ನಾಪೋಕ್ಲು, ಡಿ. 24: ನಿರಂತರ ಅಭ್ಯಾಸದಿಂದ ಸಾಧನೆ ಸಾಧ್ಯವಾಗಿದ್ದು ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸುವ ಸಾಮಥ್ರ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಕಾಫಿ ಮಂಡಳಿ ಸದಸ್ಯ ಹಾಗೂ ಕೊಂಗಂಡ ಸುಬ್ಬಯ್ಯ ಮುದ್ದಯ್ಯ ಟ್ರಸ್ಟ್‍ನ ಸಂಚಾಲಕ ಡಾ. ಸಣ್ಣುವಂಡ ಕಾವೇರಪ್ಪ ಹೇಳಿದರು.

ಇಲ್ಲಿಗೆ ಸಮೀಪದ ಬೇತು ಗ್ರಾಮದ ಎಕ್ಸೆಲ್ ಸ್ಕೂಲ್ ಆಫ್ ಎಜುಕೇಶನ್ ಹಾಗೂ ಕೊಂಗಂಡ ಸುಬ್ಬಯ್ಯ ಮುದ್ದಯ್ಯ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿದ್ದ ನವೋದಯ ಪ್ರವೇಶ ಪರೀಕ್ಷೆಯ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಗಳಿಸಲು ವಿದ್ಯಾರ್ಥಿಗಳು ನಿರಂತರ ಅಭ್ಯಾಸ ಮಾಡಬೇಕು. ಆಂಗ್ಲ ಭಾಷೆಯಲ್ಲಿ ಪರಿಣತಿಯನ್ನು ಹೊಂದಬೇಕು ಎಂದರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಕ್ಕಳನ್ನು ಸಜ್ಜುಗೊಳಿಸು ವಲ್ಲಿ ಪೋಷಕರ ಪಾತ್ರ ಮುಖ್ಯ ವಾದುದು ಎಂದು ಅಭಿಪ್ರಾಯಪಟ್ಟರು.

ಕೊಡಗಿನ ಮೂಲನಿವಾಸಿಗಳಾದ ಯರವರು, ಕುರುಬರು ಅವನತಿಯ ಹಾದಿಯಲ್ಲಿದ್ದು ಆ ಜನಾಂಗದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿದ್ದರೆ ಅವರ ಶೈಕ್ಷಣಿಕ ಅಭಿವೃದ್ಧಿಗಾಗಿ ವಿದ್ಯಾಭ್ಯಾಸದ ಸಂಪೂರ್ಣ ಖರ್ಚು ಭರಿಸಲಾಗುವದು. ಪ್ರತಿಭಾವಂತ ಮಕ್ಕಳು ಅಥವಾ ಅವರ ಪೋಷಕರು ತನ್ನನ್ನು ಸಂಪರ್ಕಿಸಬಹುದು ಎಂದು ಕಾವೇರಪ್ಪ ಹೇಳಿದರು.

ಎಕ್ಸೆಲ್ ಸ್ಕೂಲ್ ಆಫ್ ಎಜುಕೇಶನ್‍ನ ಅಧ್ಯಕ್ಷ ಕುಟ್ಟಂಜೆಟ್ಟೀರ ಮಾದಪ್ಪ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಸಿ.ಎಸ್. ಸುರೇಶ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಶರತ್ ವಂದಿಸಿದರು.