ಮಡಿಕೇರಿ, ಜ.27 : ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ಇದರ ನೆನಪಿಗಾಗಿ ಹೊರತರಲಾಗುತ್ತಿರುವ ‘ಸದಾಸ್ಮಿತ’ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮ ತಾ.28 ರಂದು (ಇಂದು) ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಭಿನಂದನಾ ಸಮಿತಿಯ ಪ್ರಮುಖ ಜಿ.ಎಂ. ಮಣಿಕುಮಾರ್ ಹಾಗೂ ಚಿಲ್ಲನ ಗಣಿ ಪ್ರಸಾದ್ ಸಮಾರಂಭದ ಕುರಿತು ಮಾಹಿತಿ ನೀಡಿದರು. ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವರಾಗಿರುವ ಸದಾನಂದ ಗೌಡ ಅವರ ರಾಜಕೀಯ ಹಾಗೂ ಜೀವನ ಪಕ್ಷಿನೋಟ ವನ್ನೊಳಗೊಂಡ ಅಭಿನಂದನಾ ಗ್ರಂಥವನ್ನು ಪ್ರಕಟಿಸಲಾಗಿದ್ದು, ಸಂಜೆ 5 ಗಂಟೆಗೆ ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ದಿವ್ಯಸಾನಿಧ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದೆ ಎಂದರು.

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ‘ಸದಾಸ್ಮಿತ’ ಅಭಿನಂದನಾ ಗ್ರಂಥವನ್ನು ಲೋಕಾರ್ಪಣೆ ಮಾಡುವರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ವೀರೇಂದ್ರ ಹೆಗ್ಗಡೆ ಅವರ ಉಪಸ್ಥಿತಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕøತರಾದ ಡಾ|| ಚಂದ್ರಶೇಖರ ಕಂಬಾರ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಹೆಚ್.ಕೃಷ್ಣಯ್ಯ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿ ದ್ದಾರೆ.

ಕಾರ್ಯಕ್ರಮದಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು, ಕೊಡಗಿನ ಜನರೂ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಯೆಂಕನ ಶಾಂತಿ ದೇವರಾಜು, ಚಿಲ್ಲನ ರವೀಂದ್ರ, ಬಾರಿಕೆ ಅಯ್ಯಪ್ಪ, ಹಾಗೂ ಪಾರೆಮಜಲು ಲಕ್ಷ್ಮಣ ಉಪಸ್ಥಿತರಿದ್ದರು.