ಶ್ರೀಮಂಗಲ, ನ. 2: ಟಿಪ್ಪು ಸುಲ್ತಾನ್ ಜಯಂತಿ ಆಚರಿಸುವ ಉದ್ದೇಶವನ್ನು ಪ್ರಶ್ನಿಸಿರುವ ಉಚ್ಛ ನ್ಯಾಯಾಲಯ ಟಿಪ್ಪು ಒಬ್ಬ ಸ್ವಾತಂತ್ರ್ಯ ಹೋರಾಟಗಾರನಲ್ಲ. ಆತ ಒಬ್ಬ ರಾಜ. ಎಲ್ಲ ರಾಜರಂತೆ ಟಿಪ್ಪು ಕೂಡ ತಮ್ಮ ಸಂಸ್ಥಾನ ಉಳಿಸಿಕೊಳ್ಳಲು ಯುದ್ಧ ಮಾಡಿದ್ದಾರೆ. ಟಿಪ್ಪು ಜಯಂತಿ ಆಚರಣೆಯಿಂದ ಸರಕಾರಕ್ಕೆ ತಲೆ ನೋವು. ಆದ್ದರಿಂದ ಟಿಪ್ಪು ಶಾಂತಿಯಿಂದ ವಿರಮಿಸಲಿ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಹೇಳಿದ್ದಾರೆ. ಈ ಮೂಲಕ ಟಿಪ್ಪು ಜಯಂತಿ ಆಚರಣೆಯ ಸರಕಾರದ ನಿಲುವಿಗೆ ಮುಖ್ಯ ನ್ಯಾಯಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.

ಟಿಪ್ಪು ಜಯಂತಿ ಆಚರಣೆಗೆ ತಡೆ ಕೋರಿ ಉಚ್ಛ ನ್ಯಾಯಾಲಯದಲ್ಲಿ ಸಮಾಜ ಸೇವಕ ಕೊಕ್ಕಲೆಮಾಡ ಮಂಜು ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬುಧವಾರ ವಿಚಾರಣೆಗೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ನ್ಯಾಯಮೂರ್ತಿ ಆರ್. ಬೂದಿಹಾಳ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ಟಿಪ್ಪು, ಆಗಿನ ರಾಜ್ಯ ಸಂಸ್ಥಾನದ ರಾಜ. ಅವನೇನು ಸ್ವತಂತ್ರ್ಯ ಹೋರಾಟಗಾರನಲ್ಲ ಎಂದು ಅಭಿಪ್ರಾಯ ಪಟ್ಟಿದ್ದು, ಅರ್ಜಿ ವಿಚಾರಣೆಯನ್ನು ತಾ. 3 ರಂದು (ಇಂದಿಗೆ) ಮುಂದೂಡಿದೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾಹಿತಿ ನೀಡಿದ ಅರ್ಜಿ ಪರ ವಕೀಲ ಪವನ್ ಚಂದ್ರ ಶೆಟ್ಟಿ ಅವರು, ಟಿಪ್ಪು ಬ್ರಿಟೀಷರ ವಿರುದ್ಧ ಅವನ ರಾಜ್ಯ, ಸಂಸ್ಥಾನ ಉಳಿಸಿಕೊಳ್ಳಲು ಹಾಗೂ ವಿಸ್ತರಿಸಲು ಹೋರಾಟ ಮಾಡಿದವನು. ಟಿಪ್ಪು ಸ್ವಂತ ಲಾಭಕ್ಕಾಗಿ ಯುದ್ಧ ಮಾಡಿದ್ದಾನೆ. ನಿಜಾಮರು ಸಹ ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ್ದರು. ಹಾಗೆಂದ ಮಾತ್ರಕ್ಕೆ ಅವರನ್ನು ಸ್ವಾತಂತ್ರ್ಯ ಹೋರಾಟಗಾರ ಎನ್ನಬಹುದೆ ಎಂದು ಸರಕಾರದ ಪರ ವಕೀಲರನ್ನು ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಪ್ರಶ್ನಿಸಿದರು ಎಂದು ತಿಳಿಸಿದರು.

ಈ ದೇಶ ನಿರಂಕುಶತ್ವ ಅಥವಾ ರಾಜರ ಆಡಳಿತಕ್ಕೆ ಒಳಪಟ್ಟಿಲ್ಲ. ಈ ಪ್ರಜಾಪ್ರಭುತ್ವ ದೇಶದಲ್ಲಿ ಈ ಆಚರಣೆಗಾಗಿ ಹಣ ಎಲ್ಲಿಂದ ತರುತ್ತೀರಿ.

(ಮೊದಲ ಪುಟದಿಂದ) ಜನರ ತೆರಿಗೆ ಹಣವನ್ನೆ ಬಳಸುತ್ತಿರಾ. ಇಷ್ಟು ಸಮಯ ಇಲ್ಲದ ಟಿಪ್ಪು ಜಯಂತಿ ಆಚರಣೆಯನ್ನು ಈಗ ಏಕೆ ಕೈಗೆತ್ತಿಕೊಂಡಿದ್ದಿರಿ. ಈ ಆಚರಣೆಯಿಂದ ಏನು ಪ್ರಯೋಜನ. ಜನರಿಗೆ ಹಾಗೂ ಈ ದೇಶಕ್ಕೆ ಏನು ಲಾಭ ಎಂದು ಮುಖ್ಯ ನ್ಯಾಯಮೂರ್ತಿಗಳು ಪ್ರಶ್ನಿಸಿದರು ಎಂದು ವಕೀಲ ಪವನ್ ಚಂದ್ರಶೆಟ್ಟಿ ಮಾಹಿತಿಯಿತ್ತರು. ಅರ್ಜಿದಾರರ ಪರ ವಕೀಲ ಪವನ್ ಚಂದ್ರ ಶೆಟ್ಟಿ ಅವರೊಂದಿಗೆ ಖ್ಯಾತ ವಕೀಲ ಸಜನ್ ಪೂವಯ್ಯ ವಕಾಲತ್ತು ವಹಿಸಿದ್ದು ವಿಶೇಷವಾಗಿತ್ತು.

ಸರಕಾರದ ಪರ ಅಡಿಷನಲ್ ಅಡ್ವೊಕೇಟ್ ಜನರಲ್ ಎ.ಎಸ್. ಪೊನ್ನಣ್ಣ ಹಾಗೂ ಇತರ ವಕೀಲರು ಹಾಜರಿದ್ದರು. ಅರ್ಜಿದಾರರಾದ ಹೈಸೊಡ್ಲೂರು ಗ್ರಾಮದ ಕೊಕ್ಕಲೆಮಾಡ ಮಂಜು ಹಾಗೂ ಕೊಡಗು ಜಿಲ್ಲೆಯಿಂದ ತೆರಳಿದ, ಬೆಂಗಳೂರಿನಲ್ಲಿ ನೆಲೆಸಿರುವ ಜಿಲ್ಲೆಯ ಸುಮಾರು 25ಕ್ಕೂ ಹೆಚ್ಚಿನ ಜನರು ನ್ಯಾಯಾಲಯದ ತೀರ್ಪನ್ನು ಕುತೂಹಲದಿಂದ ನಿರೀಕ್ಷಿಸುತ್ತಾ ನ್ಯಾಯಾಲಯದ ಆವರಣದಲ್ಲಿ ಹಾಜರಿದ್ದರು.

- ಹರೀಶ್ ಮಾದಪ್ಪ