ಮಡಿಕೇರಿ, ಜ. 30: ಅಂಹಿಸಾವಾದಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 69ನೇ ಪುಣ್ಯ ತಿಥಿಯನ್ನು ಹುತಾತ್ಮ ದಿನವನ್ನಾಗಿ ಆಚರಿಸುವದರ ಮೂಲಕ ಮಡಿಕೇರಿ ನಗರದಲ್ಲಿ ಶಾಂತಿ ದೂತನಿಗೆ ಗೌರವ ನಮನ ಸಲ್ಲಿಸಲಾಯಿತು.ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಖಜಾನೆಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಚಿತಾಭಸ್ಮಕುಂಡವನ್ನು ಗಣ್ಯರ ಉಪಸ್ಥಿತಿಯಲ್ಲಿ ಹಿರಿಯ ಅಧಿಕಾರಿಗಳು, ಸರ್ವೋದಯ ಸಮಿತಿ ಪದಾಧಿಕಾರಿಗಳು, ಪೊಲೀಸ್ ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳದ ವಿದ್ಯಾರ್ಥಿಗಳು, ಪೊಲೀಸ್ ವಾದ್ಯದೊಂದಿಗೆ ಜ. ತಿಮ್ಮಯ್ಯ ವೃತ್ತದ ಮೂಲಕ ಗಾಂಧಿ ಮೈದಾನದವರೆಗೆ ಮೆರವಣಿಗೆ ಮೂಲಕ ಕೊಂಡೊಯ್ದು ಗಾಂಧಿ ಮಂಟಪದಲ್ಲಿ ಚಿತಾಭಸ್ಮವನ್ನಿರಿಸಿ ಬಾಪೂಜಿಯ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಲಾಯಿತು.

ಜಿಲ್ಲಾ ಪೊಲೀಸ್ ತಂಡದಿಂದ ಮೂರು ಸುತ್ತು ಕುಶಲತೋಪು ಹಾರಿಸುವ

(ಮೊದಲ ಪುಟದಿಂದ) ಮೂಲಕ ಗೌರವಾರ್ಪಣೆ ಸಲ್ಲಿಸ ಲಾಯಿತು. ನೆರೆದಿದ್ದ ಗಣ್ಯರು, ವಿದ್ಯಾರ್ಥಿಗಳು, ಸಾರ್ವಜನಿಕರು ಮೌನಾಚರಣೆಯೊಂದಿಗೆ ರಾಷ್ಟ್ರಪಿತ ನಿಗೆ ಗೌರವ ನಮನ ಸಲ್ಲಿಸಿ ಶಾಂತಿ ಕೋರಿದರು.

ಸ್ಕೌಟ್ಸ್ ಮತ್ತು ಗೈಡ್ಸ್‍ನ ವಿದ್ಯಾರ್ಥಿಗಳು ರಾಷ್ಟ್ರಪಿತನಿಗೆ ಅತ್ಯಂತ ಪ್ರಿಯವಾಗಿದ್ದ ರಘುಪತಿ ರಾಘವ ರಾಜಾರಾಂ ಭಜನೆ ಹಾಡಿದರು. ಈ ಸಂದರ್ಭ ಸರ್ವಧರ್ಮ ಪ್ರಾರ್ಥನೆ ಸಲ್ಲಿಸ ಲಾಯಿತು.

ಈ ಸಂದರ್ಭ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಸರ್ವೋದಯ ಸಮಿತಿಯ ಅಧ್ಯಕ್ಷ ಟಿ.ಪಿ. ರಮೇಶ್, ಅಪರ ಜಿಲ್ಲಾಧಿಕಾರಿ ಎಂ. ಸತೀಶ್‍ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಸದಸ್ಯರಾದ ಜುಲೇಕಾಬಿ, ಲೀಲಾ ಶೇಷಮ್ಮ, ಪ್ರಕಾಶ್ ಆಚಾರ್ಯ, ಸಮಿತಿ ಸದಸ್ಯರಾದ ವಾಸು ಕುಟ್ಟಯ್ಯ, ಬೇಬಿ ಮ್ಯಾಥ್ಯೂ, ಅಂಬೆಕಲ್ ಕುಶಾಲಪ್ಪ, ಅಂಬೆಕಲ್ ನವೀನ್ ಕುಶಾಲಪ್ಪ, ಬಿ.ಎ. ರಾಮಯ್ಯ, ನಗರಸಭಾ ಆಯುಕ್ತೆ ಶುಭಾ, ಇತರ ಇಲಾಖೆಯ ಅಧಿಕಾರಿಗಳು ಹಾಗೂ ಇನ್ನಿತರರು ಇದ್ದರು.

ಈ ಸಂದರ್ಭ ಮಾತನಾಡಿದ ಸರ್ವೋದಯ ಸಮಿತಿ ಅಧ್ಯಕ್ಷ ಟಿ.ಪಿ. ರಮೇಶ್ ಅವರು ಗಾಂಧೀಜಿ ಚಿತಾಭಸ್ಮವನ್ನಿಡಲು ಗಾಂಧಿ ಸ್ಮಾರಕ ನಿರ್ಮಾಣಕ್ಕೆ ನೀಲಿ ನಕಾಶೆ ತಯಾರಿಸಿ ರೂ. 1 ಕೋಟಿ ಅನುದಾನದ ಬೇಡಿಕೆಯೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಲ್ಲಿಸಲಾಗಿದೆ. ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರ ಜೊತೆಗೂಡಿ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಲಾಗುವದು. ಈಗಾಗಲೇ ಜಿಲ್ಲೆಯಲ್ಲಿ ಗಾಂಧಿ ಸ್ಮಾರಕ ಭವನ ನಿರ್ಮಾಣಕ್ಕೆ ರೂ. 2 ಕೋಟಿ ಅನುದಾನ ಕಲ್ಪಿಸಲಾಗಿದೆ. ಅಲ್ಲಿಯೇ ಗಾಂಧೀಜಿ ಚಿತಾಭಸ್ಮವನ್ನಿಡಲು ವ್ಯವಸ್ಥೆ ಕಲ್ಪಿಸಲಾಗುವದೇ ಎಂಬದರ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡು ಮುಂದಿನ ಕ್ರಮ ನಿರ್ಧರಿಸಲಾಗುವದು ಎಂದು ಹೇಳಿದರು.