ವೀರಾಜಪೇಟೆ, ಜ. 12: ಅಮ್ಮತ್ತಿಯ ನಿವೃತ್ತ ಸೈನಿಕರಾದ ಲೆ:ಕರ್ನಲ್ ಪಿ.ಸಿ.ಕರುಂಬಯ್ಯ ಹಾಗೂ ಪಿ.ಎಸ್. ಕಾರ್ಯಪ್ಪ ಎಂಬವರು ಸರಕಾರಿ ಜಾಗಕ್ಕೆ ತೆರಳಲು ದಾರಿಯ ಅನುವು ಮಾಡಿಕೊಡಲಿಲ್ಲ ಎಂಬ ಕಾರಣಕ್ಕೆ ಅಧಿಕಾರಿಗಳು ಇಬ್ಬರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿರುವದು ಇಡೀ ದೇಶದ ಸೈನಿಕರಿಗೆ ಮಾಡಿರುವ ಘೋರ ಅಪಮಾನ ಹಾಗೂ ಇದು ಕೊಡಗಿನ ಜನತೆಯ ಭಾವನೆಗೆ ಧಕ್ಕೆ ತರುವಂತಹ ನೋವಿನ ವಿಚಾರವಾಗಿದೆ ಎಂದು ಜಿಲ್ಲಾ ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ತಿಳಿಸಿದರು.
ಇಲ್ಲಿನ ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕಳೆದ 50ವರ್ಷಗಳ ಹಿಂದೆಯೇ ಈ ಪೈಸಾರಿ ಜಾಗವನ್ನು ಸರಕಾರ ತಮ್ಮ ಸುಪರ್ದಿಗೆ ನೀಡಬೇಕೆಂದು, ಇದಕ್ಕೆ ತಗಲುವ ವೆಚ್ಚವನ್ನು ಪಾವತಿಸುವದಾಗಿ ವಿನಂತಿ ಮಾಡಿಕೊಂಡಿದ್ದರೂ ಸರಕಾರ ಇದಕ್ಕೆ ಸ್ಪಂಧಿಸದೆ ದಿಢೀರ್ ಆಗಿ ಜಾಗಕ್ಕೆ ಆಗಮಿಸಿ ಈ ಜಾಗವನ್ನು ನೀಡಬೇಕೆಂದು ಪಟ್ಟು ಹಿಡಿಯವದರಲ್ಲಿ ಅರ್ಥವಿಲ್ಲ ಎಂದರು.
ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರು, ಜನ ಪ್ರತಿನಿಧಿಗಳು ರಾಜಕೀಯ ರಹಿತವಾಗಿ ಇದನ್ನು ಬಗೆಹರಿಸಿ ಮಾಜಿ ಸೈನಿಕರಿಗೆ ನ್ಯಾಯ ಒದಗಿಸಿ ಕೊಡಬೇಕು. ಈ ನಿಟ್ಟಿನಲ್ಲಿ ಇದೇ ತಿಂಗಳು ಇಪ್ಪತ್ತರಂದು ಮಡಿಕೇರಿಯಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಗೆ ಕೊಡಗು ಜಿಲ್ಲಾ ಜಾತ್ಯತೀತ ಜನತಾದಳ ಪೂರ್ಣ ಬೆಂಬಲ ನೀಡಲಿದೆ ಎಂದರು.
ಗೋಷ್ಠಿಯಲ್ಲಿ ಪಟ್ಟಣ ಪಂಚಾಯಿತಿಯ ಹಿರಿಯ ಸದಸ್ಯ ಹಾಗೂ ಪಕ್ಷದ ಜಿಲ್ಲಾ ಮುಖಂಡ ಎಸ್.ಎಚ್. ಮತೀನ್, ಜಿಲ್ಲಾ ಮುಖಂಡರಾದ ಸಿ.ಎ. ನಾಸೀರ್, ಮನಸೂರು ಅಹಮ್ಮದ್, ಎಚ್.ಜಿ. ಗೋಪಾಲ್ ಹಾಗೂ ಅಫ್ತಾಬ್ ಆಲಿ ಉಪಸ್ಥಿತರಿದ್ದರು.