ಸೋಮವಾರಪೇಟೆ, ಡಿ. 24: ಹಿಂದೂ ಸಮಾಜದ ಪ್ರಮುಖರ ಮೇಲೆ ಆಗಾಗ್ಗೆ ಧಾಳಿಗಳು ನಡೆಯುತ್ತಿರುವದರ ವಿರುದ್ಧ ಹಿಂದೂ ಹಿತರಕ್ಷಣಾ ಸಮಿತಿಯ ವತಿಯಿಂದ ತಾ. 26ರಂದು ಸೋಮವಾರಪೇಟೆಯಲ್ಲಿ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗೆ ಭಾರತೀಯ ಜನತಾ ಪಾರ್ಟಿಯ ವಿವಿಧ ಮೋರ್ಚಾಗಳು ಬೆಂಬಲ ನೀಡಿವೆ ಎಂದು ಬಿಜೆಪಿ ವಕ್ತಾರ ಕೆ.ಜಿ. ಸುರೇಶ್ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಹಿಂದೂ ಸಮಾಜದ ಮೇಲೆ ನಿರಂತರ ಆಕ್ರಮಣಗಳು ನಡೆಯುತ್ತಲೇ ಇವೆ. ರಾಜ್ಯದಾದ್ಯಂತ ಹಿಂದೂ ಪರಿವಾರ ಸಂಘಟನೆಗಳ ಕಾರ್ಯಕರ್ತರ ಮೇಲೆ ಹಲ್ಲೆ, ಹತ್ಯೆ, ಹತ್ಯೆ ಯತ್ನದಂತಹ ಪ್ರಕರಣಗಳು ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಯಾವದೇ ಕಠಿಣ ಕ್ರಮ ಜರುಗಿಸದೇ ನಿರ್ಲಕ್ಷ್ಯ ವಹಿಸಿದೆ ಎಂದು ಸುರೇಶ್ ಆರೋಪಿಸಿದರು.

ಇತ್ತೀಚಿನ ದಿನಗಳಲ್ಲಿ ಕೊಡಗಿನಲ್ಲೂ ಸಮಾಜ ದ್ರೋಹಿಗಳ ಹಾವಳಿ ಮಿತಿಮೀರುತ್ತಿದ್ದು, ಇದನ್ನು ಮಟ್ಟಹಾಕಬೇಕಾದ ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆಯನ್ನು ಬಿಗಿಗೊಳಿಸುತ್ತಿಲ್ಲ. ಈ ಹಿನ್ನೆಲೆ ಇಡೀ ಸಮಾಜದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ತಾ. 26 ರಂದು ಸೋಮವಾರಪೇಟೆಯಲ್ಲಿ ನಡೆಯಲಿರುವ ಪ್ರತಿಭಟನೆಗೆ ಬಿಜೆಪಿ ಸೇರಿದಂತೆ ವಿವಿಧ ಮೋರ್ಚಾಗಳು ಸಂಪೂರ್ಣ ಬೆಂಬಲ ನೀಡಲಿವೆ ಎಂದರು.

ಮಹಿಳಾ ಮೋರ್ಚಾದ ಸದಸ್ಯರೂ ಸಹ ಪ್ರತಿಭಟನೆಯಲ್ಲಿ ಭಾಗವಹಿಸುವದಾಗಿ ಗೋಷ್ಠಿಯಲ್ಲಿದ್ದ ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ನಳಿನಿ ಗಣೇಶ್ ತಿಳಿಸಿದರು. ಗೋಷ್ಠಿಯಲ್ಲಿ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ ಉಪಸ್ಥಿತರಿದ್ದರು.