ಸೋಮವಾರಪೇಟೆ,ಡಿ.21: ಪಟ್ಟಣದ ಕಕ್ಕೆಹೊಳೆ ಸಮೀಪದ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಧರ್ಮಶಾಸ್ತನ ಮಂಡಲಪೂಜಾ ಪ್ರಯುಕ್ತ ತಾ. 25, 26ರಂದು ವಿಶೇಷ ಪೂಜೆಯೊಂದಿಗೆ ಮಹಾ ತುಪ್ಪಾಭಿಷೇಕ ನಡೆಯಲಿದೆ.
ದೇವಾಲಯ ಆಡಳಿತ ಮಂಡಳಿ ಸದಸ್ಯರುಗಳು ಬುಧವಾರ ಬೆಳಗ್ಗೆ ತುಪ್ಪ ತುಂಬಿದ ಕಳಶವನ್ನು ತಂದು ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಮಹಾ ತುಪ್ಪಾಭಿಷೇಕಕ್ಕೆ ತುಪ್ಪ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಿದರು. ತುಪ್ಪಾಭಿಷೇಕಕ್ಕೆ ತುಪ್ಪವನ್ನು ಅರ್ಪಿಸುವ ಭಕ್ತರು ದೇವಾಲಯದ ಗುಡಿಯಲ್ಲಿ ಅರ್ಪಿಸಬಹುದೆಂದು ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ. ವಿನೋದ್ ತಿಳಿಸಿದ್ದಾರೆ.
ಮಂಡಲಪೂಜಾ ಅಂಗವಾಗಿ ತಾ.25ರಂದು ಬೆಳಿಗ್ಗೆ ಗಣಪತಿ ಹೋಮ, ಪಂಚಗವ್ಯ, ಪರಿವಾರ ಪೂಜೆ, ಆಶ್ಲೇಷ ಬಲಿ ಹೋಮ ನಡೆಯಲಿದೆ. ಅಂದು ಸಂಜೆ ಚಂಡಿಕಾ ಪಾರಾಯಣ, ಆಶ್ಲೇಷ ಬಲಿ, ಲಕ್ಷಾರ್ಚನೆ ಸಮರ್ಪಣೆ ನಡೆದು ನಂತರ ಅನ್ನಸಂತರ್ಪಣೆ ನಡೆಯಲಿದೆ.
ತಾ.26ರಂದು ಬೆಳಗ್ಗೆ 4.30ರಿಂದ ಕ್ಷಿಪ್ರ ಗಣಪತಿ ಹೋಮ, ನಿರ್ಮಾಲ್ಯ ದರ್ಶನ, ಪ್ರಬಾತ್ ಸೇವೆ, ದೀಪಾರಾಧನೆ, ಉಷಪೂಜೆ, ಮಹಾದೀಪಾರಾಧನೆ ನಡೆದು ಬೆಳಗ್ಗೆ 9 ಗಂಟೆಗೆ ಮಹಾ ತುಪ್ಪಾಭಿಷೇಕ, 336 ಸೀಯಾಳಾಭಿಷೇಕ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕಗಳು ನಡೆಯಲಿದೆ. ಅಂದು ಸಂಜೆ ಪಡಿಪೂಜೆ ಹಾಗೂ ಪುಷ್ಪಾಭಿಷೇಕ, ಭಜನೆ, ಕರ್ಪೂರ ಜ್ಯೋತಿಯೊಂದಿಗೆ ಭಸ್ಮದ ಮಹಾ ಪ್ರದಕ್ಷಿಣೆ ನಡೆದು ಮಂಗಳಾರತಿಯ ನಂತರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.
ಮಂಡಲಪೂಜೆ, ಆಶ್ಲೇಷ ಹೋಮ, ಆಶ್ಲೇಷ ಬಲಿ, ಪಡಿಪೂಜೆ, ವಿವಿಧ ಅಭಿಷೇಕಕ್ಕೆ ಭಕ್ತಾದಿಗಳಿಗೆ ಸೇವಾರ್ಥ ಮಾಡಿಸಲು ಅವಕಾಶ ಮಾಡಿಕೊಡಲಾಗಿದ್ದು ಸೇವಾರ್ಥ ಮಾಡಬಯಸುವವರು ದೇವಾಲಯ ಅರ್ಚಕರನ್ನು ಸಂಪರ್ಕಿಸಬಹುದೆಂದು ದೇವಾಲಯ ಸಮಿತಿ ಪ್ರ. ಕಾರ್ಯದರ್ಶಿ ಎನ್.ಟಿ. ಪ್ರಸನ್ನ ತಿಳಿಸಿದ್ದಾರೆ.