ಸೋಮವಾರಪೇಟೆ,ಜ.30: ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರ ಕೊಡಗು ಜಿಲ್ಲೆಯನ್ನು ಕಡೆಗಣಿಸುತ್ತಲೇ ಬಂದಿದೆ. 4 ವರ್ಷದಲ್ಲಿ 200ಕೋಟಿ ವಿಶೇಷ ಪ್ಯಾಕೇಜ್ ಅನುದಾನ ಘೋಷಿಸಿ ಕೇವಲ 16 ಕೋಟಿ ನೀಡಿದ್ದೇ ಕಾಂಗ್ರೆಸ್‍ನ ಸಾಧನೆಯಾಗಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಆರೋಪಿಸಿದರು.
ನಗರದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ರಾಜ್ಯ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿ, ಇಲ್ಲಿನ ಜೇಸೀ ವೇದಿಕೆಯಲ್ಲಿ ಪಕ್ಷದ ಕಾರ್ಯಕರ್ತ ರನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಾಲ್ಕು ಬಾರಿ ವಿಶೇಷ ಪ್ಯಾಕೇಜ್ ಘೋಷಿಸಿದ ಸರ್ಕಾರ ತಲಾ 50 ಕೋಟಿಯಂತೆ 200 ಕೋಟಿ ನೀಡುವದಾಗಿ ಹೇಳಿತ್ತು. ಇದರಲ್ಲಿ ಕೇವಲ 16 ಕೋಟಿಯನ್ನು ಮಾತ್ರ ಬಿಡುಗಡೆ ಮಾಡಿದೆ. ಕಾಂಗ್ರೆಸ್ ಸರ್ಕಾರ ಕೊಡಗಿನ ಅಭಿವೃದ್ಧಿಯನ್ನು ಕಡೆಗಣಿಸಿದೆ. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಜಿಲ್ಲೆಯ ಅಭಿವೃದ್ಧಿಗೆ 1800 ಕೋಟಿ ನೀಡಲಾಗಿತ್ತು. ಈಗಿನ ಸರ್ಕಾರದಿಂದ ಅನುದಾನ ನಿರೀಕ್ಷೆಯೂ ಹುಸಿಯಾಗಿದೆ ಎಂದರು.
ಯಡಿಯೂರಪ್ಪ ಮುಖ್ಯಮಂತ್ರಿ ಯಾಗಿದ್ದ ಸಂದರ್ಭ ಬಿಪಿಎಲ್ ಕಾರ್ಡ್‍ದಾರರಿಗೆ 2 ರೂ.ನಂತೆ 30 ಕೆ.ಜಿ. ಅಕ್ಕಿ ನೀಡಲಾಗುತ್ತಿತ್ತು. ಈಗಿನ ಸರ್ಕಾರ ಮೊದಲು ಉಚಿತ ಎಂದು ಹೇಳಿ ಇದೀಗ ಕೇವಲ 4 ಕೆ.ಜಿ. ಅಕ್ಕಿ ನೀಡುತ್ತಿದೆ. ಯಶಸ್ವಿನಿ ಯೋಜನೆಯಡಿ ರೈತರಿಗೆ ಉಚಿತ ಚಿಕಿತ್ಸೆಯೂ ಮರೀಚಿಕೆಯಾಗಿದೆ. ಅವೈಜ್ಞಾನಿಕ ಯೋಜನೆಗಳ (ಮೊದಲ ಪುಟದಿಂದ) ಮೂಲಕ ಸರ್ಕಾರದ ಖಜಾನೆ ಖಾಲಿಯಾಗುತ್ತಿದೆ. ಟಿಪ್ಪು ಜಯಂತಿಗೆ ಕೋಟ್ಯಾಂತರ ಹಣ ವಿನಿಯೋಗಿಸುವ ಸರ್ಕಾರಕ್ಕೆ ರೈತರ ಸಾಲಮನ್ನಾ ಮಾಡಲೂ ಸಾಧ್ಯವಿಲ್ಲದಂತಾಗಿದೆ ಎಂದರು.
ಬಡ ರೈತರು ಒತ್ತುವರಿ ಮಾಡಿಕೊಂಡಿದ್ದ ಜಾಗಕ್ಕೆ ಅಕ್ರಮ ಸಕ್ರಮ ಅಡಿಯಲ್ಲಿ 7500 ಮಂದಿಗೆ ಹಕ್ಕುಪತ್ರ ನೀಡಲಾಗಿತ್ತು. ಇದರಲ್ಲಿ 1500ಕ್ಕೂ ಅಧಿಕ ಮಂದಿಯ ಜಾಗವನ್ನು ವಾಪಸ್ ಪಡೆಯಲು ಸರ್ಕಾರ ಮುಂದಾಗುವ ಮೂಲಕ ರೈತವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದರು.
ಕಾಂಗ್ರೆಸ್ ತೊರೆದಿರುವ ಶ್ರೀನಿವಾಸ್‍ಪ್ರಸಾದ್ ಈಗಾಗಲೇ ಬಿಜೆಪಿಗೆ ಸೇರ್ಪಡೆಯಾಗಿದ್ದು, ಎಸ್.ಎಂ. ಕೃಷ್ಣ ಅವರೂ ಬಿಜೆಪಿ ಸೇರಲಿದ್ದಾರೆ. ಇದರೊಂದಿಗೆ ಜೆಡಿಎಸ್ ಪಕ್ಷದ 15ಕ್ಕೂ ಅಧಿಕ ಶಾಸಕರು ಯಡಿಯೂರಪ್ಪ ಅವರೊಂದಿಗೆ ಸಂಪರ್ಕದಲ್ಲಿದ್ದು, ಅವರುಗಳೂ ಸಹ ಬಿಜೆಪಿ ಸೇರಲಿದ್ದಾರೆ ಎಂದರು.