ಮಡಿಕೇರಿ, ಜ. 12: ದೇಶಾಭಿಮಾನ ಮತ್ತು ಭಾಷಾಭಿಮಾನ ಇಲ್ಲದವರು ಬದುಕಿದ್ದೂ ಸತ್ತಂತೆ ಎಂದು ಇಬ್ಬರು ಪುತ್ರರನ್ನು ದೇಶಸೇವೆಯಲ್ಲಿ ತೊಡಗಿಸಿರುವ ಕಡಗದಾಳುವಿನ ಎಂ.ಎಂ. ಭವಾನಿ ಹೇಳಿದರು.

ಅವರು ಇಂದು ಸ್ವಾಮಿ ವಿವೇಕಾನಂದ ಜನ ಸೇವಾ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ತಮ್ಮ ಇಬ್ಬರು ಪುತ್ರರಾದ ಎಂ.ಎಂ. ಶ್ಯಾಂ ಕುಮಾರ್ ಮತ್ತು ಎಂ.ಎಂ. ಪ್ರಶಾಂತ್ ಅವರನ್ನು ಭಾರತೀಯ ಸೇನೆಗೆ ಸೇರಿಸಿ ಹೆಮ್ಮೆಯ ಮಾತನಾಡಿದ ಅವರು ಮನುಷ್ಯನಿಗೆ ಸಾವು ಹೇಗೂ ಸಹಜವಾಗಿದ್ದು, ಅಂತಹ ಸಾವು ದೇಶಸೇವೆಯ ಸಂದರ್ಭವಾದರೆ ವೀರೋಚಿತ ವಾದುದು ಎಂದು ಆದರ್ಶದ ನುಡಿಯಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಕ್ತಿ ದಿನಪತ್ರಿಕೆಯ ಬಿ.ಜಿ. ಅನಂತ ಶಯನ ಅವರು ಭಗವಂತನೆಂಬ ಶಕ್ತಿ ಪ್ರತಿಯೊಬ್ಬರ ಹೃದಯದಲ್ಲಿ ನೆಲೆಸಿದ್ದು, ಧರ್ಮವು ಪ್ರೀತಿ, ಪ್ರೇಮವನ್ನು ಅವಲಂಭಿಸಿದೆ ಎಂಬ ವಿವೇಕಾನಂದರ ನುಡಿಯನ್ನು ಸ್ಮರಿಸಿದರು.

ಮುಖ್ಯ ಅತಿಥಿಗಳಾಗಿದ್ದ ಭಾರತ್ ವಿಕಾಸ್ ಪರಿಷತ್ತಿನ ಅಧ್ಯಕ್ಷ ಧನಂಜಯ ಅಗೋಳಿಕಜೆ ಮಾತನಾಡಿ, ಭಾರತವು ಅಜ್ಞಾನಿಗಳ, ಭಿಕ್ಷುಕರ, ಕಾಡುನಿವಾಸಿಗಳ ಬೀಡೆಂದು ಇದ್ದ ಅಪವಾದವನ್ನು ಅಮೇರಿಕಾಕ್ಕೆ ತೆರಳಿ ವಿದೇಶಿಯರನ್ನು ಮಾತಿನ ಮೋಡಿಯಲ್ಲಿ ಬೆರಗು ಗೊಳಿಸಿ ಹೆಮ್ಮೆ ತಂದ ಅಪೂರ್ವ ವ್ಯಕ್ತಿತ್ವ ವಿವೇಕಾನಂದರದು ಎಂದರು.

ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಎಂ.ಜೆ. ಗಂಗಮ್ಮ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಎಂ.ಎಂ. ಭವಾನಿ ಮಾತನಾಡಿ, ಭಾರತದ ನವನಿರ್ಮಾಣದಲ್ಲಿ ತೊಡಗಿಸಿಕೊಂಡ ಯುಗಪುರುಷ ವಿವೇಕಾನಂದರು ಎಂದು ವಿವರಿಸಿದರು.

ಸ್ವಾಮಿ ವಿವೇಕಾನಂದ ಜನಸೇವಾ ಸಂಘದ ಅಧ್ಯಕ್ಷ ಕೆ.ಎಸ್. ಗಣೇಶ್ ಅವರು ಮಾತನಾಡಿ, ವಿವೇಕಾನಂದರ ವಿಗ್ರಹ ಸ್ಥಾಪನೆಗೆ ಮಡಿಕೇರಿಯಲ್ಲಿ ಯತ್ನಿಸುತ್ತಿರುವದಾಗಿ ಹೇಳಿದರು. ಸಂಘದ ಮೂಲಕ ಸೂರು ರಹಿತರಿಗೆ ಜಾಗಕ್ಕಾಗಿ ಯತ್ನಿಸುತ್ತಿರುವದಾಗಿಯೂ ಹೇಳಿದರು. ಸಂಘದ ಕಾರ್ಯದರ್ಶಿ ಆರ್. ರಾಮಸ್ವಾಮಿ ನಿರೂಪಣೆ ಮಾಡಿದರು. ಸದಸ್ಯರಾದ ಮಹೇಶ್, ಸುಜನ್, ಆನಂದ ಹಾಗೂ ಮಿಥುನ್ ಹಾಜರಿದ್ದರು.