ಮಡಿಕೇರಿ: ನ.2: ದೇಶದ ರಕ್ಷಣಾ ಪಡೆಗೆ ಕರ್ನಾಟಕದ ಪುಟ್ಟ ಜಿಲ್ಲೆಯಾದ ಕೊಡಗು ಅಮೂಲ್ಯ ಕೊಡುಗೆಯನ್ನು ನೀಡಿದೆ. ಸೇನಾ ಪಡೆಯ ಮೂರು ವಿಭಾಗಗಳ ಪ್ರಪ್ರಥಮ ಮಹಾದಂಡ ನಾಯಕರಾಗಿದ್ದವರು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರು ಇವರೊಂದಿಗೆ ಮತ್ತೊಬ್ಬ ಸೇನಾ ಧ್ರುವತಾರೆ ಪದ್ಮಭೂಷಣ ಜನರಲ್ ಕೆ.ಎಸ್. ತಿಮ್ಮಯ್ಯರಾದಿಯಾಗಿ ಅದೆಷ್ಟೋ ಮಂದಿ ಅಧಿಕಾರಿಗಳಾಗಿ ಸೈನಿಕರಾಗಿ ಭಾರತೀಯ ಸೇನೆಯಲ್ಲಿ ದುಡಿದಿದ್ದಾರೆ. ಈಗಲೂ ಸೇವೆ ಸಲ್ಲಿಸುತ್ತಿದ್ದಾರೆ. ಸೇನಾ ಪರಂಪರೆಯ ಮೂಲಕ ಕೊಡಗು ದೇಶದ ಭೂಪಟದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದೆ. ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಹಲವಾರು ಯೋಧರು ವೀರಮರಣಪಟ್ಟಿದ್ದಾರೆ. ಇಂತಹ ಮಹಾನ್ ತ್ಯಾಗ ಮಾಡಿದ ವೀರ ಸೈನಿಕರಿಗೆ ಗೌರವ ಸಲ್ಲಿಸುವದು ಎಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಕೊಡವ ಸಮಾಜಗಳ ಒಕ್ಕೂಟ (ಫೆಡರೇಷನ್ ಆಫ್ ಕೊಡವ ಸಮಾಜ) ಶ್ಲಾಘನೀಯ ಹೆಜ್ಜೆಯಿರಿಸಿದೆ. ಪ್ರಸ್ತುತ ಜಿಲ್ಲೆಯಲ್ಲಿ ಮಡಿಕೇರಿ ಹಾಗೂ ವೀರಾಜಪೇಟೆ ಯಲ್ಲಿ ಎರಡು ಯುದ್ಧ ಸ್ಮಾರಕಗಳಿವೆ. ಇತ್ತೀಚೆಗೆ ಭಾಗಮಂಡಲದಲ್ಲಿ ಒಂದು ಯುದ್ಧ ಸ್ಮಾರಕ ನಿರ್ಮಿಸಲಾಗಿದೆ. ಇದೀಗ ಫೆಡರೇಶನ್ ಆಫ್ ಕೊಡವ ಸಮಾಜ ಬಾಳುಗೋಡುವಿನಲ್ಲಿರುವ ಕೊಡವ ಸಾಂಸ್ಕøತಿಕ ಮತ್ತು ಕ್ರೀಡಾ ಸಮುಚ್ಛಯದಲ್ಲಿ ವಿಶೇಷ ರೀತಿಯಲ್ಲಿ ಯುದ್ಧ ಸ್ಮಾರಕವನ್ನು ನಿರ್ಮಿಸಿದ್ದು ಗೌರವ ಮೂಡಿಸುವಂತಿದೆ. ಖಾಸಗಿಯಾಗಿ ಸಂಸ್ಥೆಯೊಂದು ಈ ರೀತಿಯ ಯುದ್ಧ ಸ್ಮಾರಕ (ಒಚಿಡಿಣಥಿಡಿs) ನಿರ್ಮಿಸಿರುವದು ರಾಜ್ಯದಲ್ಲಿ ಇದೇ ಪ್ರಥಮವಾಗಿದೆ. ಇದು ಕೇವಲ ಕೊಡವ ಜನಾಂಗದಲ್ಲಿ ಮಡಿದವರಿಗೆ ಮಾತ್ರ ಮೀಸಲಾಗಿಲ್ಲ. ಕೊಡಗು ಜಿಲ್ಲೆಯಲ್ಲಿ ಎಲ್ಲಾ ಜಾತಿ-ಜನಾಂಗದಲ್ಲಿ ವೀರಮರಣ ಹೊಂದಿದ ಎಲ್ಲರ ಹೆಸರನ್ನು ಇಲ್ಲಿ ಅಳವಡಿಸಲಾಗಿದೆ.
ಸುಮಾರು 40x30 ಅಳತೆಯ ಪ್ರದೇಶದಲ್ಲಿ ಅಂದಾಜು 22 ಅಡಿ ಎತ್ತರದ ಸ್ತಂಭವನ್ನು ನಿರ್ಮಿಸಲಾಗಿದೆ. ಈ ಆವರಣವನ್ನು ಆಕರ್ಷಕ ಉದ್ಯಾನವನದ ಮಾದರಿಯಲ್ಲಿ ರೂಪಿಸಲಾಗಿದೆ. ಬೃಹತ್ ಯುದ್ಧ ಸ್ಮಾರಕದ ಸಹಿತ ನಾಲ್ಕು ಶಿಲೆಗಳನ್ನು ನಿರ್ಮಿಸಲಾಗಿದ್ದು, 4 1/2 ಅಡಿ ಎತ್ತರ 2ಳಿ ಅಡಿ ಅಗಲವಿರುವ ಈ ಶಿಲೆಯಲ್ಲಿ ಹುತಾತ್ಮರಾಗಿರುವ ಎಲ್ಲರ ಹೆಸರು ಮಾಹಿತಿಯನ್ನು ಅಳವಡಿಸಲಾಗಿದೆ.
1948ರಿಂದ 2011ರ ತನಕ ಅಧಿಕೃತವಾಗಿ ಸೇನಾ ಇಲಾಖೆಯ ಮೂಲಕ ದೊರೆತ ಮಾಹಿತಿಯಂತೆ ಒಟ್ಟು 44 ವೀರಯೋಧರ ಹೆಸರನ್ನು ಕೆತ್ತಲಾಗಿದೆ. ಇನ್ನೂ ಹಲವರ ಹೆಸರು ಇರುವ ಸಾಧ್ಯತೆಯಿದ್ದು, ಇದನ್ನು ಸಂಗ್ರಹಿಸಿ ದಾಖಲಿಸುವ ಚಿಂತನೆಯನ್ನು ಒಕ್ಕೂಟ ಹೊಂದಿದೆ.
ಉದ್ಯಾನದಲ್ಲಿ ಬೆಳೆಸಿರುವ ಗಿಡಗಳು ಈಗಾಗಲೇ ಸುಮಾರು 7 ಅಡಿಯಷ್ಟು ಎತ್ತರ ಬೆಳೆದಿದ್ದು ಈ ವೀರವನ ನೋಡುಗರ ಗಮನ ಸೆಳೆಯುತ್ತಿದೆ ಯಲ್ಲ್ಲದೆ.
ಹುತಾತ್ಮರ ಬಗ್ಗೆ ಗೌರವ ಭಾವನೆ ಮೂಡಿಸುವಂತಿದೆ.
(ಮೊದಲ ಪುಟದಿಂದ) ಈ ಆವರಣದಲ್ಲಿ ಕೂರಲು ಕಲ್ಲಿನ ಬೆಂಚು ವ್ಯವಸ್ಥೆ ಮಾಡಲಾಗಿದೆ.
ಈ ಹಿಂದೆ ಕೊಡವ ಸಮಾಜ ಒಕ್ಕೂಟದ ಅಧ್ಯಕ್ಷರಾಗಿದ್ದ ಮಲ್ಲೇಂಗಡ ದಾದಾ ಬೆಳ್ಯಪ್ಪ ಅವರ ಪರಿಕಲ್ಪನೆಯಂತೆ ಒಕ್ಕೂಟ ಈ ಹೆಜ್ಜೆ ಇರಿಸಿದೆ. ಇದಕ್ಕಾಗಿ ಸುಮಾರು ರೂ.20ಲಕ್ಷಕ್ಕೂ ಅಧಿಕ ಹಣ ಖರ್ಚಾಗಿದೆ. ಪಂಜಾಬ್ ಹೊರತುಪಡಿಸಿದರೆ ಕೊಡಗು ದೇಶದ ರಕ್ಷಣಾಪಡೆಗೆ ಹೆಚ್ಚು ಕಾಣಿಕೆ ನೀಡಿದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರನ್ನು ಯಾರೂ ಮರೆಯಬಾರದು. ಅವರ ಕೊಡುಗೆ ಸದಾ ಸ್ಮರಣೀಯವಾಗಿರಬೇಕು ಎಂಬ ಉದ್ದೇಶದಿಂದ ಯುದ್ಧ ಸ್ಮಾರಕ ನಿರ್ಮಿಸಿರುವದಾಗಿ ದಾದಾ ಬೆಳ್ಯಪ್ಪ ‘ಶಕ್ತಿ’ಯೊಂದಿಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಕೊಡಗು ಜಿಲ್ಲೆಯವರಾಗಿದ್ದು ಸೈನ್ಯದಲ್ಲಿ ಮಡಿದ ಎಲ್ಲಾ ಧರ್ಮದವರ ಹೆಸರನ್ನು ಇಲ್ಲಿ ಅಳವಡಿಸಲಾಗಿದೆ. ರಷ್ಯಾ, ಆಸ್ಟ್ರೇಲಿಯಾ ಅಮೇರಿಕಾದಂತಹ ರಾಷ್ಟ್ರಗಳಲ್ಲಿ ನಿರ್ಮಿಸಿರುವ ಯುದ್ಧ ಸ್ಮಾರಕಗಳನ್ನು ವೀಕ್ಷಿಸಿ ಆ ಮಾದರಿಯಲ್ಲಿ ಇಲ್ಲಿ ಪ್ರಯತ್ನ ನಡೆಸಲಾಗಿದೆ ಎಂದು ದಾದಾ ಬೆಳ್ಯಪ್ಪ ತಿಳಿಸಿದರು.
ತಾ.5ರಂದು ಲೋಕಾರ್ಪಣೆ
ಈ ಯುದ್ಧ ಸ್ಮಾರಕದ ಅಧಿಕೃತ ಉದ್ಘಾಟನೆ ತಾ.5ರಂದು ನೆರವೇರಲಿದೆ. ತಾ.4ರಿಂದ ಒಕ್ಕೂಟದ ವತಿಯಿಂದ ಬಾಳುಗೋಡುವಿನಲ್ಲಿ ಕೊಡವ ನಮ್ಮೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು ಎರಡನೇ ದಿನ ಯುದ್ಧ ಸ್ಮಾರಕ ಲೋಕಾರ್ಪಣೆಗೊಳ್ಳಲಿದೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್ ಸೀತಾರಾಮ್ ಲೆಫ್ಟಿನೆಂಟ್ ಜನರಲ್ ಕೋದಂಡ ಸೋಮಣ್ಣ(ನಿ) ಸೇರಿದಂತೆ ಜಿಲ್ಲೆಯ ಹಿರಿಯ ನಿವೃತ್ತ ಸೇನಾಧಿಕಾರಿಗಳು ಮಾಜಿ ಸೈನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಒಕ್ಕೂಟದ ಕಾರ್ಯದರ್ಶಿ ವಾಟೇರಿರ ಶಂಕರಿ ಅವರು ಮಾಹಿತಿ ನೀಡಿದ್ದಾರೆ.