಕಾಗಿ ಮನವಿ, ಕಾಡು ಬೆಳೆದು ನಿಂತಿರುವ ನಾಲೆಗಳ ದುರಸ್ತಿ ಬಗ್ಗೆ ಗ್ರಾಮಸ್ಥರು ಗಮನ ಸೆಳೆದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಆರ್.ವಿ.ಡಿಸೋಜಾ ಅವರು, ಹೋಬಳಿ ಮಟ್ಟದಲ್ಲಿ ಕಂದಾಯ ಇಲಾಖೆ ಹಾಗೂ ಇತರ ಸಮಸ್ಯೆಗಳ ಕುರಿತು, ಕೆಲವು ನೂನ್ಯತೆ ಪರಿಹಾರ ನಿಟ್ಟಿನಲ್ಲಿ ಇಂದು ಜನಸಂಪರ್ಕ ಸಭೆ ಏರ್ಪಡಿಸಿರುವದಾಗಿಯೂ, ಸಮಸ್ಯೆ ಪರಿಹಾರವಾಗದಿದ್ದಲ್ಲಿ ಮುಂದೆ ಮತ್ತೊಂದು ಸಭೆ ಕರೆಯುವ ದಾಗಿಯೂ ಹೇಳಿದರು. ಕಾನೂನು ವ್ಯವಸ್ಥೆಯಲ್ಲಿ ಕೆಲವು ಕ್ಲಿಷ್ಟ ಅರ್ಜಿ ಇತ್ಯರ್ಥ ಕಷ್ಟ ಸಾಧ್ಯ. ಅಂತಹಾ ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಲು ಅವಕಾಶವಿದೆ.(ಮೊದಲ ಪುಟದಿಂದ) ಜಿಲ್ಲೆಯ ಮೂರು ತಾಲೂಕು ಗಳನ್ನು ಬರಪೀಡಿತ ತಾಲೂಕು ಘೋಷಣೆ ಮಾಡಿದ್ದು, ಶ್ರೀ ಸಾಮಾನ್ಯರ ಕುಡಿಯುವ ನೀರಿಗೆ ಮೊದಲ ಆದ್ಯತೆ. ಜಾನುವಾರುಗಳ ಮೇವು, ನಂತರ ನೀರಿನ ಲಭ್ಯತೆ ಇದ್ದಲ್ಲಿ ಮಾತ್ರ ಕೃಷಿಗೆ ಬಳಸಿಕೊಳ್ಳಲು ಅವಕಾಶವಿದೆ. ನರೇಗಾ ಮತ್ತು ಉದ್ಯೋಗಖಾತ್ರಿ ಯೋಜನೆ ಮೂಲಕ ಸಮಗ್ರ ಕುಡಿಯುವ ನೀರು ಹಾಗೂ ದುಡಿಯುವ ಕೈಗಳಿಗೆ ಕೆಲಸವನ್ನು ನೀಡಲು ಅವಕಾಶವಿದೆ. ಆದರೆ, ಜಿಲ್ಲೆಯಲ್ಲಿ ರೂ.15 ಕೋಟಿ ನರೇಗಾ ಯೋಜನೆ ಅನುದಾನ ಬಳಕೆಗೆ ಅವಕಾಶವಿದ್ದು ಕೇವಲ ರೂ.3 ಕೋಟಿ ಮಾತ್ರ್ರ ಕಾಮಗಾರಿ ನಡೆದಿದೆ. ಉಳಿಕೆ ಮೊತ್ತ ಸರ್ಕಾರಕ್ಕೆ ವಾಪಾಸ್ಸಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಬಾಳೆಲೆ ಗ್ರಾ.ಪಂ.ಮಾಜಿ ಅಧ್ಯಕ್ಷ ಆದೇಂಗಡ ವಿನು ಉತ್ತಪ್ಪ ಮಾತನಾಡಿ, ಜನಸಂಪರ್ಕ ಸಭೆ ಬಗ್ಗೆ ಕೇವಲ ಒಂದು ದಿನದ ಅವಧಿಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ ಹಿನ್ನೆಲೆ ಈ ವಿಭಾಗದ ಜನತೆಗೆ ಅಹವಾಲು ಸಲ್ಲಿಸಲು ತೊಂದರೆಯಾಗಿದೆ. ಕೇವಲ ದೂರವಾಣಿ ಕರೆ ಮೂಲಕ ಇಂದು ಕೆಲವು ಗ್ರಾಮಸ್ಥರನ್ನು ಸೇರಿಸಲು ಸಾಧ್ಯವಾಯಿತು ಎಂದು ಜಿಲ್ಲಾಧಿಕಾರಿಗಳಿಗೆ ದೂರಿದರು. ಮೂರು ತಾಲೂಕುಗಳನ್ನು ಬರಗಾಲ ಪೀಡಿತ ಗ್ರಾಮವೆಂದು ಸರ್ಕಾರ ಘೋಷಣೆ ಮಾಡಿದ್ದು, ಇಲ್ಲಿನ ಭತ್ತ ಬೆಳೆದ ರೈತರಿಗೆ, ಕೃಷಿಕರಿಗೆ ಏನು ಲಾಭ ಎಂದು ಪ್ರಶ್ನಿಸಿದರು.

ಈ ಬಗ್ಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಸಧ್ಯದ ಪರಿಸ್ಥಿತಿಯಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಲಾಗುವದು. ತೋಟಗಾರಿಕೆ ಬೆಳೆಗಳು ಹಾಗೂ ಕಾಫಿ ಕೃಷಿಯಲ್ಲಿ ನಷ್ಟವಾಗಿರುವ ಬಗ್ಗೆ ಜಿಲ್ಲಾಡಳಿತಕ್ಕೆ ಯಾವದೇ ಮಾಹಿತಿ ಲಭ್ಯವಾಗಿಲ್ಲ. ಮರಳುಗಾರಿಕೆ, ಕಳ್ಳ ಸಾಗಾಟಕ್ಕೆ ಅವಕಾಶವಿಲ್ಲ. ಅಕ್ರಮ ಮರಳು ಸಾಗಾಟ ತಡೆಗೆ ಮೂರು ತಾಲೂಕುಗಳಲ್ಲಿಯೂ ಮರಳು ನಿಗ್ರಹ ಪಡೆಯನ್ನು ರಚಿಸಲಾಗಿದೆ ಎಂದು ಹೇಳಿದರು.

ಸ್ವಂತ ಬಳಕೆಗೆ ಮರಳು ನೀತಿಗೆ ಸಡಿಲ ಧೋರಣೆ ಅನುಸರಿಸಿ, ರಾತ್ರಿ ವೇಳೆ ವೀರಾಜಪೇಟೆ ತಾಲೂಕಿ ನಾದ್ಯಂತ ಅತಿವೇಗದ ಚಾಲನೆ ಯೊಂದಿಗೆ ಮರಳು ಸಾಗಾಟ ವಾಗುತ್ತಿದೆ. ಅಂತರ ಜಿಲ್ಲೆ, ಅಂತರ ರಾಜ್ಯ ಕಡೆಗೆ ಮರಳು ಸಾಗಾಟ ನಿಲ್ಲಿಸಿ ಎಂದು ಸಾರ್ವ ಜನಿಕರ ಒತ್ತಡ ಕೇಳಿ ಬಂತು.

ಭತ್ತದ ಬೆಳೆಗೆ ಕೇರಳ ಮಾದರಿಯಲ್ಲಿ ಹೆಕ್ಟೇರ್‍ಗೆ ರೂ.22 ಸಾವಿರ ಪರಿಹಾರ ನೀಡಿ, ಇಲ್ಲವೇ ಕನಿಷ್ಟ ರೂ.10 ಸಾವಿರವಾದರೂ ಪರಿಹಾರ ನೀಡಲು ಗ್ರಾಮಸ್ಥರು ಒತ್ತಾಯಿಸಿದರು. ಭತ್ತ ಬೆಳೆದ ರೈತರಿಗೆ ಈ ಬಾರಿ ಕನಿಷ್ಟ ರೂ. 2 ಸಾವಿರ ಬೆಂಬಲ ಬೆಲೆ ನಿಡಿ ಎಂದು ಕಾಂಡೇರ ದೇವಯ್ಯ ಒತ್ತಾಯಿಸಿದರು. ನದಿ ಪಾತ್ರದಿಂದ ಕಾಫಿ ತೋಟ ಹಾಗೂ ಗದ್ದೆಗೆ ತುಂತುರು ನೀರು ಹಾಯಿಸಲು ಕಾನೂನು ಕ್ರಮ ಬೇಡ ಎಂಬ ಒತ್ತಾಯವನ್ನೂ ಗ್ರಾಮಸ್ಥರು ಮಾಡಿದರು.

ಕಾಫಿ ಮಂಡಳಿ ಉಪಾಧ್ಯಕ್ಷೆ ತಾರಾ ಅಯ್ಯಮ್ಮ ಮಾತನಾಡಿ, ಬಾಳೆಲೆ ವ್ಯಾಪ್ತಿಯ ನಾಲೆಗಳಲ್ಲಿ ಕಾಡು, ಗಿಡ-ಗಂಟಿ ಬೆಳೆದು ಮುಚ್ಚಿ ಹೋಗಿದೆ. ಸಣ್ಣ ನೀರಾವರಿ ಇಲಾಖೆ ಈ ಬಗ್ಗೆ ಕಣ್ಣು ಮುಚ್ಚಿ ಕುಳಿತಿದೆ. ನಾಲೆ ದುರಸ್ತಿ, ಪೈಸಾರಿ ಕೆರೆ ಅಭಿವೃದ್ಧಿ ಹಾಗೂ ಅಲ್ಲಲ್ಲಿ ಚೆಕ್ ಡ್ಯಾಮ್ ನಿರ್ಮಿಸುವ ಮೂಲಕ ಕಾಫಿ ಹಾಗೂ ಕಾಳುಮೆಣಸು ಕೃಷಿಗೆ ನೀರು ಹಾಯಿಸಲು ಅವಕಾಶ ಕಲ್ಪಿಸಲು ಮನವಿ ಮಾಡಿದರು. ನೂತನ ತೆರೆದ ಬಾವಿಗೆ ಅನುಮತಿ ನೀಡುವ ಬದಲು ಇರುವ ಬಾವಿಯನ್ನು ಆಳವಾಗಿ ತೋಡಲು, ರಿಂಗ್ ಅಳವಡಿಸಲು ಸರ್ಕಾರ ಅನುಮತಿ ನೀಡಲು ಮನವಿ ಮಾಡಲಾಯಿತು.

ಇದೇ ಸಂದರ್ಭ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಫೆಡ್ನೇಕರ್ ಅವರು, ರೂ.25 ಲಕ್ಷ ಹಣವಿದ್ದು, ತುರ್ತು ಅಗತ್ಯಕ್ಕೆ ಬಳಸ ಬಹುದಾಗಿದೆ ಎಂದು ಹೇಳಿದರು.ಮಳೆಕೊಯ್ಲು ಜಿಲ್ಲೆಯಲ್ಲಿ ಆಗಿಲ್ಲ. ಮುಂದಿನ ಸಾಲಿನಲ್ಲಿ ಚೆಕ್ ಡ್ಯಾಮ್ ಹಾಗೂ ಇಂಗುಗುಂಡಿ ಕಾಮಗಾರಿಗೆ ಚಾಲನೆ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಕೊಡಗು ಜಿಲ್ಲೆಗೆ ವಿಶೇಷ ಆದ್ಯತೆ ಮೇರೆ ಕೊಳವೆ ಬಾವಿ ತೋಡಲು ಅವಕಾಶ ಕಲ್ಪಿಸುವಂತೆ ತಾರಾ ಅಯ್ಯಮ್ಮ ಮನವಿ ಮಾಡಿದರು.

ಉಪವಿಭಾಗಾಧಿಕಾರಿ ನಂಜುಂಡೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ ಜಂಟಿ ಸರ್ವೇ ಮೂಲಕ ಅಂದಾಜು ಬೆಳೆ ನಷ್ಟ ಮಾಡುತ್ತಿದೆ. ಗ್ರಾಮವಾರು ಗದ್ದೆ, ರೈತರ ಹೆಸರು ಹಾಗೂ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಹೊಂದಿಕೊಂಡು ಪರಿಹಾರ ಕಾರ್ಯ ನಡೆಸಲಾಗುವದು ಎಂದು ಭರವಸೆ ನೀಡಿದರು.

ಪೆÇನ್ನಪ್ಪಸಂತೆ ಗ್ರಾ.ಪಂ.ಮಾಜಿ ಅಧ್ಯಕ್ಷ ವಿನು ಚಂಗಪ್ಪ ಮಾತನಾಡಿ, ಗ್ರಾ.ಪಂ.14 ನೇ ಹಣಕಾಸು ಹಣ ಮೂರು ಕಂತುಗಳಲ್ಲಿ ಬಿಡುಗಡೆಯಾಗುತ್ತಿದೆ. ಸಿಬ್ಬಂದಿ ವೇತನ ಹಾಗೂ ವಿದ್ಯುತ್ ಬಿಲ್‍ಗೆ ಈ ಮೊತ್ತ ಸಾಕಾಗುತ್ತಿಲ್ಲ. ತುರ್ತು ಕಾಮಗಾರಿಗೆ ಟಾಸ್ಕ್ ಫೋರ್ಸ್ ಹಣ ಬಿಡುಗಡೆಗೊಳಿಸಲು ಒತ್ತಾಯಿಸಿದರು.

ನರೇಗಾ ಯೋಜನೆ ಹಾಗೂ ಉದ್ಯೋಗ ಖಾತ್ರಿ ಯೋಜನೆ ಅನುಷ್ಟಾನ ಬಾಳೆಲೆ ಹೋಬಳಿ ವ್ಯಾಪ್ತಿಯಲ್ಲಿ ವೈಫಲ್ಯ ಕಂಡಿರುವದಾಗಿ ಗ್ರಾಮಸ್ಥರು ದೂರಿದರು. ಬರಗಾಲದ ಬೇಗೆಯಿಂದ ತತ್ತರಿಸಿರುವ ಬಾಳೆಲೆಗೆ ಜಿಲ್ಲಾಧಿಕಾರಿ ಭೇಟಿ ಬಗ್ಗೆ ವಾರದ ಹಿಂದೆಯೇ ಕಂದಾಯ ಇಲಾಖೆ ಪ್ರಚಾರ ನಡೆಸಬೇಕಿದ್ದರೂ ಯಾವದೇ ಪ್ರಚಾರ ನಡೆಸಲಿಲ್ಲ. ಇಂದು ಬೆಳಿಗ್ಗೆ ಕಂದಾಯ ಪರಿವೀಕ್ಷಕರ ಕಚೇರಿ ಮುಂದೆ ಜಿಲ್ಲಾಧಿಕಾರಿ ಭೇಟಿ ಬಗ್ಗೆ ಬ್ಯಾನರ್ ತೂಗು ಹಾಕಲಾಗಿತ್ತು. ಜಿ.ಪಂ.ಸದಸ್ಯ ಬಾನಂಡ ಪ್ರಥ್ಯು ಅವರಿಗೆ ಇಂದು 9 ಗಂಟೆ ಸುಮಾರಿಗೆ ಕಂದಾಯ ಪರಿವೀಕ್ಷಕ ಪಿ.ಸಿ. ಚಂದ್ರನ್ ಅವರು ದೂರವಾಣಿ ಕರೆ ಮಾಡಿ ಜನ ಸಂಪರ್ಕ ಸಭೆ ಬಗ್ಗೆ ಮಾಹಿತಿ ನೀಡಿದ ಹಿನ್ನೆಲೆ ದೂರದ ಹಂಪಿಯಲ್ಲಿದ್ದ ಜಿ.ಪಂ.ಸದಸ್ಯರು ಭೇಟಿ ನೀಡಲು ಸಾಧ್ಯವಾಗದೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ತಾ.ಪಂ.ಸದಸ್ಯೆ ಎಂ.ಬಿ.ಸುನೀತಾ ಅವರಿಗೂ ಮಾಹಿತಿ ಕೊರತೆಯಿಂದ ಗೈರಾಗಿದ್ದರು.

ಬಾಳೆಲೆ, ನಿಟ್ಟೂರು ಹಾಗೂ ಪೆÇನ್ನಪ್ಪಸಂತೆ ಗ್ರಾ.ಪಂ.ಅಧ್ಯಕ್ಷರು ಹಾಗೂ ಪಿಡಿಓಗೆ ಇಂದು ಬೆಳಿಗ್ಗೆ ದೂರವಾಣಿ ಕರೆ ಮಾಡಿ ತಿಳಿಸಿದ ಹಿನ್ನೆಲೆ ಇಂದು ಬಹುತೇಕ ಗ್ರಾ.ಪಂ.ಚುನಾಯಿತ ಜನಪ್ರತಿನಿಧಿಗಳು ಗೈರು ಹಾಜರಾಗಿದ್ದರು. ಒಟ್ಟಾರೆ ತಹಶೀಲ್ದಾರ್ ಒಳಗೊಂಡಂತೆ ಮೇಲಧಿಕಾರಿಗಳು 6 ದಿನಗಳ ಮುಂಚಿತವಾಗಿಯೇ ಸಂಪರ್ಕ ಸಭೆ ಬಗ್ಗೆ ಪ್ರಚಾರ ನಡೆಸುವಂತೆ ಕಂದಾಯ ಪರಿವೀಕ್ಷಕರಿಗೆ ಸೂಚನೆ ನೀಡಿದ್ದರೂ ದಿವ್ಯ ನಿರ್ಲಕ್ಷ್ಯ ವಹಿಸಿದ್ದು ಸಾರ್ವಜನಿಕರ ಅಸಮಾಧಾನ ಸಭೆಗೂ ಮುನ್ನವೇ ಚರ್ಚೆಗೆ ಕಾರಣವಾಗಿತ್ತು. ಇಷ್ಟೇ ಆಗಿದ್ದರೆ ಪರವಾಗಿಲ್ಲ. ಜನಸಂಪರ್ಕ ಸಭೆಯನ್ನು ಕಂದಾಯ ಪರಿವೀಕ್ಷಕರ ಕಚೇರಿ ಆವರಣದಲ್ಲಿಯೇ ನಡೆಸುವದಾಗಿ ತೀರ್ಮಾನಿಸಿ, ಕಚೇರಿ ಮುಂಭಾಗ ಬ್ಯಾನರ್ ಅಳವಡಿಸ ಲಾಗಿತ್ತು. ಕಚೇರಿ ಕಿರಿದಾಗಿದ್ದು ಒಳಗೆ ನಾಲ್ವರು ಗ್ರಾಮಸ್ಥರು ನಿಲ್ಲಲು ಸ್ಥಳದ ಅಭಾವವಿತ್ತು. ಬಳಿಕ ಬಾಳೆಲೆ ಮಾಜಿ ಗ್ರಾ.ಪಂ.ಅಧ್ಯಕ್ಷ ಆದೇಂಗಡ ವಿನು ಉತ್ತಪ್ಪ, ವಿಜಯಲಕ್ಷ್ಮಿ ಪ.ಪೂ.ಕಾಲೇಜು ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ನಿಟ್ಟೂರು ಗ್ರಾಮದ ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಅರಮಣಮಾಡ ಸತೀಶ್‍ದೇವಯ್ಯ, ಬಾಳೆಲೆ ಗ್ರಾಮ ಪಂಚಾಯಿತಿ ಸದಸ್ಯ ಸುಖೇಶ್ ಭೀಮಯ್ಯ ಮತ್ತು ಗ್ರಾಮಸ್ಥರ ಒತ್ತಡದ ಮೇರೆ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜಾ, ಉಪ ವಿಭಾಗಾಧಿಕಾರಿ ನಂಜುಂಡೇ ಗೌಡ ಹಾಗೂ ವೀರಾಜಪೇಟೆ ತಹಶೀಲ್ದಾರ್ ಮಹದೇವಸ್ವಾಮಿ ಅವರುಗಳು ವಿಜಯಲಕ್ಷ್ಮಿ ಪ.ಪೂ.ಕಾಲೇಜು ಆವರಣದಲ್ಲಿ ಜನಸಂಪರ್ಕ ಮುಂದುವರಿಸಲು ಸಮ್ಮತಿಸಿದ ಮೇರೆ 12 ಗಂಟೆಗೆ ಸಭೆ ಆರಂಭಗೊಂಡಿತು.

ಸಭೆಯಲ್ಲಿ ಅಳಮೇಂಗಡ ಬೋಸ್ ಮಂದಣ್ಣ, ಚೆಕ್ಕೇರ ಸೂರ್ಯ, ಕೇಶವಮೂರ್ತಿ, ಪಿ.ಟಿ. ಪೂಣಚ್ಚ, ಅಡ್ದೇಂಗಡ ಅರುಣ್, ಪೆÇೀರಂಗಡ ಪವನ್, ಆದೇಂಗಡ ಪ್ರಕಾಶ್ ಮುಂತಾದವರು ಮಾತನಾಡಿದರು.

ಸಭೆಯಲ್ಲಿ ನಿಟ್ಟೂರು ಗ್ರಾ.ಪಂ.ಅಧ್ಯಕ್ಷೆ ಕಾಡ್ಯಮಾಡ ಅನಿತಾ, ಉಪಾಧ್ಯಕ್ಷ ಪೆÇೀರಂಗಡ ಪವನ್ ಚಿಟ್ಟಿಯಪ್ಪ, ಬಾಳೆಲೆ ಗ್ರಾ.ಪಂ. ಉಪಾಧ್ಯಕ್ಷ ಕೊಕ್ಕೇಂಗಡ ರಂಜನ್, ಪಿಡಿಓಗಳಾದ ಅರುಣ್ ಭಾಸ್ಕರ್, ಶಿವನಂಜಯ್ಯ ಹಾಗೂ ಮನಮೋಹನ್ ಉಪಸ್ಥಿತರಿದ್ದರು. ತಹಶೀಲ್ದಾರ್ ಮಹದೇವಸ್ವಾಮಿ, ತಾ.ಪಂ.ಇಓ ಫೆಡ್ನೇಕರ್ ಅವರು ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಿದರು.

-ವರದಿ: ಟಿ.ಎಲ್.ಶ್ರೀನಿವಾಸ್