ಶ್ರೀಮಂಗಲ, ಡಿ. 23: ಶ್ರೀಮಂಗಲ-ಪೊನ್ನಂಪೇಟೆ ಮುಖ್ಯ ರಸ್ತೆಯಲ್ಲಿ ಕೇರಳ ಬಸ್ ಬಲಬದಿಯ ಮೂಲಕ ಅತೀ ವೇಗದಲ್ಲಿ ಬಂದು, ಮುಂದೆ ಚಲಿಸುತ್ತಿದ್ದ ಟೆಂಪೋ ಟ್ರಾವಲರ್‍ನ ಹಿಂಭಾಗಕ್ಕೆ ಡಿಕ್ಕಿಯಾದ ಪರಿಣಾಮ ಟೆಂಪೋ ಟ್ರಾವೆಲ್ಲರ್ ವಿದ್ಯುತ್ ಕಂಬಕ್ಕೆ ಅಪ್ಪಳಿಸಿ ತೋಟದ ಬರೆಗೆ ಹತ್ತಿ ನಿಂತ ಘಟನೆ ನಡೆದಿದೆ.ಹುದಿಕೇರಿ ಸಮೀಪ ಬೇಗೂರು ಕೊಲ್ಲಿಯಲ್ಲಿ ಅಪಘಾತ ನಡೆದಿದ್ದು, ಸಮೀಪದಲ್ಲಿದ್ದ ಮನೆಯ ಮೇಲೆ ಬಸ್ಸು ಮಗುಚಿಕೊಳ್ಳುವದು ಸ್ವಲ್ಪದರಲ್ಲಿ ತಪ್ಪಿದೆ. ಬೆಂಗಳೂರಿನಿಂದ ಕೇರಳ ಕಡೆಗೆ ಬಸ್ಸು ಹಾಗೂ ಬೆಂಗಳೂರಿನಿಂದ ಇರ್ಪು ಜಲಪಾತ ವೀಕ್ಷಣೆಗೆ ಟೆಂಪೋ ಟ್ರಾವೆಲ್ಲರ್‍ನಲ್ಲಿ ಪ್ರವಾಸಿಗರು ತೆರಳುತ್ತಿದ್ದರು. ಶುಕ್ರವಾರ ಮುಂಜಾನೆ 4 ಗಂಟೆಗೆ ಅಪಘಾತ ಸಂಭವಿಸಿದೆ.

ಈ ಅಪಘಾತದಲ್ಲಿ ಅದೃಷ್ಟವಶಾತ್ ಪ್ರಾಯಾಣಿಕರಿಗೆ ಯಾವದೇ ಗಾಯಗಳಾಗಿಲ್ಲ. ಹಿಂಬದಿಯಿಂದ ಬಸ್ಸು ಡಿಕ್ಕಿಯಾದ ಪರಿಣಾಮ ವಿದ್ಯುತ್ ಕಂಬಕ್ಕೆ ಟೆಂಪೋ ಟ್ರಾವೆಲ್ಲರ್ ಗುದ್ದಿದ್ದು, ಗುದ್ದಿದ ರಭಸಕ್ಕೆ ವಿದ್ಯುತ್ ಕಂಬ ಮೂರು ತುಂಡಾಗಿದೆ. 11 ಕೆ.ವಿ. ವಿದ್ಯುತ್ ಮಾರ್ಗದ ತಂತಿಗಳು ವಾಹನದ ಮೇಲೆ ಬಿದ್ದಿದೆ. ಅಪಘಾತದ ಸಮಯ ಮಾರ್ಗದಲ್ಲಿ ವಿದ್ಯುತ್ ಇಲ್ಲದೇ ಇರುವದು ಹೆಚ್ಚಿನ ಹಾನಿಯಾಗಿಲ್ಲ.

ಗೋಣಿಕೊಪ್ಪಲು -ಹುದಿಕೇರಿ- ಶ್ರೀಮಂಗಲ ಹಾಗೂ ಕಾನೂರು -ಕುಟ್ಟ ಮಾರ್ಗದಲ್ಲಿ ಕೇರಳದ ಬಸ್ಸು ಹಾಗೂ ಇತರ ವಾಹನಗಳು ರಾತ್ರಿ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅತೀ ವೇಗದಲ್ಲಿ ಸಂಚರಿಸುತ್ತಿದ್ದು, ಅತೀ ವೇಗಕ್ಕೆ ಕಡಿವಾಣ ಹಾಕಬೇಕು. ರಾತ್ರಿ ವೇಳೆಯಲ್ಲಿ ಮದ್ಯಸೇವಿಸಿ ಅಜಾಗರುಕತೆಯ ವಾಹನ ಚಾಲನೆ ನಡೆಯುತ್ತಿದ್ದು, ಇದರಿಂದ ಎಷ್ಟೋ ಅಮಾಯಕರ ವಾಹನಗಳಿಗೆ ಡಿಕ್ಕಿ ಮಾಡಿ ಪ್ರಾಣ ಹಾನಿಯಾಗಿರುವ ಪ್ರಕರಣಗಳು ನಡೆಯುತ್ತಿದೆ. ಪೊಲೀಸರು ಕಟ್ಟುನಿಟ್ಟಾಗಿ ಅತೀ ವೇಗದ ಚಾಲನೆ ಹಾಗೂ ಮದ್ಯಸೇವಿಸಿ ವಾಹನ ಚಾಲನೆ ತಪಾಸಣೆÉಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಈ ಭಾಗದ ನಾಗರಿಕರು ಆಗ್ರಹಿಸಿದ್ದಾರೆ. ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.